ಸುಳ್ಳು ಸುದ್ದಿಗೆ ನಿಯಂತ್ರಣ ಹೇರಲು ಮಸೂದೆ ಮಂಡನೆ

| Published : Jul 06 2025, 11:48 PM IST

ಸಾರಾಂಶ

ರಾಜ್ಯದಲ್ಲಿ ಸುಳ್ಳು ಸುದ್ದಿ ಪ್ರಕಟಿಸುವ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ರಾಜ್ಯದಲ್ಲಿ ಸುಳ್ಳು ಸುದ್ದಿ ಪ್ರಕಟಿಸುವ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ವಾರ್ಷಿಕ ದತ್ತಿನಿಧಿ, ಹಿರಿಯ ಪತ್ರಕರ್ತರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಫೇಕ್​ ನ್ಯೂಸ್​ ಹಾವಳಿ ತಡೆಗಟ್ಟಲು ವಿಶೇಷ ಕಾಯ್ದೆ ಜಾರಿ ಅಗತ್ಯವಾಗಿದೆ. ಪೇಯ್ಡ್​ ನ್ಯೂಸ್​ ಸಹ ಪತ್ರಿಕಾರಂಗದಲ್ಲಿ ತೂರಿಕೊಂಡಿದೆ. ಅವರ ಪರವಾಗಿ ಏನು ಬೇಕಾದರೂ ಬರೆಯಬಹುದು ಎಂಬ ಧೋರಣೆ ಇದೆ ಎಂದರು.

ಮಾಧ್ಯಮ ಕ್ಷೇತ್ರ ಯಾರದ್ದೋ ಸ್ವಂತ ಆಸ್ತಿ ತರಾ ಆಗಿದೆ. ದೊಡ್ಡ ದೊಡ್ಡ ಚಾನೆಲ್​ಗಳು, ಪತ್ರಿಕೆಗಳು ಒಡೆತನ ಕೈಗಾರಿಕೋದ್ಯಮಿಗಳ, ಬಂಡವಾಳ ಶಾಹಿಗಳ ಕೈಗಳಲ್ಲಿದ್ದು ಅವರ ಸ್ವಂತ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಕಾರ‍್ಯನಿರ್ವಹಿಸುತ್ತಿವೆ. ಸಾಮಾಜಿಕ ಕಳಕಳಿಗಿಂತ ಸ್ವಹಿತಾಸಕ್ತಿ ಹೊಂದಿವೆ. ಸುದ್ದಿಮಾಧ್ಯಮಗಳಲ್ಲಿ ಗ್ರಾಮೀಣ ವರದಿಗಳಿಗಿಂತ ನಗರಮುಖಿ ಸುದ್ದಿಗಳಿಗೆ ತುಂಬಿರುತ್ತವೆ ಎಂದು ಬೇಸರಿಸಿದರು.

ರಾಜಕೀಯ ಪಕ್ಷಗಳ ಮುಖವಾಣಿ: ಪತ್ರಿಕೆಗಳು, ಚಾನಲ್​ಗಳು ರಾಜಕೀಯ ಪಕ್ಷಗಳ ಮುಖವಾಣಿಗಳಂತಾಗಿವೆ. ಪತ್ರಿಕಾರಂಗ ತಟಸ್ಥ ನಿಲುವು ಹೊಂದಿರಬೇಕು. ಪ್ರಜಾಪ್ರಭುತ್ವ ರಕ್ಷಣೆ ಮಾಡುವ ಜವಾಬ್ದಾರಿ ಪತ್ರಕರ್ತರ ಮೇಲಿದ್ದು ಯಾರ ಪಕ್ಷಪಾತವಹಿಸದೆ ನಿಷ್ಪಕ್ಷಪಾತವಾಗಿ ಇರಬೇಕು. ಹಾಗಾಗಿ, ಅಭಿವ್ಯಕ್ತ ಸ್ವಾತಂತ್ರವನ್ನು ಪತ್ರಕರ್ತರಿಗೆ ನೀಡಲಾಗಿದೆ ಎಂದರು.

