ಪಕ್ಷಿಗಳ ದಾಹ ತಣಿಸುತ್ತಿದೆ ಪ್ರಾಣಸ್ನೇಹಿತರ ಗೆಳೆಯರ ಬಳಗ

| Published : Mar 31 2024, 02:01 AM IST

ಪಕ್ಷಿಗಳ ದಾಹ ತಣಿಸುತ್ತಿದೆ ಪ್ರಾಣಸ್ನೇಹಿತರ ಗೆಳೆಯರ ಬಳಗ
Share this Article
  • FB
  • TW
  • Linkdin
  • Email

ಸಾರಾಂಶ

ಇಂಡಿ ಪಟ್ಟಣದ ಪ್ರಾಣಸ್ನೇಹಿತರ ಗೆಳೆಯರ ಬಳಗ ಹಾಗೂ ಲೋಕೋಪಯೋಗಿ ಇಲಾಖೆ ಪಕ್ಷಿಗಳಿಗೆ ನೀರು, ಕಾಳು ಹಾಕಿ ಪ್ರಾಣಿ, ಪಕ್ಷಿಗಳಿಗೆ ಆಸರೆಯಾಗಿದ್ದಾರೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಬೇಸಿಗೆ ಕಾಲದಲ್ಲಿ ಜನರು ಎಲ್ಲೂ ನೀರು ಸಿಗದಿದ್ದರೆ ದುಡ್ಡುಕೊಟ್ಟು ಖರೀದಿಸಿಯಾದರೂ ದಾಹ ದೂರ ಮಾಡಿಕೊಳ್ಳುತ್ತಾರೆ. ಆದರೆ, ಮೂಕಪ್ರಾಣಿ, ಪಕ್ಷಿಗಳು ಏನು ಮಾಡಬೇಕು? ಜನರಿಗೆ ಸಿಗುವಷ್ಟು ಸುಲಭವಾಗಿ ಪ್ರಾಣಿ, ಪಕ್ಷಿಗಳಿಗೆ ಈ ಕಾಂಕ್ರಿಟ್‌ ಕಾಡಿನಲ್ಲಿ ನೀರು ಲಭಿಸುವುದಿಲ್ಲ. ನೀರಿನ ಅಭಾವದಿಂದ ಅವು ಪ್ರಾಣವನ್ನೇ ಕಳೆದುಕೊಳ್ಳುವ ಪರಿಸ್ಥಿತಿಯೂ ಬರುವುದುಂಟು. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಪಟ್ಟಣದ ಪ್ರಾಣಸ್ನೇಹಿತರ ಗೆಳೆಯರ ಬಳಗ ಹಾಗೂ ಲೋಕೋಪಯೋಗಿ ಇಲಾಖೆ ಪಕ್ಷಿಗಳಿಗೆ ನೀರು, ಕಾಳು ಹಾಕಿ ಪ್ರಾಣಿ, ಪಕ್ಷಿಗಳಿಗೆ ಆಸರೆಯಾಗಿದ್ದಾರೆ.ಬೇಸಿಗೆಯಲ್ಲಿ ಪಕ್ಷಿಗಳು ಬಹುಬೇಗ ದಾಹದಿಂದ ಪರಿತಪಿಸುತ್ತವೆ. ಅವುಗಳ ಬಾಯಾರಿಕೆ ನೀಗಿಸಲು ಪಟ್ಟಣದಲ್ಲಿ ನೀರಿನ ಮೂಲಗಳೇ ಮರೀಚಿಕೆಯಾಗಿದೆ. ಜನರು ಸಂಕಲ್ಪ ಮಾಡಿ ಸಾಧ್ಯವಿರುವ ಕೆಲ ಸಣ್ಣ ಪ್ರತ್ನಗಳಿಂದ ಪ್ರಾಣಿ, ಪಕ್ಷಿ ಸಂಕುಲವನ್ನು ಸಂರಕ್ಷಿಸಬಹುದಾಗಿದೆ. ಇದಕ್ಕೆ ಪಟ್ಟಣದ ಪ್ರಾಣಸ್ನೇಹಿತರ ಗೆಳೆಯರ ಬಳಗ ಹಾಗೂ ಲೋಕೋಪಯೋಗಿ ಇಲಾಖೆ ಮಾಡುತ್ತಿರುವ ಕಾರ್ಯ ಇತರರಿಗೆ ಮಾದರಿಯಾಗಿದೆ.

ಗಿಡಗಳಿಗೆ ಮಡಿಕೆ ಕಟ್ಟಿ ನೀರಿನ ಆಸರೆ !

ಪ್ರಸಕ್ತ ಬೇಸಿಗೆ ದಿನಗಳಲ್ಲಿ ಬಿಸಿಲಿನ ತಾಪ ಏರುತ್ತಿದೆ. ಈ ಬಿಸಿಲು ಪಟ್ಟಣದ ಪ್ರಾಣಿ, ಪಕ್ಷಿಗಳಿಗೂ ಸಂಕಷ್ಟ ತಂದಿಟ್ಟಿದೆ. ಇದನ್ನು ಮನಗಂಡು ಪ್ರಾಣಸ್ನೇಹಿತರ ಗೆಳೆಯರ ಬಳಗ ಹಾಗೂ ಲೋಕೋಪಯೋಗಿ ಇಲಾಖೆಯ ಎಇಇ ದಯಾನಂದ ಮಠ ಅವರು ಪ್ರವಾಸಿ ಮಂದಿರದ ಆವರಣದಲ್ಲಿರುವ ಮರ, ಗಿಡಗಳಿಗೆ ಮಡಿಕೆಗಳನ್ನು ಕಟ್ಟಿ ನೀರು ಹಾಕುವ ಮೂಲಕ ಪಕ್ಷಿಗಳ ದಾಹ ತೀರಿಸುವ ಕಾಯಕ ಮಾಡುತ್ತಿದ್ದಾರೆ.

ಪ್ರವಾಸಿ ಮಂದಿರದ ಆವರಣದಲ್ಲಿರುವ ಗಿಡ, ಮರ ಹಾಗೂ ಉದ್ಯಾನದಲ್ಲಿ ಗುಬ್ಬಿ, ಅಳಿಲು, ಕಾಗೆ ಹೀಗೆ ನಾನಾ ರೀತಿಯ ಪಕ್ಷಿಗಳು ಇಲ್ಲಿ ನಿತ್ಯ ವಾಸಿಸುತ್ತಿವೆ. ಮರಕ್ಕೆ ಕಟ್ಟಿದ ಮಡಿಕೆಗಳಲ್ಲಿನ ನೀರನ್ನು ಕುಡಿದು ದಾಹ ತೀರಿಸಿಕೊಳ್ಳುತ್ತಿವೆ.

ಪ್ರವಾಸಿ ಮಂದರಿದ ಆವರಣದಲ್ಲಿ ಗಾರ್ಡನ್‌ ನಿರ್ವಹಣೆ ಮಾಡಿ ನಾನಾ ಬಗೆಯ ಹೂವಿನ ಗಿಡಗಳನ್ನು ಬೆಳೆಸಿದ್ದಾರೆ. ಗಿಡದ ಟೊಂಗೆಯಲ್ಲಿ ಹಾಗೂ ಇತರೆ ಜಾಗದಲ್ಲಿ ಪಕ್ಷಿಗಳಿಗೆ ಅನುಕೂಲಕ್ಕಾಗಿ ಪ್ಲಾಸ್ಟಿಕ್‌ ತೊಟ್ಟಿಗಳನ್ನು ಇಡಲಾಗಿದೆ. ಕೆಲವು ಕಡೆ ನೇತು ಹಾಕಲಾಗಿದೆ. ಇಲ್ಲಿಗೆ ನೆರಳು ಹುಡುಕಿಕೊಂಡು ಗುಬ್ಬಿ, ಕಾಗೆ, ಅಳಿಲು ಸೇರಿದಂತೆ ಹತ್ತಾರು ರೀತಿಯ ಪಕ್ಷಿ, ಪ್ರಾಣಿಗಳು ಬರುತ್ತಿವೆ. ಅವುಗಳ ದಾಹ ತಣಿಸಲು ಈ ತೊಟ್ಟಿಗಳು ನೆರವಾಗುತ್ತಿವೆ.

