ಸಾರಾಂಶ
ದಸರ ಮಹೋತ್ಸವಕ್ಕೆ ಅದ್ದೂರಿ ಸ್ವಾಗತ ಕೋರುತ್ತಿರುವ ದೀಪಾಲಂಕಾರ
ಕನ್ನಡಪ್ರಭ ವಾರ್ತೆ, ಬೀರೂರುಸರಸ್ವತಿಪುರಂ ಬಡಾವಣೆಯಲ್ಲಿ ನೆಲೆಸಿರುವ ಕಾರ್ಣೀಕದೊಡೆಯ ಇತಿಹಾಸ ಪ್ರಸಿದ್ಧ ಶ್ರೀಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣೀಕ ಇದೆ ಅ.13ರ ಭಾನುವಾರ ಬೆಳಗಿನ ಜಾವ 4ಕ್ಕೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪತ್ರಿಕೆಗೆ ತಿಳಿಸಿದೆ.ವಿಜಯದಶಮಿ ಅಂಗವಾಗಿ ಗುರುವಾರ (ಅ.10) ದೇವಾಲಯದಲ್ಲಿ ಗಂಗಾಪೂಜೆ, ಮೂಲಮೂರ್ತಿಗೆ ರುದ್ರಾಭಿಷೇಕ, ಗಣಪತಿ ಹೋಮ, ಮಲ್ಲಾರಿ ಹೋಮ, ಸಂಜೆ ಉತ್ಸವ ಮೂರ್ತಿ ಮೈಲಾರಲಿಂಗನನ್ನು ಪಟ್ಟಕ್ಕೆ ಕೂರಿಸಿದ ಬಳಿಕ ಕಾರ್ಣೀಕ ನುಡಿಯುವ ಅರ್ಚಕ ದಶರಥ ಪೂಜಾರರು, ಉಪವಾಸ ವ್ರತ ಆರಂಭಿಸುವರು. ಶುಕ್ರವಾರ (ಅ.11)ರಂದು ಮೈಲಾರಲಿಂಗ ಸ್ವಾಮಿಗೆ ರುದ್ರಾಭಿಷೇಕ, ಹೂವಿನ ಅಲಂಕಾರ ನಡೆಸಿ, ಶನಿವಾರ (ಅ.12) ಬೆಳಿಗ್ಗೆ ಮೂಲ ಮೂರ್ತಿಗೆ ಅಭಿಷೇಕ, ಅಲಂಕಾರ ನಡೆಸಿದ ನಂತರ ಸಂಜೆ ಸ್ವಾಮಿ ಉತ್ಸವ ಹೊರಡುವ ಪಲ್ಲಕ್ಕಿಗೆ ಪುಷ್ಪಾಲಂಕಾರ, ಮಹಾಮಂಗಳಾರತಿ ನಡೆಸಿ ಬೀರೂರು ಹೊರವಲಯದ ಗಾಳಿಹಳ್ಳಿ ಬಳಿ ಇರುವ ಪಾದದಕೆರೆ ಬಳಿಗೆ ಉತ್ಸವಮೂರ್ತಿ ಪಲ್ಲಕ್ಕಿ ಮೆರವಣಿಗೆ ತೆರಳಲಿದೆ. ಕೆರೆ ಬಳಿ ಇರುವ ಪಾದಗಟ್ಟೆಯಲ್ಲಿ ಸ್ವಾಮಿ ಪಾದಕ್ಕೆ ಅಭಿಷೇಕ, ಹಣ್ಣು- ತುಪ್ಪ ಸೇವೆ, ನೂರೊಂದು ಗಣಂಗಳ ಸೇವೆ ಬಳಿಕ ಉತ್ಸವ ಮೂರ್ತಿ ಬನ್ನಿ ಮುಡಿದು ಕಾರಣಿಕ ನುಡಿ ಆಡಲು ಬೀರೂರು ಪಟ್ಟಣದ ಮಹಾನವಮಿ ಬಯಲಿಗೆ ಉತ್ಸವದಲ್ಲಿ ತೆರಳುವುದು.