ಧಾರವಾಡ ತಾಲೂಕಿನ ಶಿವಳ್ಳಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಬಯೋಗ್ಯಾಸ್ ಪ್ಲಾಂಟ್ (ಜೈವಿಕ ಅನಿಲ ಘಟಕ)ನ್ನು ಮಹಾನಗರದ ಸಮೀಪಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.
ಹುಬ್ಬಳ್ಳಿ:
ಧಾರವಾಡ ತಾಲೂಕಿನ ಶಿವಳ್ಳಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಬಯೋಗ್ಯಾಸ್ ಪ್ಲಾಂಟ್ (ಜೈವಿಕ ಅನಿಲ ಘಟಕ)ನ್ನು ಮಹಾನಗರದ ಸಮೀಪಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಈ ಮೂಲಕ ಘಟಕ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಶಿವಳ್ಳಿ ಸೇರಿದಂತೆ ನಾಲ್ಕೈದು ಗ್ರಾಮಗಳ ಒತ್ತಡಕ್ಕೆ ಮಣಿದಂತಾಗಿದೆ. ಮಹಾನಗರ ಪಾಲಿಕೆ ಆಯುಕ್ತರು, ಮೇಯರ್ ಅವರೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.ಶಿವಳ್ಳಿ ಗ್ರಾಮದ ಸರ್ವೇ ನಂ.468ರಲ್ಲಿ ಬಯೋಗ್ಯಾಸ್ ಪ್ಲಾಂಟ್ ನಿರ್ಮಿಸಲು ಉದ್ದೇಶಿಸಲಾಗಿತ್ತು. ಇದಕ್ಕೆ ಶಿವಳ್ಳಿ ಸೇರಿದಂತೆ ಸುತ್ತಮುತ್ತಲಿನ ಹೆಬ್ಬಳ್ಳಿ, ಮಾರಡಗಿ, ಸೋಮಾಪುರ ಮತ್ತು ಸುಳ್ಳ ಗ್ರಾಮಗಳ ಸಾರ್ವಜನಿಕರು ಈ ಘಟಕವನ್ನು ತಮ್ಮ ಭಾಗದಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ಹೋರಾಟ ನಡೆಸಿದ್ದರು. ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೂ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜೋಶಿ ಅವರು, ಗ್ರಾಮಸ್ಥರ ಭಾವನೆಗಳಿಗೆ ಗೌರವ ನೀಡಿ, ಆಯುಕ್ತರು, ಮೇಯರ್ ಅವರೊಂದಿಗೆ ಚರ್ಚಿಸಿ ಘಟಕವನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ.
ಸ್ಥಳಾಂತರದಿಂದ ಅನುಕೂಲ:ಮಹಾನಗರದಿಂದ ಶಿವಳ್ಳಿ ದೂರವಿದ್ದು ನಿತ್ಯ ಹಸಿ ತ್ಯಾಜ್ಯ ಸಾಗಿಸುವುದು ಪಾಲಿಕೆಗೆ ಆರ್ಥಿಕ ಹೊರೆಯಾಗುತ್ತದೆ. ಜತೆಗೆ ದೈನಂದಿನ ನಿರ್ವಹಣೆಯೂ ಸವಾಲಾಗಿ ಪರಿಣಮಿಸಲಿದೆ. ದೂರದ ಗ್ರಾಮಗಳಿಗೆ ನಿತ್ಯ ನೂರಾರು ಟನ್ ತ್ಯಾಜ್ಯ ಸಾಗಿಸುವುದರಿಂದ ಜನರ ಸಂಚಾರಕ್ಕೆ ಹಾಗೂ ಸ್ಥಳೀಯರಿಗೆ ಅನಾನುಕೂಲ ಉಂಟಾಗುವ ಸಾಧ್ಯತೆ ಇರುತ್ತದೆ. ಮಹಾನಗರದ ಸಮೀಪವೇ ಘಟಕ ಸ್ಥಾಪಿಸಿದರೆ ಆರ್ಥಿಕ ಹೊರೆ ತಪ್ಪುವ ಜತೆಗೆ ತ್ಯಾಜ್ಯ ಸಾಗಾಟದ ಸಮಸ್ಯೆಯೂ ದೂರವಾಗಲಿದೆ. ನಿರ್ವಹಣೆಯೂ ಸರಳವಾಗುತ್ತದೆ ಎಂದು ಜೋಶಿ ತಿಳಿಸಿದ್ದಾರೆ.
