ಸಾರಾಂಶ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ರಾಜ್ಯದಲ್ಲಿ ಹಕ್ಕಿ ಜ್ವರದ ಹಾವಳಿ ಹೆಚ್ಚುತ್ತಿದ್ದು, ಅಧಿಕಾರಿಗಳು ಕೋಳಿ ಸಾಕಾಣಿಕಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸುವ ಜತೆಗೆ ಮುಂಜಾಗ್ರತಾ ಕ್ರಮವಾಗಿ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸುವಂತೆ ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಗಡಿಯ ಆಂದ್ರಪ್ರದೇಶ ಮ್ತತು ನೆರೆಯ ಬಳ್ಳಾರಿ ಜಿಲ್ಲೆಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು ಅಧಿಕಾರಿಗಳು ಜಾಗೃತರಾಗಬೇಕು. ಗಡಿಭಾಗದಲ್ಲಿ ಕೋಳಿ ಮೊಟ್ಟೆ ಮತ್ತು ಕೋಳಿಗಳನ್ನು ಹೊತ್ತು ತರುವ ವಾಹನಗಳ ಮೇಲೆ ತೀವ್ರ ನಿಗಾವಹಿಸಿ ಮುಂಜಾಗ್ರತೆ ವಹಿಸಬೇಕು. ಅಗತ್ಯ ಬಿದ್ದಲ್ಲಿ ತಪಸಣಾ ಕೇಂದ್ರಗಳನ್ನು ಹೆಚ್ಚಳ ಮಾಡಬೇಕು. ಅಲ್ಲದೆ ತಾಲೂಕಿನಲ್ಲಿ ಕೋಳಿ ಪಾರಂಗಳನ್ನು ಪಟ್ಟಿ ಮಾಡಿ ಪರಿಶೀಲಿಸುವ ಕ್ರಮವಾಗಬೇಕು. ಅಲ್ಲಿನ ಸ್ವಚ್ಛತೆ ಮತ್ತು ಕೋಳಿಗಳ ಆರೋಗ್ಯ ಕುರಿತು ಗಮನ ಹರಿಸಬೇಕು ಎಂದು ಹೇಳಿದರು.ನೊಣಗಳ ಹಾವಳಿ ಹೆಚ್ಚಿರುವ ಕೋಳಿ ಪಾರಂಗಳಿಗೆ ನೋಟಿಸ್ ನೀಡಿ ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಮುಂದಾಗಬೇಕು. ಅನಾರೋಗ್ಯದಿಂದ ಮೃತ ಕೋಳಿಗಳ ವಿಲೇವಾರಿ ಕುರಿತು ಗಮನ ಹರಿಸಬೇಕು ಎಂದು ತಾಕೀತು ಮಾಡಿದಾಗ ಪಶು ಇಲಾಖೆ ಸಹಾಯಕ ನಿರ್ಧೇಶಕ ಡಾ.ರಂಗಪ್ಪ ಮಾತನಾಡಿ, ತಾಲೂಕಿನಲ್ಲಿ ಒಟ್ಟು 38 ಪಾರಂಗಳಿವೆ. 24 ಲಕ್ಷ ಮೊಟ್ಟೆ ಕೋಳಿ, 45 ಲಕ್ಷ ಮಾಂಸ ಕೋಳಿಗಳು ಇವೆ. ಗಡಿ ಭಾಗದಲ್ಲಿ ತಪಾಸಣಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು ಒಳ ಬರುವ ವಾಹನಗಳ ಮೇಲೆ ತೀವ್ರ ನಿಗಾವಹಿಸಲಾಗಿದೆ. ಕೋಳಿ ಪಾರಂ ಮಾಲೀಕರಿಗೆ ಸ್ವಚ್ಛತೆ ಕಾಪಾಡಲು ಸೂಚಿಸಿಲಾಗಿದೆ ಎಂದಾಗ ಕರಪತ್ರಗಳ ಮೂಲಕ ಹಕ್ಕಿ ಜ್ವರ ಕುರಿತು ಸಾರ್ವಜನಿಕವಾಗಿ ಪ್ರಚಾರ ನೀಡುವಂತೆ ಶಾಸಕರು ತಿಳಿಸಿದರು.
