ಸಮಾನ ಅವಕಾಶ ನೀಡುವ ಸಂವಿಧಾನ ಬದಲಾವಣೆ ಬಿಜೆಪಿ ಉದ್ದೇಶ

| Published : Apr 18 2024, 02:18 AM IST

ಸಾರಾಂಶ

ಕಳೆದ 10 ವರ್ಷಗಳಿಂದ ಅಲ್ಪಸಂಖ್ಯಾತ ಸಮುದಾಯ ಸೇರಿ ದುಡಿಯುವ ವರ್ಗಗಳು ಸಂಕಷ್ಟಕ್ಕೆ ಸಿಲುಕಿವೆ. ಇದನ್ನು ತಡೆಯಬೇಕಾದರೆ ನಾವು ಈಗ ಸಂವಿಧಾನದ ಪರವಾಗಿರುವ ಕಾಂಗ್ರೆಸ್ ಗೆ ಮತ ನೀಡಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಸಂವಿಧಾನವು ಧಾರ್ಮಿಕ ಆಚರಣೆಗೆ ಸಮಾನ ಅವಕಾಶ. ಸಮಾನತೆಗೆ ಮೊದಲ ಆದ್ಯತೆ ನೀಡಿರುವುದರಿಂದ ಬಿಜೆಪಿ ಸಂವಿಧಾನವನ್ನೇ ಬದಲಿಸಲು ಮುಂದಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಆರೋಪಿಸಿದರು.

ಕಾಂಗ್ರೆಸ್ ಭವನದಲ್ಲಿ ಅಲ್ಪಸಂಖ್ಯಾತರ ಘಟಕವು ಆಯೋಜಿಸಿದ್ದ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂವಿಧಾನದಲ್ಲಿ ಸಮಾನತೆಗೆ ಹೆಚ್ಚಿನ ಅವಕಾಶ ನೀಡಿರುವುದರಿಂದ ಬಿಜೆಪಿ ಸಂವಿಧಾನ ಬದಲಾವಣೆಗೇ ಮುಂದಾಗಿದೆ.

ಕಳೆದ 10 ವರ್ಷಗಳಿಂದ ಅಲ್ಪಸಂಖ್ಯಾತ ಸಮುದಾಯ ಸೇರಿ ದುಡಿಯುವ ವರ್ಗಗಳು ಸಂಕಷ್ಟಕ್ಕೆ ಸಿಲುಕಿವೆ. ಇದನ್ನು ತಡೆಯಬೇಕಾದರೆ ನಾವು ಈಗ ಸಂವಿಧಾನದ ಪರವಾಗಿರುವ ಕಾಂಗ್ರೆಸ್ ಗೆ ಮತ ನೀಡಬೇಕು ಎಂದು ಅವರು ಹೇಳಿದರು.

ಈ ಬಾರಿ ಲೋಕಸಭಾ ಚುನಾವಣೆಯು ಸತ್ಯ ಮತ್ತು ಸುಳ್ಳಿನ ನಡುವೆ ನಡೆಯುತ್ತಿದೆ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವ ವಾಗ್ದಾನಗಳನ್ನು ಜನತೆಗೆ ನೀಡಿದರು. ಆದರೆ, ಯಾವುದನ್ನೂ ಈಡೇರಿಸಲಿಲ್ಲ. ಕಾಂಗ್ರೆಸ್ ಪಕ್ಷ ನೀಡಿದ ಎಲ್ಲಾ ಅಶ್ವಾನೆಗಳನ್ನು ಈಡೇರಿಸಿದೆ. ನಾವು ಕೆಲಸ ಮಾಡಿದ್ದೇವೆ, ಜನತೆ ನಮ್ಮ ಕೆಲಸಕ್ಕೆ ಕೂಲಿ ಕೊಡಬೇಕು ಎಂದು ಅವರು ಕೋರಿದರು.

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಲ್ಲ. ಈ ರಾಜ್ಯದ ಬಡ ಕುಟುಂಬಗಳಿಗೆ ಸ್ವಾಭಿಮಾನ ಬದುಕಿಗಾಗಿ ಗ್ಯಾರಂಟಿ ಅನುಷ್ಠಾನಗೊಳಿಸಿದೆ. ಇದನ್ನು ಮತದಾರರಿಗೆ ತಿಳಿಸಬೇಕು ಎಂದು ಅವರು ಕರೆ ನೀಡಿದರು.

ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಮಾತನಾಡಿ, ದೇಶದಲ್ಲಿ ಹೊಡೆದಾಳುವ ನೀತಿಯನ್ನು ಕೇಂದ್ರದ ಆಳುವ ಸರ್ಕಾರ ಅನುಸರಿಸುತ್ತಿದೆ. ಆದರೆ, ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಸಂಪೂರ್ಣ ರಕ್ಷಣೆ ನೀಡಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಅಬ್ದುಲ್ಜಬ್ಬಾರ್ ಮಾತನಾಡಿ, ಬಿಜೆಪಿಯವರು ಮುಸ್ಲಿಂ- ಪಾಕಿಸ್ಥಾನ ಎಂದು ಭಾಷಣ ಮಾಡಿದರೆ ಯಾವ ಹಿಂದೂಗಳದ್ದು, ಹೊಟ್ಟೆ ತುಂಬುವುದಿಲ್ಲ. ಮುಂದಿನ ಚುನಾವಣೆ ಸ್ವಾಭಿಮಾನದಿಂದ ಬದುಕಬೇಕೆಂದರೆ ಕಾಂಗ್ರೆಸ್ ಗೆ ಮತ ದಾನ ಮಾಡಬೇಕು. ದೃಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಅಲ್ಪಸಂಖ್ಯಾತರು ಶೇ. 100ರಷ್ಟು ಮತದಾನ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ನೂತನ ಪದಾಧಿಕಾರಿಗಳಿಗೆ ನೇಮಕ ಪತ್ರ ವಿತರಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಯಕುಮಾರ್, ಮಾಜಿ ಮೇಯರ್ ಹರೀಫ್ ಹುಸೇನ್, ನಗರ ಪಾಲಿಕೆ ಮಾಜಿ ಸದಸ್ಯ ಶೌಕತ್ ಪಾಷ, ಅಜ್ಹರತ್ ಪಾಷ, ಕಾಂಗ್ರೆಸ್ನಗರಾಧ್ಯಕ್ಷ ಆರ್. ಮೂರ್ತಿ ಮೊದಲಾದವರು ಇದ್ದರು.

---

ಕೋಟ್

ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಮುಸ್ಲಿಂ ಸಮುದಾಯ ಹೋರಾಟ ಮಾಡಿತ್ತು. ಈಗ ಅದೇ ಮಾದರಿಯ ತ್ಯಾಗದ ಹೋರಾಟಕ್ಕೆ ಸಜ್ಜಾಗಬೇಕು.

- ತನ್ವೀರ್ ಸೇಠ್, ಕೆಪಿಸಿಸಿ ಕಾರ್ಯಾಧ್ಯಕ್ಷ