ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಬಿರುನಾಣಿ ವ್ಯಾಪ್ತಿಯಲ್ಲಿ ಒಂದೇ ನದಿಗೆ 2019 ಸಾಲಿನಲ್ಲಿ ಒಂದು, ಹಾಗೂ 2022 ಸಾಲಿನಲ್ಲಿ ಎರಡು ಒಟ್ಟು ಮೂರು ಕಡೆ ರು.5.05 ಕೋಟಿ ಸಣ್ಣ ನೀರಾವರಿ ಇಲಾಖೆ ಅನುದಾನದಲ್ಲಿ ನಿರ್ಮಿಸಿರುವ ಚೆಕ್ ಡ್ಯಾಮ್ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಮಂಗಳವಾರ ಖುದ್ದು ಚೆಕ್ ಡ್ಯಾಮ್‌ಗಳ ಸ್ಥಳ ಪರಿಶೀಲನೆ ನಡೆಸಿದರು.ಈ ಸಂದರ್ಭ ಮಾತನಾಡಿದ ಅವರು, ಈ ವೈಫಲ್ಯ ಕಂಡಿರುವ ಯೋಜನೆಗಳನ್ನು ಮುಂಗಾರು ಮುನ್ನ ಸರಿಪಡಿಸಲು ಎಂಜಿನಿಯರ್, ಎಲ್ಲಾ ಅಧಿಕಾರಿ ವರ್ಗ ಹಾಗೂ ಕಾಮಗಾರಿ ನಿರ್ಮಾಣ ಮಾಡಿದ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಅವರು ಕ್ರಮ ಕೈಗೊಳ್ಳುವುದ್ದನ್ನು ನೋಡಿ, ಮುಂದಿನ ಕ್ರಮ ಜರುಗಿಸುವುದಾಗಿ ಹೇಳಿದರು.
ನದಿಯಲ್ಲಿ ಹರಿದು ಹೋಗುವ ನೀರನ್ನು ತಡೆಹಿಡಿದು ಉಪಯೋಗಿಸುವ ನಿಟ್ಟಿನಲ್ಲಿ ನಿರ್ಮಿಸಿರುವ ಮೂರು ಚೆಕ್ ಡ್ಯಾಮ್‌ನಿಂದ ನದಿಯ ನೀರನ್ನು ತಡೆ ಹಿಡಿಯುವ ಕೆಲಸ ಆಗುತ್ತಿಲ್ಲ. ಆದರಿಂದ ಈ ಯೋಚನೆ ವಿಫಲವಾಗಿದೆ ಎಂದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅದರ ವೀಕ್ಷಣೆ ಮಾಡಲಾಗಿದೆ. ವೀಕ್ಷಣೆ ಸಂದರ್ಭ ಬಹಳ ಅವೈಜ್ಞಾನಿಕವಾಗಿ ಯೋಜನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದರು.ಈ ಯೋಜನೆ ರೂಪಿಸಿರುವ ಎಂಜಿನಿಯರ್‌ಗಳಿಗೆ, ಎಲ್ಲ ಅಧಿಕಾರಿಗಿ ವರ್ಗದವರಿಗೆ ಹಾಗೂ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.ಮಳೆಗಾಲ ಆರಂಭಕ್ಕೆ ಮುನ್ನ ಇದನ್ನು ಸರಿಪಡಿಸುವ ಕೆಲಸವಾಗಬೇಕು.ಬಹಳ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರ ಸರ್ಕಾರದ ಹಣ ಇಲ್ಲಿ ಬಳಕೆಯಾಗಿದೆ. ಹಣದ ದುರ್ಬಳಕೆ ಎಂಬ ಆರೋಪವನ್ನು ಈಗಲೇ ಮಾಡಲು ಹೋಗುವುದಿಲ್ಲ. ಆದರೂ ಕೂಡ ಇದು ವೈಜ್ಞಾನಿಕವಾಗಿ ನಡೆದಿಲ್ಲ. ಆದ್ದರಿಂದ ಮುಂಗಾರು ಆರಂಭದೊಳಗೆ ಆಗಿರುವ ಲೋಪದೋಷವನ್ನು ಸರಿಪಡಿಸಿ ಮುಂದಿನ ಬೇಸಿಗೆಯಲ್ಲಿ ನದಿ ನೀರನ್ನು ತಡೆಹಿಡಿದು ಜನರಿಗೆ ಉಪಯೋಗವಾಗುವ ರೀತಿಯಲ್ಲಿ ಈ ಯೋಜನೆ ಸರಿಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.
ಈ ಬಗ್ಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂದು ಎಂದು ನೋಡಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಈ ಸಂದರ್ಭ ಗ್ರಾಮಸ್ಥರಿಗೆ ಭರವಸೆ ನೀಡಿದರು.ಚೆಕ್ ಡ್ಯಾಮ್ ನಿರ್ಮಾಣದಿಂದ ನದಿಯ ನೀರು ನಿಲ್ಲುತ್ತಿಲ್ಲ. ಯೋಜನೆಯಿಂದ ಜನರಿಗೆ ಪ್ರಯೋಜನವಾಗಿಲ್ಲ, ಯೋಜನೆಯನ್ನು ಅಧಿಕಾರಿವರ್ಗ ನಿರ್ವಹಣೆ ಮಾಡುತಿದ್ದರೂ ನೀರು ಸಂಗ್ರಹವಾಗುತ್ತಿಲ್ಲ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು.
ಪೊನ್ನಂಪೇಟೆ ತಾಲೂಕು ಬಗರ್ ಹುಕುಂ ಅಕ್ರಮ ಸಕ್ರಮೀಕರಣ ಸಮಿತಿ ಅಧ್ಯಕ್ಷ ಅಣ್ಣಳಮಾಡ ಲಾಲ ಅಪ್ಪಣ್ಣ, ಬಿರುನಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಕುಪ್ಪಣಮಾಡ ಪ್ರೀತಮ್, ಗ್ರಾ. ಪಂ. ಅಧ್ಯಕ್ಷ ಬುಟ್ಟಿಯಂಡ ನಾಣಯ್ಯ, ಬೊಳ್ಳೇರ ಪೊನ್ನಪ್ಪ, ಅಣ್ಣಳಮಾಡ ಚಿಣ್ಣಪ್ಪ, ಪ್ಯಾಕ್ಸ್ ನಿರ್ದೇಶಕ ಕರ್ತಮಾಡ ಮಿಲನ್, ಕಾಳಿಮಾಡ ರಶಿಕ್, ಕರ್ತಮಾಡ ನಂದ, ಕಳಕಂಡ ಜೀತು ಕುಶಾಲಪ್ಪ, ಬಲ್ಯಮೀದರೀರ ರನ್ನು ಮತ್ತಿತರರು ಹಾಜರಿದ್ದರು.