ಮರಗಳಿಗೆ ನೀರಿನ ತೊಟ್ಟಿ:

ಬೇಸಿಗೆಯಲ್ಲಿ ಕುಡಿಯುವ ನೀರನ್ನು ಹುಡುಕಿಕೊಂಡು ಅಲೆಯುತ್ತಿರುವ ಪಕ್ಷಿಗಳ ಆಸರೆಗಾಗಿ ಪಟ್ಟಣದ ಪ್ರಾಣಸ್ನೇಹಿತರ ಬಳಗ ಪಟ್ಟಣದ ವಾರ್ಡ್‌ 12ರಲ್ಲಿನ ಎಲ್ಲ ಗಿಡ, ಮರಗಳಿಗೆ ಹಣ ಸಂಗ್ರಹಿಸಿ ಪ್ಲಾಸ್ಟಿಕ್‌ ತೊಟ್ಟಿಯನ್ನು ಕಟ್ಟಿ ಅವುಗಳಿಗೆ ನೀರು ತುಂಬಿಸಿ ಪಕ್ಷಿಗಳ ದಾಹ ತಣಿಸುವ ಕಾರ್ಯ ಮಾಡುತ್ತಿದ್ದಾರೆ. ಮರಗಳಿಗೆ ನೀರಿನ ತೊಟ್ಟಿ ನೇತುಹಾಕುವ ಕಾರ್ಯದಲ್ಲಿ ಪ್ರಾಣಸ್ನೇಹಿತರ ಬಳಗದ ಅವಿನಾಶ ಬಗಲಿ, ಶಿವುಕುಮಾರ ಬಿಸನಾಳ, ಶಿವು ಬಡಿಗೇರ, ಸುಧೀರ ಕರಕಟ್ಟಿ, ಸಂಕೇತ ಜೋಶಿ, ಪರಶುರಾಮ ಚೋಪಡೆ, ಕಿರಣ ಕ್ಷತ್ರಿ, ಮಹಾದೇವ ಹದಗಲ್ಲ, ರಮೇಶ ಗೊಳಸಾರ ತಂಡದವರು ತೊಡಗಿದ್ದಾರೆ.

ನೀವೂ ಮಾಡಿ:

ಬಿಸಿಲಿನ ತಾಪಕ್ಕೆ ಚಡಪಡಿಸುತ್ತಿರುವ ಪಕ್ಷಿಗಳಿಗೆ ತಮ್ಮ ತಮ್ಮ ಮನೆಯ ಮುಂದೆ ಇರುವ ಮರಗಳಿಗೆ ಇಲ್ಲವೆ ಮನೆಯ ಕೊಂಬೆಯ ಮೇಲೆ ಪ್ರತಿ ನಿತ್ಯ ನೀರಿನ ಮಡಿಕೆಗಳನ್ನು ಇಟ್ಟು ನೀರು ತುಂಬಿಸುವ ಕಾರ್ಯ ಮಾಡಿ ಮೂಕ ಪಕ್ಷಿಗಳ ದಾಹ ತಣಿಸಲು ತಾವೂ ಕೈಜೊಡಿಸಬೇಕು. ಪ್ರಾಣಿ, ಪಕ್ಷಿಗಳ ಸಂಕಷ್ಟಕ್ಕೆ ಕೈಲಾದಷ್ಟು ಸ್ಪಂದಿಸೋಣ. ತಪ್ಪದೇ ಗಿಡ, ಮರ,ಮನೆಯ ಕುಂಬೆಯ ಮೇಲೆ ನೀರು ತುಂಬಿದ ಪಾತ್ರೆ ಇಡುವುದನ್ನು ಮರೆಯಬೇಡಿ.

