ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ೬೨ನೇ ಹುಟ್ಟುಹಬ್ಬವನ್ನು ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಶನಿವಾರ ನಗರದಲ್ಲಿ ಹಲವು ಸಮಾಜ ಸೇವಾ ಕಾರ್ಯಗಳನ್ನು ಮಾಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.ಶನಿವಾರ ಬೆಳಗ್ಗೆ ನಗರದಲ್ಲಿರುವ ಶ್ರೀ ವಿದ್ಯಾನಗರದ ಗಣಪತಿ ದೇವಸ್ಥಾನದಲ್ಲಿ ಸಚಿವ ಚಲುವರಾಯಸ್ವಾಮಿ ಅವರ ಹೆಸರಿನಲ್ಲಿ ತಾಪಂ. ಮಾಜಿ ಅಧ್ಯಕ್ಷ ತ್ಯಾಗರಾಜು ಮಾಜಿ ಶಾಸಕ ಎಚ್.ಬಿ.ರಾಮು, ಕಾಂಗ್ರೆಸ್ ಮುಖಂಡ ಕಂಬದಹಳ್ಳಿ ಪುಟ್ಟಸ್ವಾಮಿ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು.
ತಾಪಂ ಮಾಜಿ ಅಧ್ಯಕ್ಷ ತ್ಯಾಗರಾಜು ಮಾತನಾಡಿ, ಸಚಿವರು ಮತ್ತು ನಮ್ಮ ನಾಯಕರಾದ ಚಲುವರಾಯಸ್ವಾಮಿ ಅವರ ಹುಟ್ಟುಹಬ್ಬ ಅಂಗವಾಗಿ ಮಿಮ್ಸ್ ಆಸ್ಪತ್ರೆಯಲ್ಲಿ ಜನಿಸಿದ ಮಕ್ಕಳಿಗೆ ಹೊಸ ಬಟ್ಟೆ, ರೈತರಿಗೆ ತೆಂಗಿನ ಸಸಿಗಳನ್ನು ವಿತರಿಸಲಾಗುತ್ತಿದೆ. ಮಮತೆಯ ಮಡಿಲು ಕೇಂದ್ರದಲ್ಲಿ ಅನ್ನದಾಸೋಹವನ್ನು ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿಯೂ ಕೂಡ ಆಯೋಜಿಸಲಾಗಿದೆ ಎಂದರು.ಮುಂದಿನ ದಿನಗಳಲ್ಲಿ ನಮ್ಮ ನಾಯಕರ ರಾಜಕೀಯ ಜೀವನ ನೆಮ್ಮದಿಯಾಗಿರಲಿ, ರಾಜಕೀಯ ಕ್ಷೇತ್ರದಲ್ಲಿ ಅವರ ಸಾಧನೆಗಳು ರಾಜ್ಯವ್ಯಾಪಿ ವಿಸ್ತರಣೆಯಾಗಲಿ, ಜನನಾಯಕರಾಗಿ ಬೆಳೆದು ರಾಜ್ಯದ ಚುಕ್ಕಾಣಿ ಹಿಡಿಯುವ ಸಾಮರ್ಥ್ಯವನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದ್ದೇವೆ ಎಂದರು.
