ಪೆಟ್ರೋಲಿಯಂ ಬಳಕೆ ಬದಲು ಜೈವಿಕ ಇಂಧನ ಸೂಕ್ತ

| Published : Aug 28 2024, 12:46 AM IST

ಸಾರಾಂಶ

ಚಾಮರಾಜನಗರ ಹರದನಹಳ್ಳಿ ಕೆವಿಕೆಯಲ್ಲಿ ವಿಶ್ವ ಜೈವಿಕ ಇಂಧನ ದಿನಾಚರಣೆ ಅಂಗವಾಗಿ ಟ್ರ್ಯಾಕ್ಟರ್‌ಗೆ ಜೈವಿಕ ಇಂಧನ ಹಾಕಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಬದಲು ಜೈವಿಕ ಇಂಧನ ಬಳಸುವುದು ಪ್ರಸ್ತುತ ಸೂಕ್ತ ಎಂದು ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್‌ ಅವರು ತಿಳಿಸಿದರು.

ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರ, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ವಿಶ್ವ ಜೈವಿಕ ಇಂಧನ ದಿನಾಚರಣೆ-೨೦೨೪ನ್ನು ಹರದನಹಳ್ಳಿ ಫಾರಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಪರಿಸರ ಮಾಲಿನ್ಯ ತಡೆಗಟ್ಟಲು ಹಾಗೂ ಜಾಗತಿಕ ತಾಪಮಾನ ನಿರ್ವಹಣೆ ಮಾಡಿ ಮುಂದಿನ ದಿನಗಳಲ್ಲಿ ಸಂಪನ್ಮೂಲಗಳನ್ನು ಸಂರಕ್ಷಿಸಿ ವಾಯು, ಜಲ ನೈರ್ಮಲ್ಯವಾಗಿ ಇಟ್ಟುಕೊಳ್ಳಲು ಪರಿಸರ ಸ್ನೇಹಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿ, ಹಾಗಾಗಿ ರೈತಾಪಿ ವರ್ಗದವರು ಜೈವಿಕ ಇಂಧನ ಸಸ್ಯಗಳನ್ನು ತಮ್ಮ ಜಮೀನಿನ ಸುತ್ತ ಅಳವಡಿಸಿಕೊಳ್ಳಲು ಕರೆ ನೀಡಿದರು.

ಮುಖ್ಯ ಅತಿಥಿ ದೀನಬಂಧು ಶಿಕ್ಷಣ ಸಂಸ್ಥೆಯ ಲೋಕೇಶ್ ಜಾಧವ್ ಮಾತನಾಡಿ, ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ದಿನೇ ದಿನೇ ಹೆಚ್ಚುತ್ತಿದ್ದು, ಎಣ್ಣೆ ಕಾಳಿನ ಬೆಳೆಗಳು ಹಾಗೂ ಮಾನವನ ಅವಿನಾಭವ ಸಂಬಂಧ ಅರಿತು ಪ್ರಕೃತಿ ಸಮತೋಲನ ಕಾಯ್ದುಕೊಳ್ಳಲು ತಿಳಿಸಿದರು. ಪೆಟ್ರೋಲಿಯಂ ಇಂಧನ ನಿಕ್ಷೇಪವು ಕ್ಷೀಣಿಸುತ್ತಿರುವುದರಿಂದ ಪರ್ಯಾಯ ಇಂಧನಗಳ ಬಳಕೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಯೋಗೇಶ್ ಮಾತನಾಡಿ, ಜೈವಿಕ ಇಂಧನ ಸಸ್ಯಗಳನ್ನು ರೈತರು ಬೆಳೆಸುವುದರಿಂದ ರೈತರು ತಮ್ಮ ಕೃಷಿ ವ್ಯವಸ್ಥೆಯಲ್ಲಿ ಸಸ್ಯ ವೈವಿಧ್ಯತೆಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಪಶು ಸಂಗೋಪನೆಯಲ್ಲಿ ಮೇವಿನ ಅವಶ್ಯಕತೆಯನ್ನು ಸರಿದೂಗಿಸಿಕೊಂಡು ಬೇಸಾಯದಲ್ಲಿ ಲಾಭ ಕಂಡುಕೊಳ್ಳಬಹುದು ಎಂದು ತಿಳಿಸಿದರು.