ಪ್ರಸಕ್ತ ವರ್ಷ ಮಳೆಯ ಕೊರತೆಯಿಂದ ಎಲ್ಲಿಯೂ ನೀರಿನ ಮೂಲ ಕಂಡುಬರುತ್ತಿಲ್ಲ. ಹೀಗಾಗಿ ಪ್ರಸಕ್ತ ಬೇಸಿಗೆಯಲ್ಲಿ ಪಕ್ಷಿಗಳಿಗೆ ಕುಡಿಯುವ ನೀರಿನ ದಾಹ ತಣಿಸಲು ಪ್ರಾಣಸ್ನೇಹಿತರ ಬಳಗ ಕಟ್ಟಿಕೊಂಡು ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿನ ಮರಗಳಿಗೆ ಪ್ಲಾಸ್ಟಿಕ್‌ ತೊಟ್ಟಿ ನೇತುಹಾಕಿ ನೀರು ಹಾಕುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ 12ನೇ ವಾರ್ಡ್‌ನಲ್ಲಿ 20ಕ್ಕೂ ಹೆಚ್ಚು ನೀರಿನ ತೊಟ್ಟಿಗಳನ್ನು ಗಿಡಕ್ಕೆ ನೇತುಹಾಕಿದ್ದೇವೆ. ಇನ್ನೆರಡು ದಿನದಲ್ಲಿ ಪಟ್ಟಣದ ತುಂಬೆಲ್ಲಾ ಮರಗಳಿಗೆ ಪಕ್ಷಿಗಳಿಗೆ ಕುಡಿಯಲು ಅನುಕೂಲವಾಗುವ ರೀತಿಯಲ್ಲಿ ನೀರಿನ ತೊಟ್ಟಿ ಕಟ್ಟಲಾಗುತ್ತದೆ.

-ಅವಿನಾಶ ಬಗಲಿ, ಪ್ರಾಣಸ್ನೇಹಿತರ ಬಳಗದ ಸದಸ್ಯ.

---

ಇಂಡಿ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಳಕಳಿಯಿಂದ 3 ವರ್ಷದ ಹಿಂದೇಯೇ ಉದ್ಯಾನ ನಿರ್ಮಾಣ ಮಾಡಲಾಗಿದೆ. ವಿವಿಧ ಬಗೆಯ ಹೂವಿನ ಗಿಡಗಳು, ಮರಗಳು ಉದ್ಯಾನದಲ್ಲಿವೆ. ಪ್ರತಿ ನಿತ್ಯ ಸಾಕಷ್ಟು ಪಕ್ಷಿಗಳು, ಅಳಿಲು ಇಲ್ಲಿ ಇರುತ್ತವೆ. ಅವುಗಳಿಗೆ ಕುಡಿಯುವ ನೀರಿನ ಅನುಕೂಲಕ್ಕಾಗಿ ಸುಮಾರು 25ಕ್ಕೂ ಅಧಿಕ ನೀರಿನ ತೊಟ್ಟಿಗಳನ್ನು ಮರಗಳಿಗೆ ನೇತುಹಾಕಲಾಗಿದೆ. ಪ್ರತಿ ನಿತ್ಯ ನೀರು ಹಾಕಲು ನಿರ್ವಹಣೆ ಮಾಡಲು ಬ್ರಹ್ಮಾನಂದ ಜೇವೂರಗೆ ಒಪ್ಪಿಸಲಾಗಿದೆ.

-ದಯಾನಂದ ಮಠ, ಎಇಇ ,ಲೋಕೋಪಯೋಗಿ ಇಲಾಖೆ, ಇಂಡಿ