ಸಾರಾಂಶ
- ಹೊನ್ನಾಳಿಯಲ್ಲಿ ಅಕ್ಷರ ದಾಸೋಹ ಬಿಸಿಊಟ ತಯಾರಕರ ಪ್ರತಿಭಟನೆಯಲ್ಲಿ ಆವರಗೆರ ಚಂದ್ರು ಒತ್ತಾಯ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆ ಕಾರ್ಯಕರ್ತರಿಗೆ ವೇತನ ಹೆಚ್ಚಳ ಮಾಡಬೇಕು, ನಿವೃತ್ತಿಗೊಳ್ಳುವ ಕಾರ್ಯಕರ್ತರಿಗೆ ಇಡುಗಂಟು ಹಣ ₹2 ಲಕ್ಷಕ್ಕೆ ಏರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ತಾಲೂಕು ಅಕ್ಷರ ದಾಸೋಹ ಬಿಸಿಊಟ ತಯಾರಕರ ಫೆಡರೇಷನ್‌ನಿಂದ ಗುರುವಾರ ಪ್ರತಿಭಟನೆ ನಡೆಯಿತು.ಎಐಟಿಸಿಯುಸಿ ಜಿಲ್ಲಾ ಮುಖಂಡ ಆವರಗೆರ ಚಂದ್ರು ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ಸರ್ಕಾರ ಅಡುಗೆ ತಯಾರಿಕರಿಗೆ ಮಾಸಿಕವಾಗಿ ₹3,700 ಹಾಗೂ ಸಹಾಯಕರಿಗೆ ₹3,600 ಮಾತ್ರ ಗೌರವಧನ ನೀಡುತ್ತಿದೆ. ಇದರಿಂದ ಅಡುಗೆ ತಯಾರಿಕರ ಕುಟುಂಬ ನಿರ್ವಹಣೆಗೆ ಸಾಕಾಗುವುದಿಲ್ಲ. ಹಾಗಾಗಿ, ಅವರ ಗೌರವಧನ ದುಪ್ಪಟ್ಟು ಮಾಡಬೇಕು. ಇಡುಗಂಟು ಹಣವನ್ನು ₹2 ಲಕ್ಷಕ್ಕೆ ಏರಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರು ಪಕ್ಷ ಅಧಿಕಾರಕ್ಕೆ ಬಂದರೆ ಬಿಸಿಯೂಟ ತಯಾರಕರಿಗೆ ಈಗ ಇರುವ ವೇತನ ಹೆಚ್ಚಿಸಲಾಗುವುದು. ಇದು ನಮ್ಮ ಸರ್ಕಾರದ 6ನೇ ಘೋಷಣೆ ಎಂದು ಭರವಸೆ ನೀಡಿದ್ದರು. ಪಕ್ಷ ಅಧಿಕಾರಕ್ಕೆ ಬಂದು 2 ವರ್ಷ ತುಂಬಿದ್ದರೂ ಇನ್ನು ಭರವಸೆ ಈಡೇರಿಸಿಲ್ಲ ಎಂದರು.ತಾಲೂಕು ಮುಖಂಡ ಪರಮೇಶ್ವರಪ್ಪ ಮಾತನಾಡಿ, 1972ರ ಕಾರ್ಮಿಕ ಕಾಯ್ದೆಯಂತೆ ನಿವೃತ್ತಿ ಹೊಂದುವ ಎಲ್ಲ ಅಡುಗೆ ತಯಾರಿಕರಿಗೂ ಉಪಧನ ನೀಡಬೇಕು, ಬ್ಯಾಂಕ್ ಜಂಟಿ ಖಾತೆ ಈ ಮೊದಲು ಇದ್ದಂತೆ ಮುಂದುವರಿಸಬೇಕು, ಮೊದಲು ಮುಖ್ಯ ಅಡುಗೆಯವರು ಹಾಗೂ ಮುಖ್ಯೋಪಾಧ್ಯಾಯರ ಹೆಸರಿನಲ್ಲಿ ಜಂಟಿ ಖಾತೆ ಇತ್ತು, ಈಗ ಏಕಾಏಕಿ ಅದನ್ನು ರದ್ದುಗೊಳಿಸಿ ಮುಖ್ಯೋಪಾಧ್ಯಾಯರು ಹಾಗೂ ಎಸ್‌ಡಿಎಂಸಿ ಹೆಸರಿನಲ್ಲಿ ಜಂಟಿ ಖಾತೆ ಮಾಡಿಸಿದ್ದಾರೆ. ಈ ಕೂಡಲೇ ಇದನ್ನು ರದ್ದುಗೊಳಿಸಿ ಎಂದು ಆಗ್ರಹಿಸಿದರು.
ಪ್ರತಿಭಟನೆ ಬಳಿಕ ತಹಸೀಲ್ದಾರ್ ಪಟ್ಟರಾಜಗೌಡ ಮುಖೇನ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಫೆಡರೇಷನ್ ಮುಖಂಡರಾದ ನ್ನಾಗರತ್ನ, ನಾಗಮ್ಮ, ಮಂಜುಳಾಬಾಯಿ, ಯಶೋಧ, ಲಕ್ಷ್ಮೀಬಾಯಿ ರತ್ನಮ್ಮ, ಸುಕನ್ಯ, ಪ್ರೇಮಮ್ಮ, ತುಂಗಮ್ಮ, ಸರೋಜ, ಮಂಜುಳ, ಕವಿತಾ, ಶಕೀಲ ಬಾನು, ರೇಣುಕಮ್ಮ, ರಾಧ, ಸುನೀತಾ, ಕರಿಯಮ್ಮ, ಮೀನಾಕ್ಷಮ್ಮ ಹಾಗೂ ಇತರರು ಇದ್ದರು.- - -
ಕೋಟ್ ಬಿಸಿಯೂಟ ಯೋಜನೆ ಪ್ರಾರಂಭವಾದ ನಂತರ ಈವರೆವಿಗೂ ರಾಜ್ಯದಲ್ಲಿ ಅಡುಗೆ ಮಾಡುವಾಗ ಕುಕ್ಕರ್ ಸ್ಪೋಟಗೊಂಡು ಸುಮಾರು 15 ಜನ ಮೃತಪಟ್ಟಿದ್ದಾರೆ,ಇಂತಹ ಕಟುಂಬಗಳಿಗೆ ಸರ್ಕಾರ ಇದುವರೆವಿಗೂ ಪರಿಹಾರ ಘೋಷಿಸಿಲ್ಲ, ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಪರಿಹಾರ ನೀಡಬೇಕು- ಆವರಗೆರೆ ಚಂದ್ರು, ಮುಖಂಡ, ಎಐಟಿಯುಸಿ
- - - -6ಎಚ್.ಎಲ್.ಐ2.ಜೆಪಿಜಿ:ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹೊನ್ನಾಳಿ ತಾಲೂಕು ಅಕ್ಷರ ದಾಸೋಹ ಬಿಸಿಊಟ ತಯಾರಕರ ಫೆಡರೇಷನ್ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಅರ್ಪಿಸಲಾಯಿತು.