ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರುತಾಲೂಕಿನ ಬಿಳಿಕೆರೆ ಹೋಬಳಿ ವ್ಯಾಪ್ತಿಯಲ್ಲಿ 13.50 ಕೋಟಿ ರು. ಗಳ ವೆಚ್ಚದಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಿ.ಡಿ.ಹರೀಶ್ಗೌಡ ಗುದ್ದಲಿಪೂಜೆ ನೆರವೇರಿಸಿದರು.ತೆಂಕಲಕೊಪ್ಪಲು ಗ್ರಾಮದಲ್ಲಿ ಗುರುವಾರ 10 ಕೋಟಿ ರು. ವೆಚ್ಚದಡಿ 3.92 ಕಿ.ಮೀ. ಉದ್ದದ ತೆಂಕಲಕೊಪ್ಪಲು_ಚೋಳೇನಹಳ್ಳಿ-ಬೋಳನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.ಹುಸೇನ್ ಪುರ, ಶಿರಿಯೂರು ಮತ್ತು ರಾಯನಹಳ್ಳಿ ನಾಲೆಗಳ ಅಭಿವೃದ್ಧಿಗಾಗಿ ತಲಾ ಒಂದು ಕೋಟಿ ರು. ಗಳ ವೆಚ್ಚದಡಿ (ಒಟ್ಟು 3 ಕೋಟಿ ರು. ಗಳು) ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. 8.40 ಲಕ್ಷ ರು. ವೆಚ್ಚದಡಿ ತೆಂಕಲಕೊಪ್ಪಲು ಗ್ರಾಮದಲ್ಲಿ ಗ್ರಾಪಂ ಸುಪರ್ದಿಯ 2 ಮಾರಾಟ ಮಳಿಗೆಗಳು ಮತ್ತು ಕೊಮ್ಮೇಗೌಡನಕೊಪ್ಪಲು ಗ್ರಾಮದಲ್ಲಿ ಒಂದು ಮಾರಾಟ ಮಳಿಗೆಯನ್ನು ಉದ್ಘಾಟಿಸಿದರು.ಅಲ್ಲದೇ ಹುಸೇನ್ ಪುರ ಮತ್ತು ತೆಂಕಲಕೊಪ್ಪಲು ಗ್ರಾಮದಲ್ಲಿ ತಲಾ 8 ಲಕ್ಷ ರು. ವೆಚ್ಚದಡಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿದರು. ನಂತರ ತೆಂಕಲಕೊಪ್ಪಲು ಗ್ರಾಮದ ಗುರುಮಠ ಆವರಣದಲ್ಲಿ ಆಯೋಜನೆಗೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಹಲವು ಗ್ಯಾರಂಟಿ ಯೋಜನೆಗಳ ನಡುವೆಯೂ ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ಅಭಾಧಿತವಾಗಿ ನಡೆಯುವಂತೆ ಪ್ರತಿದಿನ ಸರ್ಕಾರದ ವಿವಿಧ ಇಲಾಖೆಗಳ ಸಚಿವರನ್ನು ಭೇಟಿಯಾಗಿ ಅನುದಾನ ತರುತ್ತಿದ್ದೇನೆ ಎಂದರು.ತಾಲೂಕಿನಲ್ಲಿ ಶಾಸಕರಿಂದ ಅನುದಾನ ತರಲು ಸಾಧ್ಯವಿಲ್ಲ ಎನ್ನುವ ಚರ್ಚೆಗಳು ನಡೆಯುತ್ತಿರುವುದನ್ನು ಬಲ್ಲೆ. ಆದರೆ ನನ್ನನ್ನು ಆರಿಸಿ ಶಾಸಕನನ್ನಾಗಿಸಿರುವ ಜನರ ಒಳಿತಿಗಾಗಿ ನಾನು ಅವಿರತ ಶ್ರಮಿಸುತ್ತಿದ್ದೇನೆ. ಮುಂದೆಯೂ ಶ್ರಮಿಸುತ್ತೇನೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಿಂದ ಆರಂಭಗೊಂಡು, ಲೋಕೋಪಯೋಗಿ, ನೀರಾವರಿ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಚಿವರನ್ನು ಸತತ ಭೇಟಿಯಾಗುತ್ತಲೇ ತಾಲೂಕಿನ ಸಮಸ್ಯೆಗಳ ಕುರಿತು ಮಾಹಿತಿ ನೀಡಿ ಅನುದಾನ ಪಡೆಯತ್ತಿದ್ದೇನೆ ಎಂದರು. ಮನತುಂಬಿ ಬಂದಿದೆ ವಾರದ ಹಿಂದೆ ನನ್ನ 38ನೇ ಹುಟ್ಟುಹಬ್ಬದ ಅಂಗವಾಗಿ ತಾಲೂಕಿನ ಜನತೆ, ಪಕ್ಷದ ಕಾರ್ಯಕರ್ತರು ತೋರಿದ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ಪಕ್ಷದ ಮುಖಂಡರು ಆಂಬ್ಯುಲೆನ್ಸ್ ಕೊಡುಗೆ, ಅನಾಥ ಶವಗಳಿಗೆ ಮುಕ್ತಿ ನೀಡುತ್ತಿದ್ದ ಆಟೋ ಚಾಲಕನಿಗೆ ಹೊಸ ಆಟೋ ಕೊಡುಗೆ, ವೃದ್ಧರಿಗೆ ಕನ್ನಡಕ, ಮಹಿಳೆಯರಿಗೆ ಹೊಲಿಗೆ ಯಂತ್ರ ಹೀಗೆ ವಿವಿಧ ಸಾಮಾಜಿಕ ಸೇವೆಯನ್ನು ನೀಡುವ ಮೂಲಕ ನನ್ನ ಹುಟ್ಟುಹಬ್ವವನ್ನು ಸಾರ್ಥಕ ಕಾರ್ಯವನ್ನಾಗಿಸಿದ್ದಾರೆ. ಜನರ ಪ್ರೀತಿಗೆ ಚ್ಯುತಿ ಬಾರದಂತೆ ಮುಂದೆಯೂ ತಾಲೂಕಿನ ಅಭಿವೃದ್ಧಿಗೆ ದುಡಿಯತ್ತೇನೆ ಎಂದು ತಿಳಿಸಿದರು.ಮೈಮುಲ್ ನಿರ್ದೇಶಕ ಕೆ.ಎಸ್. ಕುಮಾರ್, ಮುಖಂಡರಾದ ಲೋಕೇಶ್, ಬಸವಲಿಂಗಯ್ಯ, ಗೌರಿಶಂಕರ್, ಅಸ್ವಾಳ್ ಕೆಂಪೇಗೌಡ, ಹುಸೇನ್ ಪುರ ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ಅವಿನಾಶ್,. ಶಿಲ್ಪಿತ್, ಮೀನಾಕ್ಷಿ, ದಿವ್ಯ, ಹೇಮಂತ್ ಕುಮಾರ, ಪಿಡಿಒ ಛಾಯಾದೇವಿ ಸೇರಿದಂತೆ ಬೋಳನಹಳ್ಳಿ, ಚೋಳೇನಹಳ್ಳಿ ಗ್ರಾಮದ ಮುಖಂಡರು ಮತ್ತು ಸ್ಥಳೀಯ ಜನಪ್ರತಿನಿಧಿಗಳು, ಹಾಲು ಉತ್ಪಾದಕರ ಸಂಘದ ಸದಸ್ಯರು ಇದ್ದರು. ತೆಂಕಲಕೊಪ್ಪಲಿನಲ್ಲಿ ಹುಟ್ಟುಹಬ್ಬದ ಸಂಭ್ರಮ ಶಾಸಕರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳ ಬಳಗದಿಂದ ಬೆಂಗಳೂರಿನ ಸ್ಪಂದನ ಹಾಸ್ಪಿಟಲ್, ಎಜಿಎಸ್ ಕಣ್ಣಿನ ಆಸ್ಪತ್ರೆ ಮತ್ತು ಲಯನ್ ಬ್ಲಡ್ ಸೆಂಟರ್ ಸಹಯೋಗದಲ್ಲಿ ಆರೋಗ್ಯ ಉಚಿತ ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಯಿತು. ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರುಗಳಿಗೆ ಹೈನುಗಾರಿಕೆ ನಿರ್ವಹಣೆ ಕುರಿತು ವಿಚಾರಗೋಷ್ಠಿ ಅಯೋಜಿಸಿ ಮಾಹಿತಿ ಒದಗಿಸಲಾಯಿತು.