ಸಾರಾಂಶ
ರಣ್ಯ ಇಲಾಖೆ ಹಾಗೂ ಸ್ಥಳೀಯ ಪೊಲೀಸರು ಎಚ್ಚೆತ್ತುಕೊಂಡು ಈ ಬೇಟೆಗಾರರನ್ನು ಖೆಡ್ಡಾಕ್ಕೆ ಬೀಳಿಸಬೇಕು ಎಂದು ಪಕ್ಷಿಪ್ರಿಯರು ಮತ್ತು ಸ್ಥಳೀಯರು ಒತ್ತಾಯಿಸಿದ್ದಾರೆ.
ಹೊಸಪೇಟೆ: ಬೇಸಿಗೆಯಲ್ಲಿ ಆಹಾರ, ನೀರು ಅರಸುತ್ತಾ ಬರುವ ಪಕ್ಷಿಗಳಿಗೆ ಬಲೆ ಬೀಸಲಾಗುತ್ತಿದೆ. ಜಿಲ್ಲೆಯ ನಾರಾಯಣ ದೇವರಕೆರೆ (ಲಡಕನಬಾವಿ) ಪ್ರದೇಶದಲ್ಲಿ ಪಕ್ಷಿ ವೀಕ್ಷಕರು ಪಕ್ಷಿ ವೀಕ್ಷಣೆ ಮಾಡುತ್ತಿರುವಾಗಲೇ ಬೇಟೆಗಾರರು ತಮ್ಮ ಕೈಚಳಕ ತೋರಿದ್ದಾರೆ.
ಅರಣ್ಯ ಇಲಾಖೆ ಹಾಗೂ ಸ್ಥಳೀಯ ಪೊಲೀಸರು ಎಚ್ಚೆತ್ತುಕೊಂಡು ಈ ಬೇಟೆಗಾರರನ್ನು ಖೆಡ್ಡಾಕ್ಕೆ ಬೀಳಿಸಬೇಕು ಎಂದು ಪಕ್ಷಿಪ್ರಿಯರು ಮತ್ತು ಸ್ಥಳೀಯರು ಒತ್ತಾಯಿಸಿದ್ದಾರೆ.ಮಾರ್ಚ್‌ನಿಂದ ಜೂನ್ ವರೆಗೆ ಪಕ್ಷಿಗಳು ಆಹಾರ, ನೀರು ಅರಸಿ ತುಂಗಭದ್ರಾ ಹಿನ್ನೀರು ಪ್ರದೇಶ, ಕಮಲಾಪುರ ಕೆರೆ, ಅಳ್ಳಿಕೆರೆ, ನಾರಾಯಣದೇವರ ಕೆರೆಗಳ ಕಡೆಗೆ ಆಗಮಿಸುತ್ತವೆ. ಇದೆಲ್ಲ ಗೊತ್ತಿದ್ದರೂ ಸಂಬಂಧಿಸಿದ ಇಲಾಖೆಗಳು ಎಚ್ಚೆತ್ತುಕೊಳ್ಳದೇ ಇರುವುದು ಸೋಜಿಗವನ್ನುಂಟು ಮಾಡಿದೆ.ಬದುಕಿ-ಬದುಕಿಸಿ:
ನಾರಾಯಣದೇವರ ಕೆರೆಯಲ್ಲಿ ಬೇಟೆಗಾರರು ಹೇಗೆ ಏ.5ರಂದು ಪಕ್ಷಿಗಳನ್ನು ಹೇಗೆ ಬೇಟೆಯಾಡಿದರು ಎಂಬುದರ ಬಗ್ಗೆ ಪಕ್ಷಿಪ್ರೇಮಿ ವಿಜಯ್ ಇಟಗಿ ತಮ್ಮ ಫೇಸ್‌ಬುಕ್ ಗೋಡೆಯಲ್ಲಿ ಬರೆದಿದ್ದಾರೆ. "ಬದುಕಿ-ಬದುಕಿಸಿ " ಎಂಬ ಸಾಲುಗಳೊಂದಿಗೆ ಆರಂಭಗೊಳ್ಳುವ ಈ ಬರಹದಲ್ಲಿ ಪಕ್ಷಿಗಳ ಮೇಲೆ ಹೇಗೆ ದಾಳಿ ನಡೆಯಿತು ಎಂಬುದನ್ನು ನೋವಿನಿಂದ ವಿವರಿಸಿದ್ದಾರೆ.ಕೃತ್ಯ ಮರುಕಳಿಸದಿರಲಿ:
ಪಕ್ಷಿಗಳ ಸಂರಕ್ಷಣೆಗೆ ಕ್ರಮ ವಹಿಸಬೇಕು. ಪಕ್ಷಿಗಳನ್ನು ಬೇಟೆಯಾಡುವವರನ್ನು ಬಂಧಿಸಬೇಕು. ಈಗಾಗಲೇ ದೂರು ಕೂಡ ಸಲ್ಲಿಸಲಾಗಿದೆ. ಇಂತಹ ಕೃತ್ಯಗಳು ಮರುಕಳಿಸಬಾರದು ಎನ್ನುತ್ತಾರೆ ಪಕ್ಷಿಪ್ರೇಮಿ ವಿಜಯ್ ಇಟಗಿ.
ನಾರಾಯಣದೇವರ ಕೆರೆ ಪ್ರದೇಶಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾದವರ ಪತ್ತೆಗೆ ಕ್ರಮ ವಹಿಸಲಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಲಾಗುವುದು ಎನ್ನುತ್ತಾರೆ ಡಿಎಫ್‌ಒ ವಿಜಯನಗರ ಆರ್ಸನಲ್.