ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣ ಬಿಳಿಗಿರಿಂಗನ ಬೆಟ್ಟದಲ್ಲಿ ಬೀದಿ ದೀಪಗಳಿಲ್ಲದೆ ರಾತ್ರಿ ವೇಳೆಯಲ್ಲಿ ಸಾರ್ವಜನಿಕರು ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗಿದೆ. ತಾಲೂಕಿನ ಬಿಳಿಗಿರಂಗನ ಬೆಟ್ಟದ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗಿರಿಜನ ಹಾಡಿಗಳಲ್ಲಿ ಹಾಗೂ ಜನ ವಸತಿ ಕೇಂದ್ರಗಳಲ್ಲಿ ಬೀದಿ ದೀಪಗಳು ಕೆಟ್ಟು ಹೋಗಿ ತಿಂಗಳುಗಟ್ಟಲೆ ಕಳೆದರೂ ಕೂಡ ದೀಪಗಳನ್ನು ಸರಿಪಡಿಸದೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ.

ಅಂಬಳೆ ವೀರಭದ್ರನಾಯಕ

ಕನ್ನಡಪ್ರಭ ವಾರ್ತೆ ಯಳಂದೂರು

ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣ ಬಿಳಿಗಿರಿಂಗನ ಬೆಟ್ಟದಲ್ಲಿ ಬೀದಿ ದೀಪಗಳಿಲ್ಲದೆ ರಾತ್ರಿ ವೇಳೆಯಲ್ಲಿ ಸಾರ್ವಜನಿಕರು ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗಿದೆ. ತಾಲೂಕಿನ ಬಿಳಿಗಿರಂಗನ ಬೆಟ್ಟದ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗಿರಿಜನ ಹಾಡಿಗಳಲ್ಲಿ ಹಾಗೂ ಜನ ವಸತಿ ಕೇಂದ್ರಗಳಲ್ಲಿ ಬೀದಿ ದೀಪಗಳು ಕೆಟ್ಟು ಹೋಗಿ ತಿಂಗಳುಗಟ್ಟಲೆ ಕಳೆದರೂ ಕೂಡ ದೀಪಗಳನ್ನು ಸರಿಪಡಿಸದೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ.

ಬಿಳಿಗಿರಿರಂಗನ ಬೆಟ್ಟವೇ ಗ್ರಾಮ ಪಂಚಾಯತಿ ವ್ಯಾಪ್ತಿಗೆ 9 ಗಿರಿಜನ ಹಾಡಿಗಳು ವ್ಯಾಪ್ತಿಗೆ ಬರುತ್ತದೆ. ಬಿಳಿಗಿರಂಗನ ಬೆಟ್ಟದ ದೇವಾಲಯ ಆವರಣ ಹಾಗೂ ರಥದಬೀದಿ ಕಲ್ಯಾಣಿ, ರಾಘವೇಂದ್ರ ಮಠ, ಹೊಸಪೊಡು, ಬಂಗ್ಲೆ ಪೋಡು, ಯರಕನ ಗದ್ದೆ, ಸೇರಿದಂತೆ ಗಿರಿಜನ ಹಾಡಿಗಳಲ್ಲಿ ಸಮರ್ಪಕವಾದ ಬಿದ್ದಿ ದೀಪಗಳನ್ನು ಅಳವಡಿಸದೆ ಇರುವುದರಿಂದ ಸಾರ್ವಜನಿಕರು ರಾತ್ರಿ ಪಾಳಿಯಲ್ಲಿ ತಿರುಗಾಡುವುದು ಸಂಕಷ್ಟವಾಗಿದೆ.

ಗ್ರಾಮ ಪಂಚಾಯತಿ ಪಿಡಿಒ ಅವರಿಗೆ ಹಲವಾರು ಬಾರಿ ಗಿರಿಜನರು ಸೇರಿದಂತೆ ಸಾರ್ವಜನಿಕರು ಕೂಡ ಬೀದಿ ದೀಪ ಅಳವಡಿಸುವಂತೆ ಮನವಿ ಮಾಡಿದರು ಕೂಡ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಪ್ರಾಣಿ ಭಯ : ಬಿಳಿಗಿರಿರಂಗನಬೆಟ್ಟ ಹುಲಿ ರಕ್ಷಿತಾರಣವಾದ್ದರಿಂದ ಕಾಡುಪ್ರಾಣಿಗಳಾದ ಹುಲಿ, ಚಿರತೆ, ಆನೆಗಳು ಸಂಚಾರ ಮಾಡುವುದರಿಂದ ಆತಂಕದಲ್ಲಿ ಜನರು ತಿರುಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ಕಾಡಿನಲ್ಲಿ ಕೆರೆಕಟ್ಟೆಗಳಲ್ಲಿ ನೀರಿಲ್ಲದ ಕಾರಣ ಕಾಡುಪ್ರಾಣಿಗಳು ಜನ ವಸತಿ ಪ್ರದೇಶಗಳಿಗೆ ದಾಹ ತೀರಿಸಿಕೊಳ್ಳಲು ಬಂದು ಹೋಗುತ್ತಿದೆ. ಅಲ್ಲದೆ ಹಾನಿಗಳು ರಸ್ತೆ ಬದಿಗಳಲ್ಲಿ ಸಂಚಾರ ಮಾಡುವುದರಿಂದ ಕತ್ತಲೆಯಲ್ಲಿ ಕಾಣದೆದ್ದರಿಂದ ಸಾವು ನೋವು ಸಂಭವಿಸುವ ಸೂಚನೆಗಳಿದ್ದು ತಕ್ಷಣವೇ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಬೀದಿ ದೀಪ ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.