ಹವಾಮಾನ ವೈಪರೀತ್ಯಕ್ಕೆ ಪೆಟ್ರೋಲಿಯಂ ಇಂಧನದ ವಿವೇಚನ ರಹಿತ ಬಳಕೆ ಕಾರಣವಾಗಿದ್ದು ಜೈವಿಕ ಇಂಧನ ಹಲವಾರು ಕೈಗಾರಿಕೆಗಳಿಗೆ ಮತ್ತು ಕೆಲವು ವಾಹನಗಳಿಗೆ ಒಂದು ಉತ್ತಮವಾದ ಪರ್ಯಾಯ ಇಂಧನವಾಗಿದ್ದು ಜನರು ಇದರ ಬಗ್ಗೆ ಅರಿವು ಮಾಡಿಕೊಳ್ಳುವುದು ಅವಶ್ಯಕ. ಜೈವಿಕ ಇಂಧನ ಸಸ್ಯಗಳಲ್ಲಿ ಹಲವು ಔಷಧೀಯ ಗುಣಗಳು ಕೂಡ ಇದ್ದು ಇವುಗಳ ಬಳಕೆ ಮಾನವನ ಆರೋಗ್ಯ ನಿರ್ವಹಣೆಯಲ್ಲೂ ಕೂಡ ಸಹಕಾರಿಯಾಗುತ್ತದೆ ಎಂದರು.

ಪ್ರಸ್ತುತ ಮಾಲಿನ್ಯ ಹೆಚ್ಚುತ್ತಿದ್ದು ಹವಾಮಾನ ವೈಪರೀತ್ಯದಿಂದ ಹಲವಾರು ಪ್ರಾಕೃತಿಕ ವಿಕೋಪಗಳು ಹಾಗೂ ದುಷ್ಪರಿಣಾಮಗಳು ಘಟಿಸುತ್ತಿವೆ. ಸಮತೋಲನ ಕಾಯ್ದುಕೊಳ್ಳಲು ಪೆಟ್ರೋಲಿಯಂ ಇಂಧನಗಳ ಬಳಕೆ ಕಡಿಮೆ ಮಾಡಿ ಜೈವಿಕ ಇಂಧನಗಳಿಗೆ ಹೆಚ್ಚಿನ ಒತ್ತು ನೀಡಬೇಕು.

ತಾಂತ್ರಿಕ ಅಧಿಕಾರಿ ಡಾ.ಬಿ.ಪಂಪನಗೌಡ ವರ್ತಮಾನದಲ್ಲಿ ಜೈವಿಕ ಇಂಧನದ ಲಭ್ಯತೆ, ಅವುಗಳ ಬಳಕೆ, ಅವುಗಳ ಅವಶ್ಯಕತೆಗಳು ಹಾಗೂ ಜೈವಿಕ ಇಂಧನ ಉತ್ಪಾದನೆ ಮತ್ತು ಬಳಕೆ ಕ್ಷೇತ್ರಗಳ ಬೆಳವಣಿಗೆಗಳ ಹಿನ್ನೆಲೆಯನ್ನು ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಜೈವಿಕ ಇಂಧನ ಸಸ್ಯಗಳ ಮತ್ತು ಉಪ ಉತ್ಪನ್ನಗಳ ಉಪಯೋಗವನ್ನು ಜೈವಿಕ ಇಂಧನ ಪ್ರಾತ್ಯಕ್ಷಿಕೆಯನ್ನು ಘಟಕದ ಯೋಜನಾ ಸಹಾಯಕಿ ಅನನ್ಯ ತಿಳಿಸಿಕೊಟ್ಟರು.

ಕೃಷಿಯಲ್ಲಿ ಎಣ್ಣೆ ಹಿಂಡಿಗಳ ಬಳಕೆ ಹಾಗೂ ಸಸ್ಯ ರೋಗಗಳ ನಿರ್ವಹಣೆಯ ಬಗ್ಗೆ ಡಾ.ಬಿ.ಪಂಪನಗೌಡ ತಿಳಿಸಿದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಭ್ಯಶ್ರೀ, ಕೇಂದ್ರದ ಗೃಹ ವಿಜ್ಞಾನಿ ಡಾ. ದೀಪಾ,ಜೆ., ದತ್ತು ಗ್ರಾಮ ಯೋಜನೆಯ ಸಹಾಯಕ ಮಂಜು, ರೈತ, ರೈತ ಮಹಿಳೆಯರು ಮತ್ತು ಕೃಷಿ ಸಖಿಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೇಂದ್ರದ ಆವರಣದಲ್ಲಿ ಹೊಂಗೆ ಸಸಿ ನೆಡಲಾಯಿತು. ಕಾರ್ಯಕ್ರಮದ ನಿಮಿತ್ತ ಕಿಸಾನ್ ಸಮೃದ್ಧಿ ತಾಂತ್ರಿಕ ಜೈವಿಕ ಉತ್ಪನ್ನಗಳಾದ ಹೊಂಗೆ ಹಿಂಡಿ, ಬೇವಿನ ಹಿಂಡಿ, ಹೊಂಗೆ ಎಣ್ಣೆ, ಬೇವಿನ ಎಣ್ಣೆ, ಬಯೋ ಡೀಸೆಲ್, ಉಪ ಉತ್ಪನ್ನಗಳಾದ ದೀಪದ ಎಣ್ಣೆ, ಜೈವಿಕ ಸಾಬೂನು ಮತ್ತು ಜೈವಿಕ ಇಂಧನ ಸಸ್ಯಗಳನ್ನು ಪ್ರದರ್ಶಿಸಲಾಯಿತು.