ಪತ್ರಕರ್ತರಿಗೆ ಆತ್ಮಸಾಕ್ಷಿ ಅನ್ನುವುದು ಇರಬೇಕು. ಇಲ್ಲದೇ ಹೋದರೆ ವೃತ್ತಿಗೆ ಅರ್ಥ ಇರುವುದಿಲ್ಲ. ಉತ್ತರದಾಯಿತ್ವವು ಇಲ್ಲ. ಮಾಧ್ಯಮ ಇವತ್ತು ಕವಲು ದಾರಿಯಲ್ಲಿದೆ. ಸಾಮಾಜಿಕ ಜಾಲತಾಣಗಳು, ಪತ್ರಿಕೆಗಳು ಹಾಗೂ ಟಿವಿ ಮಾಧ್ಯಮಗಳು ಇದ್ದು ಈ ಸವಾಲುಗಳನ್ನು ಮಾಧ್ಯಮ ಕ್ಷೇತ್ರ ಎದುರಿಸುತ್ತಿದೆ. ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ‍್ಯತೆ ಇದೆ. ಇನ್ನಾದರು ಈ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿ ಮಾಧ್ಯಮ ಕ್ಷೇತ್ರ ವೃತ್ತಿ ಧರ್ಮ ಪಾಲಿಸದಿದ್ದರೆ, ರಾಜಧರ್ಮ ಪಾಲಿಸಿ ಎಂದು ಅಧಿಕಾರಸ್ಥರಿಗೆ ಹೇಳುವ ನೃತಿಕ ಸ್ಥೈರ್ಯವನ್ನು ಕಳೆದುಕೊಳ್ಳುತ್ತದೆ. ಪತ್ರಿಕಾ ದಿನಾಚರಣೆ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸಂಭ್ರಮದ ಬದಲಿಗೆ ಒಂದು ರೀತಿಯ ಅಳುಕು ಕಾಡುತ್ತಿದೆ ಎಂದರು.

ವೃತ್ತಿ ಧರ್ಮ ಎನ್ನುವುದು ಸಾರ್ವಜನಿಕ ಕಟಕಟೆಗೆ ಬಂದು ನಿಂತಿದೆ. ಜನ ಸಾಮಾನ್ಯರಿಂದ ಹಿಡಿದು ಮಾಧ್ಯಮಕ್ಷೇತ್ರದ ದಿಗ್ಗಜರು, ಹಿರಿಯರು ಎಲ್ಲಿದೆ ವೃತ್ತಿ ಧರ್ಮ ಎಂದು ಪ್ರಶ್ನಿಸುತ್ತಿದ್ದಾರೆ. ಇಂತಹ ಹೊತ್ತಲ್ಲಿ ಅಧಿಕಾರಸ್ಥರನ್ನು ಪ್ರಶ್ನಿಸುವ ನೈತಿಕ ಸ್ಥೈರ್ಯ ನಮ್ಮ ವೃತ್ತಿಗೆ ಉಳಿಯುತ್ತದೆಯೇ ಎಂದು ಪ್ರಶ್ನಿಸಿದರು.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ, ಸತ್ಯ ಸಂಗತಿಗಳನ್ನು ಸಮಾಜಕ್ಕೆ ತಿಳಿಸುವುದು ಮಾಧ್ಯಮಗಳ ಕರ್ತವ್ಯ. ನಿಷ್ಠುರವಾದ ವಿಚಾರಗಳನ್ನು ಪ್ರಕಟಿಸುವಾಗ ಪ್ರಾಣದ ಹಂಗು ತೊರೆದು ಪತ್ರಕರ್ತರು ಕಾರ‍್ಯನಿರ್ವಹಿಸುತ್ತಾರೆ ಎಂದರು.

ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​, ಜಿಲ್ಲಾಧಿಕಾರಿ ಶುಭಕಲ್ಯಾಣ್​, ಜಿಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​, ಎಡಿಸಿ ಡಾ.ಎನ್​.ತಿಪ್ಪೇಸ್ವಾಮಿ, ಎಸಿ ನಾಹಿದಾ ಜಮ್​ ಜಮ್​, ಚಿ.ನಿ.ಪುರುಷೋತ್ತಮ್​, ಐಎಫ್ ಡಬ್ಲ್ಯೂಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಸಿದ್ದಲಿಂಗಸ್ವಾಮಿ, ಟಿ.ಇ.ರಘುರಾಮ್​ ಮತ್ತಿತರರು ಉಪಸ್ಥಿತರಿದ್ದರು.