ಸಮಗ್ರ ಹಾಗೂ ಸುಸ್ಥಿರ ಪರಿಹಾರ:ಬಯೋಗ್ಯಾಸ್ ಘಟಕವು ಯಾವುದೇ ಅಡೆತಡೆ ಇಲ್ಲದೆ ನಿರಂತರವಾಗಿ ಕಾರ್ಯನಿರ್ವಹಿಸಬೇಕಾದರೆ, ಹಸಿ ತ್ಯಾಜ್ಯ ಲಭ್ಯವಿರುವ ಸ್ಥಳದ ಹತ್ತಿರದಲ್ಲೇ ಸಂಸ್ಕರಣೆ ನಡೆಸಿ ಗ್ಯಾಸ್ ತಯಾರಿಸುವುದು ಅವಶ್ಯಕವಾಗಿದೆ. ಇದರಿಂದ ಸಾರಿಗೆ ವೆಚ್ಚ ಉಳಿಯುವ ಜತೆಗೆ ಪ್ಲಾಂಟ್‌ನ ದಕ್ಷತೆಯೂ ಹೆಚ್ಚಾಗಲಿದೆ. ಈ ಕಾರಣದಿಂದಾಗಿ ಉದ್ದೇಶಿತ ಬಯೋಗ್ಯಾಸ್ ಘಟಕ ನಿರ್ಮಾಣ ಕಾಮಗಾರಿಯನ್ನು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಒಡೆತನದಲ್ಲೇ ಇರುವ, ನಗರಕ್ಕೆ ತೀರಾ ಸಮೀಪವಿರುವ ಸೂಕ್ತ ಜಾಗದಲ್ಲಿ ತಕ್ಷಣವೇ ಪ್ರಾರಂಭಿಸುವಂತೆ ಮೇಯರ್ ಹಾಗೂ ಆಯುಕ್ತರಿಗೆ ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಇದಕ್ಕೆ ಮೇಯರ್ ಹಾಗೂ ಆಯುಕ್ತರು ಸಮ್ಮತಿಸಿದ್ದು, ಶೀಘ್ರದಲ್ಲೇ ಸಮೀಪದ ಜಾಗದ ಗುರುತಿಸುವಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಸ್ವಚ್ಛ ಭಾರತ ಅಭಿಯಾನಕ್ಕೆ ಬಲ:ಮಹಾನಗರದ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮತ್ತು ಸ್ವಚ್ಛ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಈ ಬಯೋಗ್ಯಾಸ್ ಘಟಕ ಅತ್ಯಂತ ಪ್ರಮುಖವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.ಯಾವುದೇ ಒಂದು ಅಭಿವೃದ್ಧಿ ಯೋಜನೆ ಅಥವಾ ಪರಿಸರ ಸ್ನೇಹಿ ತಂತ್ರಜ್ಞಾನ ಯಶಸ್ವಿಯಾಗಬೇಕಾದರೆ ಅದು ಪ್ರಾಯೋಗಿಕವಾಗಿರಬೇಕು. ಸಾರ್ವಜನಿಕರಿಗೆ ಪೂರಕವಾಗಿರಬೇಕು. ಶಿವಳ್ಳಿಯಲ್ಲಿ ಈ ಘಟಕ ಸ್ಥಾಪಿಸಿದರೆ ಸಾಗಣೆ ವೆಚ್ಚವೇ ಪಾಲಿಕೆಗೆ ಹೊರೆಯಾಗುತ್ತಿತ್ತು. ಶಿವಳ್ಳಿ, ಹೆಬ್ಬಳ್ಳಿ ಸೇರಿದಂತೆ ಸುತ್ತಮುತ್ತಲಿನ ೫ ಹಳ್ಳಿಗಳ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ಮನವಿಗೂ ನಾವು ಸ್ಪಂದಿಸಬೇಕಿದೆ. ಹೀಗಾಗಿ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೇ ಸಿಗುವ ಹತ್ತಿರದ ಜಾಗದಲ್ಲಿ ಈ ಘಟಕ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದರಿಂದ ಕಸ ವಿಲೇವಾರಿ ಸುಲಭವಾಗಲಿದ್ದು, ನಿರಂತರ ಇಂಧನ ಉತ್ಪಾದನೆಗೆ ದಾರಿಯಾಗುತ್ತದೆ.
ಪ್ರಹ್ಲಾದ ಜೋಶಿ, ಕೇಂದ್ರ ಸಚಿವ