ಮಾಜಿ ಶಾಸಕ ಎಚ್.ಬಿ.ರಾಮು ಮಾತನಾಡಿ, ಚಲುವರಾಯಸ್ವಾಮಿ ಅವರಿಗೆ ದೇವರು ಆಯಸ್ಸು, ಆರೋಗ್ಯ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇವೆ, ಅವರ ನೇತೃತ್ವದಲ್ಲಿ ಮಂಡ್ಯ ಜಿಲ್ಲೆ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲಿ ಎಂದು ಹಾರೈಸಿದರು.ಜಿಲ್ಲಾ ಹಿಂದುಳಿದ ವರ್ಗಗಳ ಕಾಂಗ್ರೆಸ್ ಸಂಘಟನಾ ಉಸ್ತುವಾರಿ ಹಳುವಾಡಿ ವೆಂಕಟೇಶ್ ಮಾತನಾಡಿ, ಸಚಿವ ಎನ್.ಚಲುವರಾಯಸ್ವಾಮಿ ಅವರ ಸಮರ್ಥ ನಾಯಕತ್ವದೊಂದಿಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಿಷ್ಠವಾಗಿ ಬೆಳೆದಿದೆ. ಎರಡು ವಿಧಾನಪರಿಷತ್ ಚುನಾವಣೆ, ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಹಿಂದೆ ಚಲುವರಾಯಸ್ವಾಮಿ ಅವರ ಪರಿಶ್ರಮವಿದೆ. ಮಂಡ್ಯ ಲೋಕಸಭೆ ಚುನಾವಣೆ, ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಕಾಣುವುದು ನಿಶ್ಚಿತವಾಗಿದ್ದು, ಅವರ ನೇತೃತ್ವದಲ್ಲಿ ಕಾಂಗ್ರೆಸ್ ಜಿಲ್ಲೆಯೊಳಗೆ ಭದ್ರ ನೆಲಗಟ್ಟನ್ನು ಹೊಂದಿದೆ ಎಂದರು.ನಂತರ ಮಂಡ್ಯ ಮಿಮ್ಸ್ ಆವರಣದ ಮಮತೆಯ ಮಡಿಲು ಆಶ್ರಯದಲ್ಲಿ ರೋಗಿಗಳಿಗೆ ಮತ್ತು ಅವರ ಪಾಲಕರಿಗೆ ಬೆಳಗಿನ ಉಪಹಾರವನ್ನು ಕಾಂಗ್ರೆಸ್ ಕಾರ್ಯುಕರ್ತರು ವಿತರಿಸಿದರು. ಅಲ್ಲದೇ ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಉಚಿತವಾಗಿ ವಿತರಿಸಲು ವ್ಯವಸ್ಥೆ ಮಾಡಲಾಗಿತ್ತು. ಮಿಮ್ಸ್ ಆಸ್ಪತ್ರೆಯಲ್ಲಿ ೬೨ ಮಕ್ಕಳಿಗೆ ಬಟ್ಟೆಗಳು, ಹಾಗೂ ೬೨ ತೆಂಗಿನ ಸಸಿ ವಿತರಿಸಲಾಯಿತು. ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು.
ಕಾಂಗ್ರೆಸ್ ಕಾರ್ಯಕರ್ತರಿಂದ ರಕ್ತದಾನ:ಮಂಡ್ಯ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ ಮತ್ತು ಅನಿಲ್ ಕುಮಾರ್ ನೇತೃತ್ವದಲ್ಲಿ ಮಿಮ್ಸ್‌ನ ರಕ್ತನಿಧಿ ಕೇಂದ್ರದಲ್ಲಿ ೬೨ ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ಕಾಂಗ್ರೆಸ್ ಮುಖಂಡ ಶಿವನಂಜು ರವರ ನೇತೃತ್ವದಲ್ಲಿ ಸ್ವರ್ಣಸಂದ್ರದ ಪ್ರೇರಣ ಅಂಧ ಮಕ್ಕಳ ಶಾಲೆಯಲ್ಲಿ ಲಘು ಉಪಹಾರ ನೀಡಲಾಯಿತು.
ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿವ ಪ್ರೇರಣ ವಿಶೇಷಚೇತನ ಶಾಲೆಯ ಮಕ್ಕಳಿಗೆ ಊಟ ವ್ಯವಸ್ಥೆಯನ್ನು ನಗರಸಭೆ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಶಿವನಂಜು, ಜಿಲ್ಲಾ ಹಿಂದುಳಿದ ವರ್ಗಗಳ ಕಾಂಗ್ರೆಸ್ ಸಂಘಟನಾ ಉಸ್ತುವಾರಿ ಹಳುವಾಡಿ ವೆಂಕಟೇಶ್ ನೇತೃತ್ವದಲ್ಲಿ ನಡೆಯಿತು. ವಿಶೇಷಚೇತನ ಮಕ್ಕಳು ಪ್ರಾರ್ಥನೆ ಸಲ್ಲಿಸಿದರು.