ಬಿಸರಳ್ಳಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥ

| Published : Mar 30 2024, 12:59 AM IST

ಸಾರಾಂಶ

ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮದಲ್ಲಿ ಉಂಟಾಗಿದ್ದ ಕುಡಿಯುವ ನೀರಿನ ಸಮಸ್ಯೆಯನ್ನು ತುರ್ತಾಗಿ ಸ್ಪಂದಿಸಿದ ಜಿಲ್ಲಾಡಳಿತ ಇತ್ಯರ್ಥ ಮಾಡಿದ್ದು, ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.

ಕೊಪ್ಪಳ: ತಾಲೂಕಿನ ಬಿಸರಳ್ಳಿ ಗ್ರಾಮದಲ್ಲಿ ಉಂಟಾಗಿದ್ದ ಕುಡಿಯುವ ನೀರಿನ ಸಮಸ್ಯೆಯನ್ನು ತುರ್ತಾಗಿ ಸ್ಪಂದಿಸಿದ ಜಿಲ್ಲಾಡಳಿತ ಇತ್ಯರ್ಥ ಮಾಡಿದ್ದು, ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದ್ದರಿಂದ ರೊಚ್ಚಿಗೆದ್ದ ವೃದ್ಧರು ಗ್ರಾಮ ಪಂಚಾಯಿತಿ ಎದುರು ಸತ್ಯಾಗ್ರಹ ನಡೆಸಿದ್ದರು. ಈ ಕುರಿತು ''''ಕನ್ನಡಪ್ರಭ'''' ಪ್ರಕಟಿಸಿದ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ತಕ್ಷಣ ಸ್ಪಂದಿಸಿದ್ದಾರೆ.

ತುಂಗಭದ್ರಾ ನದಿಯಿಂದ ನೀರು ಪೂರೈಕೆ ಮಾಡುತ್ತಿದ್ದ ಪಂಪ್‌ಸೆಟ್ ಸುಟ್ಟಿದ್ದರಿಂದ ನೀರಿನ ಸಮಸ್ಯೆಯಾಗಿತ್ತು. ಹೀಗಾಗಿ ಗ್ರಾಮದಲ್ಲಿ ನೀರು ಪೂರೈಕೆ ವ್ಯತ್ಯಯವಾಗಿದೆ. ಈಗ ಪಂಪ್‌ಸೆಟ್‌ ದುರಸ್ತಿ ಮಾಡಿದ್ದರಿಂದ ಸಮಸ್ಯೆ ನೀಗಿದೆ. ಈಗ ಬಿಸರಳ್ಳಿ ಗ್ರಾಮದಲ್ಲಿ ಸಮರ್ಪಕ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಬಿಸರಳ್ಳಿ ಗ್ರಾಮದ ಜನಸಂಖ್ಯೆ 4,120 ಇದೆ. ಬಿಸರಳ್ಳಿ ಗ್ರಾಮದಲ್ಲಿ 5 ಕುಡಿಯುವ ನೀರಿನ ಬೋರ್‌ವೆಲ್‌ ಇದೆ. ಬಿಸರಳ್ಳಿ ಗ್ರಾಮದಲ್ಲಿ ಬೋರ್‌ವೆಲ್‌ಗಳಿಂದ ಸರಬರಾಜು ಆಗುತ್ತಿರುವ ಕುಡಿಯುವ ನೀರು ಬಹಳಷ್ಟು ಗಡಸು ಇರುವುರಿಂದ ಕುಡಿಯಲು ಯೋಗ್ಯವಾಗಿಲ್ಲ. ಬಿಸರಳ್ಳಿ ಗ್ರಾಮಕ್ಕೆ ಸಿಹಿನೀರು ಸರಬುರಾಜು ಮಾಡಲು ಬೇಳೂರು ಗ್ರಾಮದ ಹತ್ತಿರ ಇರುವ ತುಂಗಭದ್ರಾ ಹಿನ್ನೀರಿನ ವ್ಯಾಪ್ತಿಯಲ್ಲಿ 5 ಕುಡಿಯವ ನೀರು ಬೋರ್‌ವೆಲ್‌ಗಳಿದ್ದು, ಅಲ್ಲಿನ ಪಂಪ್‌ಹೌಸ್‌ ಮೂಲಕ ಬಿಸರಳ್ಳಿ ಗ್ರಾಮಕ್ಕೆ ಸಿಹಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಕಳೆದ 4 ದಿನಗಳಿಂದ ಬೇಳೂರು ಗ್ರಾಮದ ಹತ್ತಿರ ಇರುವ ತುಂಗಭದ್ರಾ ಹಿನ್ನೀರಿನ ವ್ಯಾಪ್ತಿಯಲ್ಲಿನ ಪಂಪ್‌ಹೌಸ್‌ನಲ್ಲಿ ಮೋಟಾರ್‌ ಸುಟ್ಟಿದ್ದರಿಂದ ಬಿಸರಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಸರಬುರಾಜು ಮಾಡುವಲ್ಲಿ ಅಡಚಣೆಯಾಗಿತ್ತು.

ತುರ್ತು ಸಂದರ್ಭದಲ್ಲಿ ಗ್ರಾಮದಲ್ಲಿರುವ 5 ಬೋರ್‌ವೆಲ್‌ಗಳ ಮೂಲಕ ಕುಡಿಯುವ ನೀರು ಸರಬುರಾಜು ಸಹ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೇಳೂರು ಗ್ರಾಮದ ಹತ್ತಿರ ಇರುವ ತುಂಗಭದ್ರಾ ಹಿನ್ನೀರಿನ ವ್ಯಾಪ್ತಿಯಲ್ಲಿನ ಪಂಪ್‌ಹೌಸ್‌ನಲ್ಲಿ ಹೊಸ ಮೋಟಾರ್‌ ಅಳವಡಿಸಿ ಸಣ್ಣ-ಪುಟ್ಟ ದುರಸ್ತಿ ಕಾರ್ಯ ಕೈಗೊಂಡು ಬಿಸರಳ್ಳಿ ಗ್ರಾಮಕ್ಕೆ ಕುಡಿಯಲು ಸಿಹಿ ನೀರು ಸರಬುರಾಜು ಮಾಡಲಾಗುತ್ತಿದೆ. ಗ್ರಾಮದಲ್ಲಿ ಕುಡಿಯುವ ನೀರು ಸಮಸ್ಯೆಯಾಗದಂತೆ ಗ್ರಾಮ ಪಂಚಾಯಿತಿ ವತಿಯಿಂದ ಎಲ್ಲ ಕ್ರಮ ವಹಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.