ಸಾರಾಂಶ
ಶಿರಹಟ್ಟಿ: ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಜೆಜೆಎಂ ಯೋಜನೆ ಶಿರಹಟ್ಟಿ ತಾಲೂಕಿನಲ್ಲಿ ಸಂಪೂರ್ಣ ವಿಫಲಗೊಂಡಿದ್ದು, ಕೆಲವಡೆ ಕಾಮಗಾರಿ ಆಗದಿದ್ದರೂ ಅಧಿಕಾರಿಗಳು ಬಿಲ್ ಪಾವತಿಸಿರುವುದು ಕಂಡುಬಂದಿದೆ. ನನಗೆ ಗೊತ್ತಿಲ್ಲದಂತೆ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು ಆಟವಾಡುತ್ತಿದ್ದಾರೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಆಕ್ರೋಶ ಹೊರ ಹಾಕಿದರು. ಮಂಗಳವಾರ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾನು ಶಾಸಕನಾಗಿ ಎರಡು ವರ್ಷ ಕಳೆದಿದೆ. ಜೆಜೆಎಂ ಯೋಜನೆ ಕಾಮಗಾರಿ ಅಪೂರ್ಣಗೊಂಡಿವೆ. ಗುತ್ತಿಗೆದಾರರಿಗೆ ಬಿಲ್ ನೀಡಬಾರದೆಂಡು ಈ ಹಿಂದೆ ನಡೆದ ತಾಪಂ ಕೆಡಿಪಿ ಸಭೆಯಲ್ಲಿ ಠರಾವ್ ಬರೆಸಿದ್ದು, ನನಗೆ ಗೊತ್ತಿಲ್ಲದಂತೆ ಬಿಲ್ ನೀಡಿದ್ದಾರೆ ಎಂದು ದೂರಿದರು.ಕಾಮಗಾರಿ ಪರಿಶೀಲನೆಗೆ ಅಧಿಕಾರಿಗಳ ತಂಡ ರಚನೆ ಮಾಡಿ ವಾಸ್ತವ ಸ್ಥಿತಿ ಅರಿಯದೇ ಬಿಲ್ ನೀಡಬಾರದೆಂದು ತಾಕೀತು ಮಾಡಿದ್ದರೂ ನನ್ನ ಮಾತಿಗೆ ಕ್ಯಾರೆ ಎನ್ನದೇ ಕೆಲ ಅಧಿಕಾರಿಗಳು ಗುತ್ತಿಗೆದಾರರಿಗೆ ಬಿಲ್ ನೀಡಿ ಕಳಪೆ ಕಾಮಗಾರಿಗೆ ಕೈ ಜೋಡಿಸಿದ್ದಾರೆ. ನೂರಾರು ಕೋಟಿ ಅವ್ಯವಹಾರ ನಡೆದಿರುವ ಬಗ್ಗೆ ಮೇಲ್ನೋಟಕ್ಕೆ ಕಂಡುಬಂದಿದೆ. ಇದಕ್ಕೆ ಅಧಿಕಾರಿಗಳೆ ಹೊಣೆ ಎಂದು ಎಚ್ಚರಿಸಿದರು. ತಾಲೂಕಿನ ಬಹುತೇಕ ಗ್ರಾಮಗಳಿಗೆ ನಾನು ಭೇಟಿ ನೀಡಿದರೆ ಗ್ರಾಮಸ್ಥರು ಇದೇ ಸಮಸ್ಯೆಯನ್ನು ನನ್ನ ಗಮನಕ್ಕೆ ತರುತ್ತಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕಾಮಗಾರಿ ಮಾಡಿದ ಮೊತ್ತಕ್ಕಿಂತ ಹೆಚ್ಚುವರಿ ಹಣವನ್ನು ಪಾವತಿಸಿದ್ದು, ಸಹ ಪ್ರಮಾದದ ಸಂಗತಿಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಪಿಡಿಓ ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ಕ್ರಮ ಕೈಗೊಳ್ಳದೇ ಇರುವ ಪರಿಣಾಮ ಗುತ್ತಿಗೆದಾರರು ತಮಗೆ ಇಷ್ಟಬಂದಂತೆ ಬೇಕಾಬಿಟ್ಟಿ ಕಾಮಗಾರಿ ಮಾಡಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಉತ್ತಮ ನಿದರ್ಶನವೆಂದರೆ ಕಡಕೋಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜೆಜೆಎಂ ಸಂಪೂರ್ಣ ವಿಫಲಗೊಂಡಿದೆ. ಜೆಜೆಎಂ ಕಾಮಗಾರಿ ಅವ್ಯವಹಾರ ಹಾಗೂ ಕಳಪೆ ಕಾಮಗಾರಿ ಕುರಿತು ಪತ್ರಿಕೆಗಳಲ್ಲಿ ಈ ಕುರಿತು ಸಾಕಷ್ಟು ಸುದ್ದಿಗಳು ಸಹ ಬಂದಿವೆ. ಇದಕ್ಕೆ ಕಾರಣ ಯಾರು ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಟೆಂಡರ್ ಪ್ರಕಾರ ಕಾಮಗಾರಿ ಆಗದೇ ಇದ್ದಲ್ಲಿ ನೋಟಿಸ್ ನೀಡಿ. ಗುತ್ತಿಗೆದಾರರ ಕಾರಣಕ್ಕಾಗಿ ಗ್ರಾಮಸ್ಥರಿಗೆ ಶಿಕ್ಷೆ ನೀಡುವದು ಯಾವ ನ್ಯಾಯ? ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿ. ಪಿಡಿಓಗಳ ನಿರ್ಲಕ್ಷ್ಯ ಸಹ ಇದಕ್ಕೆ ಮುಖ್ಯ ಕಾರಣವಾಗಿದೆ. ಸರ್ಕಾರದ ಬಹುತೇಕ ಯೋಜನೆಗಳು ಇದೇ ರೀತಿ ಆಗುತ್ತಿದ್ದು, ಜನರು ಭ್ರಮನಿರಸನಗೊಂಡಿದ್ದಾರೆ. ಆದ್ದರಿಂದ ಮುಂದೆ ಇಂತಹ ತಪ್ಪುಗಳು ಆಗದ ರೀತಿಯಲ್ಲಿ ನೋಡಿಕೊಳ್ಳುವುದು ಅಧಿಕಾರಿಗಳ ಕರ್ತವ್ಯ ಎಂದರು. ಪ್ರತಿ ಪಂಚಾಯ್ತಿಯಲ್ಲಿ ಜನರು ನಿರೀಕ್ಷೆ ಮಾಡಿದ ರೀತಿಯಲ್ಲಿ ಕೆಲಸಗಳು ಆಗುತ್ತಿಲ್ಲ. ಚಿಕ್ಕಪುಟ್ಟ ಕೆಲಸಗಳಿಗೂ ಜನರಿಗೆ ವೃಥಾ ಕಿರುಕುಳ ನೀಡುವದು ಸಲ್ಲದು. ಪಂಚಾಯ್ತಿ ಹಂತದಲ್ಲಿ ಜನರಿಗೆ ಮೂಲಸೌಕರ್ಯಗಳನ್ನು ನೀಡಬೇಕು. ಪಿಡಿಒಗಳು ಮಾಡುವ ತಪ್ಪಿಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳತ್ತ ಹಾಗೂ ತಾಪಂ ಇಒ ಹಾಗೂ ಶಾಸಕರತ್ತ ಬೆರಳು ಮಾಡುವುದು ಎಷ್ಟರಮಟ್ಟಿಗೆ ಸಮಂಜಸ ಎಂದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್. ಮಾತನಾಡಿ, ಜೆಜೆಎಂ ಕಾಮಗಾರಿಯಲ್ಲಿ ಅವ್ಯವಹಾರ ಕಂಡುಬಂದಲ್ಲಿ ಅವರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಕಾಮಗಾರಿಗಿಂತ ಹೆಚ್ಚಿನ ಬಿಲ್ ಪಾವತಿಸಿದರೆ ಅಂತಹ ಅಧಿಕಾರಿಗಳ ವಿರುದ್ದ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವದು. ಇದಕ್ಕೆ ಸಂಬಂಧಿಸಿದಂತೆ ಅಗತ್ಯ ವರದಿ ಹಾಗೂ ಕಾಮಗಾರಿ ವಿವರ ಪರಿಶೀಲನೆ ಮಾಡಲಾಗುವದು ಎಂದು ಹೇಳಿದರು. ಕಾರ್ಯನಿರ್ವಾಹಕ ಅಭಿಯಂತರ ರಾಘು ದೊಡ್ಡಮನಿ, ತಾಪಂ ಇಒ ರಾಮಪ್ಪ ದೊಡ್ಡಮನಿ, ವಿಶ್ವನಾಥ, ಕೃಷ್ಣಪ್ಪ ಧರ್ಮರ ಸೇರಿ ಅನೇಕರು ಇದ್ದರು.