ಬ್ರಾಹ್ಮೀ ಮುಹೂರ್ತದಲ್ಲಿ ಪಟ್ಟಣದ ಆದಿದೈವ ಶ್ರೀವೀರಭದ್ರ ಸ್ವಾಮಿ, ಬೀರಲಿಂಗೇಶ್ವರ ಸ್ವಾಮಿ, ಹಿರಿಯಂಗಳ ರುದ್ರಸ್ವಾಮಿ ಮತ್ತು ಮಿತ್ರ ಸಮಾಜ ಗಣಪತಿ ಉಪಸ್ಥಿತಿಯಲ್ಲಿ ಭಾನುವಾರ (ಅ.13) ಬೆಳಗಿನ ಜಾವ ಕಾರ್ಣೀಕ ಮಹೋತ್ಸವ ನೆರವೇರುವುದು. ಬಳಿಕ ಸರಸ್ವತಿಪುರಂ ನ ದೇವಾಲಯಕ್ಕೆ ವಾಪಸಾಗುವ ಸ್ವಾಮಿಗೆ ಸಂಜೆ 7ಕ್ಕೆ ದೋಣಿಸೇವೆ, ಸೋಮವಾರ (ಅ.14) ಪಟ್ಟಣದ ರಾಜಬೀದಿಗಳಲ್ಲಿ ಉತ್ಸವದ ಬಳಿಕ ದಸರಾಗೆ ತೆರೆ ಬೀಳಲಿದೆ.ಕಾರ್ಣೀಕ ನುಡಿ ಕೇಳಲು ಭಕ್ತಾದಿಗಳ ಜೊತೆ ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಪಟೇಲ್ ಮತ್ತು ಶಾಸಕ ಕೆ.ಎಸ್. ಆನಂದ್ , ಮಾಜಿ ಶಾಸಕರು ಸಹ ಆಗಮಿಸಲಿದ್ದಾರೆ. ನಿವೃತ್ತ ಬ್ಯಾಂಕ್ ನೌಕರ ಬಿ.ಟಿ.ಕುಮಾರ್ ಕುಟುಂಬದ ದೋಣಿಸೇವೆ, ದಸರಾ ಮಹೋತ್ಸವಕ್ಕೆ ಭಕ್ತರು ಆಗಮಿಸಿ ಸ್ವಾಮಿ ಕೃಪೆಗೆ ಪಾತ್ರರಾಗಬೇಕು ಎಂದು ಕೋರಿದ್ದಾರೆ.ದಸರಾಗೆ ಜಗಮಗಿಸುತ್ತಿರುವ ವಿದ್ಯುತ್ ಅಲಂಕಾರ:ವಿಜಯದಶಮಿ ದಸರಾ ಹಬ್ಬ ಬಂತೆದರೆ ಬೀರೂರು ಪಟ್ಟಣದಲ್ಲಿ ಪ್ರತಿ ವರ್ಷದಂತೆ ಸರಸ್ವತಿಪುರಂ ಬಡಾವಣೆಯಿಂದ ಮಹಾತ್ಮಗಾಂಧಿ ವೃತ್ತ ಹಾಗೂ ಮಹಾನವಮಿ ಬಯಲಿನವರೆಗೂ ದೇವಾಯಲದ ಗೌಡರು ರಸ್ತೆಯ ಎರಡು ಬದಿ ವಿದ್ಯುತ್ ದೀಪಾಲಂಕಾರದಿಂದ ರಸ್ತೆಗಳು ಊರಿನ ನೆಂಟರಿಷ್ಟರಿಗೆ ಬೆಳಕಿನ ಸ್ವಾಗತ ಕೋರುವಂತಿದೆ.10 ಬೀರೂರು 1ಬೀರೂರಿನ ಸರಸ್ವತಿಪುರಂ ಬಡಾವಣೆಯಲ್ಲಿ ನೆಲೆಸಿರುವ ಶ್ರೀಮೈಲಾರಲಿಂಗೇಶ್ವರ ಸ್ವಾಮಿ ಮೂಲಮೂರ್ತಿಗೆ ಕಾರ್ಣೀಕ ಮಹೋತ್ಸವದ ಅಂಗವಾಗಿ ಗುರುವಾರ ಅಲಂಕರಿಸಿರುವುದು