ಬೇಸಿಗೆ ಆರಂಭವಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಎಇಇ ನಿಂಗರಾಜ ಅವರಿಗೆ ಸೂಚಿಸಿದಾಗ, ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಬಾರದಂತೆ ಎಚ್ಚರಿಕೆ ವಹಿಸಲಾಗಿದೆ. ಕೆಲ ಹಳ್ಳಿಗಳನ್ನು ಪಟ್ಟಿ ಮಾಡಿ ಈಗಾಗಲೆ ಜಿಪಂ ಗೆ ಕಳಿಸಲಾಗಿದೆ ಎಂದಾಗ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಗೆ ಹಳ್ಳಿಗಳಲ್ಲಿ ರಸ್ತೆಯನ್ನು ಅಗೆದು ಹಾಗೆಯೇ ಬಿಡಲಾಗಿದೆ. ಗುಣ ಮಟ್ಟದ ರಸ್ತೆ ಹಾಳಾಗಿದೆ. ರಸ್ತೆಯ ರಿಪೇರಿ ಮಾಡುವ ಜತೆಗೆ ಮುಂದಿನ ದಿನಗಳಲ್ಲಿ ಕೆಲಸ ಮಾಡುವಾಗ ರಸ್ತೆಯನ್ನು ಜೆಸಿಬಿಯಲ್ಲಿ ನಿರ್ವಹಿಸದೆ. ಯಂತ್ರದಿಂದ ರಸ್ತೆ ಕತ್ತರಿಸಿ ತ್ಯಾಜ್ಯ ಸೂಕ್ತ ವಿಲೇವಾರಿ ಮಾಡಿ ರಸ್ತೆ ಯತಾ ಸ್ಥಿತಿ ನಿರ್ಮಾಣ ಮಾಡಲು ಕ್ರಮವಹಿಸಬೇಕು, ಇಲ್ಲದಿದ್ದರೆ ನೀವೇ ಹೊಣೆಯಾಗಬೇಕಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಹೇಳಿದರು.ಮಾರ್ಚ ಅಂತ್ಯವಾಗುತ್ತಿದಂತೆ ಎಲ್ಲಾ ಇಲಾಖೆ ಅನುದಾನಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಬೇಕು. ಯಾವುದೇ ಅನುದಾನ ವಾಪಸ್ ಮರಳದಂತೆ ನಿಗದಿತ ಅವದಿಯಲ್ಲಿ ಕೆಲಸ ಪೂರೈಸಬೇಕು. ಇದಕ್ಕೆ ಧ್ವನಿ ಗೂಡಿಸಿದ ತಾಪಂ ಇಒ ಹನುಮಂತಪ್ಪ ಕಾಮಗಾರಿ ತ್ವರಿತ ಗೊಳಿಸುವಂತೆ ಸೂಚಿಸಲಾಗಿದ್ದು ಕೆಲಸಗಳು ಪ್ರಗತಿಯಲ್ಲಿವೆ ಎಂದರು.
ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ಕುರಿತು ದೂರುಗಳು ವ್ಯಕ್ತವಾಗುತ್ತಿವೆ. ಏನು ಕ್ರಮ ಕೈಗೊಂಡಿದ್ದೀರಿ ಎಂದು ಆರೋಗ್ಯಾಧಿಕಾರಿ ಡಾ.ಮದುಕುಮಾರ್ ಅವರನ್ನು ಪ್ರಶ್ನಿಸಿದಾಗ, ಅವರು 50ಕ್ಕೂ ಹೆಚ್ಚು ಜನರು ಆರ್‌ಎಂಪಿ ವೈದ್ಯರು ಇದ್ದು ಹಲವು ಬಾರಿ ಕ್ಲಿನಿಕ್ ನಡೆಸದಂತೆ ಎಚ್ಚರಿಕೆ ಕೊಡಲಾಗಿದೆ. ಆದರೂ ಹಳ್ಳಿಗಳಲ್ಲಿ ನಡೆಯುತ್ತಿದೆ ಎಂದಾಗ ಗರಂ ಆದ ಶಾಸಕ ನಕಲೀ ವೈದ್ಯರು ನೀಡಿರುವ ಚಿಕಿತ್ಸೆಯಿಂದ ಹಲವರು ತೊಂದರೆಗೀಡಾಗಿರುವ ದೂರುಗಳು ಕೇಳಿ ಬಂದಿದೆ. ಈ ಕೂಡಲೆ ಇಂತಹ ನಕಲಿ ಕ್ಲಿನಿಕ್ ಗಳಿಗೆ ಕಡಿವಾಣ ಹಾಕಬೇಕು. ಮುಚ್ಚದಿದ್ದರೆ ಪ್ರಕರಣ ದಾಖಲಿಸುವಂತೆ ಸೂಚಿಸಿದರು.ಹಳ್ಳಿಗಳಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆಯ ಅನುದಾನವನ್ನು ನೀರು ನೈರ್ಮಲ್ಯಕ್ಕೆ ಮೀಸಲಿಡಬೇಕು.
ಆ ಹಣದಲ್ಲಿ ಪಾಗಿಂಗ್ ಯಂತ್ರ ಖರೀದಿ, ಅಲ್ಲದೆ ಬೀದಿ ದೀಪಗಳಿಗೆ ಟೈಮರ್ ಅಳವಡಿಸಲು ಕ್ರಮ ವಹಿಸಬೇಕು. ಇದರಿಂದ ವಿದ್ಯುತ್ ಉಳಿತಾಯದ ಜತೆಗೆ ವಿದ್ಯುತ್ ಶುಲ್ಕ ಉಳಿತಾಯಕ್ಕೂ ಅನುಕೂಲವಾಗಲಿದೆ ಎಂದು ಇಒ ಹನುಮಂತಪ್ಪ ಪಿಡಿಒಗೆ ಸೂಚಿಸಿದರು.ಸಭೆಯಲ್ಲಿ ತಹಸೀಲ್ದಾರ ಜಗದೀಶ, ಕೆಡಿಪಿ ನಾಮ ನಿರ್ದೇಶಿತ ಸದಸ್ಯರಾದ ಡಾ.ದಾದಪೀರ್, ವೀರೇಶ,ಶೋಭಾ, ಶ್ರೀನಿವಾಸ ಇದ್ದರು.