ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಲ್ಲವ ಸಮಾಜಕ್ಕೆ ತಾಂತ್ರಿಕ ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಚಿಂತನೆ ಮಾಡಬೇಕಾದ ಅಗತ್ಯವಿದೆ ಎಂದು ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ಎಂ.ವೇದಕುಮಾರ್ ತಿಳಿಸಿದ್ದಾರೆ.ಬನ್ನೇರುಘಟ್ಟದ ರಸ್ತೆಯ ಬಿಲ್ಲವ ಭವನದ ದೇವಕಿ ಆನಂದ ಸುವರ್ಣ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಾರಾಯಣಗುರುಗಳ 171ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಕಳೆದ 20ವರ್ಷಗಳಿಂದ ಬಿಲ್ಲವ ಸಂಘವನ್ನು ಮುನ್ನಡೆಸಿಕೊಂಡು ಬಂದಿದ್ದೇನೆ. ನಾರಾಯಣ ಗುರುಗಳ ಸಂದೇಶದಂತೆ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯ, ವಿದ್ಯಾರ್ಥಿ ವೇತನ ಪ್ರತಿಭಾ ಪುರಸ್ಕಾರ, ಆರೋಗ್ಯ, ಸಾಮಾಜಿಕ ಸುಧಾರಣ ಕೆಲಸಗಳು ನಿರಂತರ ನಡೆಯಲು ಸಂಘದ ಸದಸ್ಯರ ಮತ್ತು ಬಿಲ್ಲವರ ಸಮುದಾಯದವರ ಸಹಕಾರವೇ ಕಾರಣ ಎಂದರು.
ಸಂಘದ ವತಿಯಿಂದ ವಿದ್ಯಾಸಂಸ್ಥೆ ಆರಂಭವಾಗಬೇಕು ಎಂಬುದು ನಮ್ಮ ಕನಸು. ಆ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಬಿಲ್ಲವ ಸಮಾಜಕ್ಕೆ ತಾಂತ್ರಿಕ ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಚಿಂತನೆ ಅಗತ್ಯವಿದೆ. ಸಮಾಜದ ಯುವಕ ಯುವತಿಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಡಳಿತಾತ್ಮಕ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗಬೇಕು ಎಂದು ಕರೆ ನೀಡಿದರು.ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ಪೀತಾಂಬರ ಹೆರಾಜೆ, ಸಂಘದ ಗೌರವಾಧ್ಯಕ್ಷ ನೆಕ್ಕಿದಪುಣಿ ಗೋಪಾಲ ಕೃಷ್ಣ, ಪ್ರಧಾನ ಕಾರ್ಯದರ್ಶಿ ಡಿ.ಎನ್. ಸಂಪತ್ ಕುಮಾರ್, ಕಾರ್ಯದರ್ಶಿ ದಾಮೋದರ ಬಿ.ಸುವರ್ಣ, ಕೋಶಾಧಿಕಾರಿ ಜಯಾನಂದ ಪೂಂಜಾರಿ ಮತ್ತಿತರರು ಉಪಸ್ಥಿತರಿದ್ದರು.