ವಿದ್ಯಾರ್ಥಿಗಳಿಗೆ ದುಶ್ಚಟ ಮುಕ್ತ, ಶಿಸ್ತು, ಗುರಿ, ತಲ್ಲೀನತೆ ಅಗತ್ಯ

| Published : Oct 14 2024, 01:23 AM IST

ವಿದ್ಯಾರ್ಥಿಗಳಿಗೆ ದುಶ್ಚಟ ಮುಕ್ತ, ಶಿಸ್ತು, ಗುರಿ, ತಲ್ಲೀನತೆ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲಿಷ್ಠರಾಗುವ ಮೂಲಕ ಶಿಸ್ತಿನ ಜೀವನ ಶೈಲಿಯನ್ನು ತಮ್ಮದಾಗಿಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಶಿಸ್ತಿನ ಜೀವನವನ್ನು ವಿದ್ಯಾರ್ಥಿ ದೆಸೆಯಿಂದಲೇ ರೂಡಿಸಿಕೊಳ್ಳಲು ಶಿಸ್ತು, ಗುರಿ, ತಲ್ಲೀನತೆ ಮತ್ತು ದುಶ್ಚಟಮುಕ್ತ ಎಂಬ ತತ್ತ್ವ ಸಹಕಾರಿ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಎಚ್.ಎನ್. ಗಿರೀಶ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಬಿಳಿಕೆರೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ 2024-25ನೇ ಸಾಲಿನ ಸಾಂಸ್ಕೃತಿಕ ಸಮಿತಿ ಸೇರಿದಂತೆ ವಿವಿಧ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲಿಷ್ಠರಾಗುವ ಮೂಲಕ ಶಿಸ್ತಿನ ಜೀವನ ಶೈಲಿಯನ್ನು ತಮ್ಮದಾಗಿಸಿಕೊಳ್ಳಬೇಕು. ಯುವಜನತೆ ಸಮಾಜಮುಖಿಯಾಗಲು ಪಠ್ಯ ಮತ್ತು ಪಠ್ಯೇತರ ವಿಷಯಗಳು ಹೇಗೆ ಸಹಾಯಕವಾಗುತ್ತವೆ ಎಂದು ಅವರು ತಿಳಿಸಿದರು.

ವಿದ್ಯುನ್ಮಾನ ಉಪಕರಣಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಹೇಗೆ ತಲುಪಬಹುದೆಂದು ಹಲವು ಉದಾಹರಣೆ ನೀಡಿದರು.

ಹುಣಸೂರಿನಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪುಟ್ಟಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಲವು ಕೊರತೆಗಳ ನಡುವೆ ಸಾಧಿಸಿರುವ ವಿಶೇಷಚೇತನ ಸಾಧಕರ ಬಗ್ಗೆ ತಿಳಿಸುತ್ತಾ ಸತತ ಪ್ರಯತ್ನದ ಮೂಲಕ ಯುವಜನತೆ ಸಾಧಕರಾಗುವ ಬಗೆಯನ್ನು ಹೇಳಿದರು.

2023-24ನೇ ಸಾಲಿನ ಕಾಲೇಜಿನ ವಾರ್ಷಿಕ ಸಂಚಿಕೆ ಅಕ್ಷರಾಮೃತವನ್ನು ಗಣ್ಯರು ಬಿಡುಗಡೆಗೊಳಿಸಿದರು.

ಕಾಲೇಜಿನ ಪ್ರಾಂಶುಪಾಲ ಎಂ.ಕೆ. ರಮೇಶ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಘಟಕಗಳ ಸಂಚಾಲಕಿ ಎಸ್.ವಿ. ಆಶಾರಾಣಿ, ಎಲ್. ಲೋಹಿತ್, ದೀಪಿಕಾ, ಡಾ.ಬಿ.ಎಸ್. ಯೋಗೇಶ ಮತ್ತು ಕಚೇರಿ ಅಧೀಕ್ಷಕ ಧರ್ಮಕುಮಾರ್ ಇದ್ದರು.