ಕೆಟ್ಟು ಹೋಗಿರುವ ಹೈ ಮಾಸ್ಕ್‌ ದೀಪ:

ಬಿಳಿಗಿರಿರಂಗನ ಬೆಟ್ಟದ ಪ್ರಮುಖ ಸ್ಥಳಗಳಲ್ಲಿ ಹೈಮಾಸ್ಕ್‌ ದ್ವೀಪ ಅಳವಡಿಸಿದರು ಕೂಡ ಸಮರ್ಪಕವಾಗಿ ನಿರ್ವಹಣೆ ಮಾಡದ ಪರಿಣಾಮ ಉರಿಯದೆ ಕೆಟ್ಟು ಹೋಗಿದೆ. ಇದರಿಂದಾಗಿ ರಾತ್ರಿ ವೇಳೆ ಪ್ರವಾಸಿಗರು ಮತ್ತು ಸ್ಧಳೀಯರು ಕತ್ತಲೆಯಲ್ಲೇಸಂಚರಿಸಬೇಕಾಗಿದೆ .

ಗಬ್ಬುನಾರುವ ಕಸದ ರಾಶಿ:

ಬಿಳಿಗಿರಿರಂಗನ ಬೆಟ್ಟದ ರೇಷ್ಮೆ ಇಲಾಖೆ ಹೋಗುವ ದಾರಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಸದರಾಶಿ ಸುರಿದು ಗಬ್ಬುನಾಡುತ್ತಿದೆ. ಅಲ್ಲದೆ ಕಸ ಸುರಿಯಲು ಸೂಕ್ತವಾದ ಜಾಗ ನಿಗದಿ ಮಾಡಿದರು ಕೂಡ ಆ ಕಸ ತೆಗೆಸುವಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ. ಇದರಿಂದ ಬಿಳಿಗಿರಂಗನ ಬೆಟ್ಟಕ್ಕೆ ಬರುವ ಪ್ರವಾಸಿಗರು ಮತ್ತು ಭಕ್ತಾದಿಗಳಿಗೆ ಕಿರಿಕಿರಿ ಅನುಭವಿಸುವಂತಾಗಿದೆ. ನೀರಿನ ಟ್ಯಾಂಕ್‌ಗಳಲ್ಲಿ ಶುಚಿತ್ವವಿಲ್ಲ : ಕುಡಿಯುವ ನೀರಿನ ಟ್ಯಾಂಕಗಳ ಸುತ್ತಮುತ್ತ ಸರಿಯಾದ ರೀತಿ ಸ್ವಚ್ಛತೆ ಇಲ್ಲದೆ ಗಬ್ಬುನಾರುತ್ತಿದೆ.

ಗ್ರಾಮ ಪಂಚಾಯತಿ ಪಿಡಿಓಗೆ ಕಸ ಮತ್ತು ನೀರಿನ ಸಮಸ್ಯೆ ಗಮನಕ್ಕೆ ತಂದರು ಕೂಡ ಗಮನ ಹರಿಸುವಲ್ಲಿ ವಿಫಲರಾಗಿದ್ದಾರೆ. ಸರ್ಕಾರ ಕಸ ತುಂಬಲು ವಾಹನ ನೀಡಿದರು ಕೂಡ ಸದ್ಬಳಕೆ ಮಾಡದೆ ನಿರ್ಲಕ್ಷ ವಹಿಸಿದ್ದಾರೆ ಎಂದು ಹೇಳುತ್ತಾರೆ ಬಿಳಗಿರಿರಂಗನ ಬೆಟ್ಟದ ರಂಗಮ್ಮ.

ಬಿಳಿಗಿರಿರಂಗನ ಬೆಟ್ಟದಲ್ಲಿ ಬೀದಿದೀಪ ಕೆಟ್ಟು ಹೋಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಶುಚಿತ್ವ ಕಾಪಾಡುವಂತೆ ನಾನು ಈಗಾಗಲೇ ಪಿಡಿಒ ಅವರಿಗೆ ಸೂಚನೆ ನೀಡುತ್ತೇನೆ ಎಂದುಯಳಂದೂರು ತಾಲೂಕು ಪಂಚಾಯಿತಿ ಇಒ ವೇಣು ಹೇಳಿದ್ದಾರೆ.