ಹೆಲ್ಮೆಟ್‌ ಬೈಕ್‌ ಸವಾರರಿಗೆ ಪೊಲೀಸರಿಂದ ದಂಡದ ಬಿಸಿ

| Published : Nov 09 2024, 01:11 AM IST

ಸಾರಾಂಶ

ಮಸ್ಕಿ ಪಟ್ಟಣದಲ್ಲಿ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸುವಂತೆ ಪೊಲೀಸರು ಜಾಗೃತಿ ಮೂಡಿಸುವುದರ ಜೊತೆಗೆ ದಂಡದ ಬಿಸಿಯನ್ನು ಮುಟ್ಟಿಸಿದರು.

ಕನ್ನಡಪ್ರಭ ವಾರ್ತೆ ಮಸ್ಕಿ

ಬೈಕ್ ಸವಾರರಿಗೆ ಸರ್ಕಾರ ಹೆಲ್ಮೆಟ್ ಕಡ್ಡಾಯಗೊಳಿಸಿದ್ದರಿಂದ ಪೊಲೀಸರು ಜಾಗೃತಿ ಮೂಡಿಸಲು ಬೀದಿಗೆ ಇಳಿದಿದ್ದಾರೆ. ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುವವರಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸುವ ಕೆಲಸ ಪಟ್ಟಣದಲ್ಲಿ ನಡೆದಿದೆ.

ಪಿಎಸ್ಐ ಮುದ್ದುರಂಗಸ್ವಾಮಿ ನೇತೃತ್ವದಲ್ಲಿ ಹೆದ್ದಾರಿ ಮೇಲೆ ಬಿಡಾರ ಹೂಡಿರುವ ಪೊಲೀಸ ಸಿಬ್ಬಂದಿಗಳು ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿಕೊಂಡು ಓಡಾಡು ಸವಾರರನ್ನು ಹಿಡಿದು ದಂಡ ಹಾಕುವುದು ಅಲ್ಲದೇ ಹೆಲ್ಮೆಟ್ ಹಾಕಿಕೊಂಡು ಬೈಕ್ ಓಡಿಸುವಂತೆ ಬುದ್ದಿವಾದ ಹೇಳಿ ಕಳಿಸುತ್ತಿರುವ ದೃಶ್ಯ ಕಂಡು ಬಂದಿದೆ.

ಪ್ರತಿನಿತ್ಯ ನೂರಾರು ಬೈಕ್ ಗಳನ್ನು ಹಿಡಿದು ದಂಡ ಹಾಕುತ್ತಿದ್ದರಿಂದ ಬೈಕ್ ಸವಾರರು ಇದೀಗ ಹೆಲ್ಮೆಟ್ ಖರೀದಿಗೆ ಮುಂದಾಗಿದ್ದಾರೆ. ಹೆಲ್ಮೆಟ್ ಕಡ್ಡಾಯವಾದ ಹಿನ್ನೆಲೆಯಲ್ಲಿ ಪಟ್ಟಣದ ಕನಕವೃತ್ತ ಸೇರಿದಂತೆ ವಿವಿಧೆಡೆ ಬೀದಿಗಳಲ್ಲಿ ಹೆಲ್ಮೆಟ್ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಪೊಲೀಸರ ದಂಡದ ಬಿಸಿಯಿಂದ ಪಾರಾಗಲು ಬೈಕ್ ಸವಾರರು ಕನಕವೃತ್ತದ ಮುಂಭಾಗ ಬೀದಿಯಲ್ಲಿ ಹೆಲ್ಮೆಟ್ ಮಾರಾಟ ಮಾಡುತ್ತಿರುವ ಬೀದಿ ವ್ಯಾಪಾರಿ ಅಂಗಡಿ ಮುಂದೆ ಮುಗಿ ಬಿದ್ದಿದ್ದಾರೆ.

₹500 ರಿಂದ ₹800 ರವರೆಗೆ ಹೆಲ್ಮೆಟ್ ಮಾರಾಟವಾಗುತ್ತಿದ್ದು ಬೈಕ್ ಸವಾರರು ಎಷ್ಟಾದರೂ ಸರಿ ಖರೀದಿ ಪೊಲೀಸರು ಹಾಕುವ ದಂಡದಿಂದ ಪಾರಾಗಲು ಮುಂದಾಗಿದ್ದಾರೆ.

ಬೈಕ್ ಸವಾರರು ಹೆಲ್ಮೆಟ್ ಧರಿಸಿ ಬೈಕ್ ಓಡಿಸುವುದರಿಂದ ಅಪಘಾತದಲ್ಲಿ ಪ್ರಾಣಹಾನಿಯಾಗದೆ ಜೀವ ಉಳಿಸಿಕೊಳ್ಳಬಹುದು. ಪ್ರತಿಯೊಬ್ಬರೂ ಹೆಲ್ಮೆಟ್ ಕಡ್ಡಾಯವಾಗಿ ಬಳಸಿ ಎಂದು ಪೊಲೀಸರು ಮನವಿ ಮಾಡಿ ಆಟೋದಲ್ಲಿ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.