ಬಿಜೆಪಿ ಮಂಡಲಾಧ್ಯಕ್ಷ ಸ್ಥಾನದ ಮೇಲೆ ಬಂದ ಆರೋಪದಿಂದ ಸಮಾಜಕ್ಕೆ ಸುಳ್ಳು ಸಂದೇಶ ಹೋಗಿದೆ. ಆದ್ದರಿಂದ ಈ ಬಗ್ಗೆ ತಹಸೀಲ್ದಾರರು ಕೂಲಂಕಷ ತನಿಖೆ ನಡೆಸಿ ಭೂಕಬಳಿಕೆಯ ಆರೋಪದ ಸತ್ಯಸತ್ಯಾತೆಯ ವರದಿ ಬಹಿರಂಗ ಪಡಿಸಬೇಕು. ಸುಳ್ಳು ಆರೋಪ ಮಾಡಿ ಬಿಜೆಪಿ ವರ್ಚಸ್ಸಿಗೆ ಧಕ್ಕೆ ತರಲು ಅವಕಾಶವಿಲ್ಲ.

ಕನ್ನಡಪ್ರಭ ವಾರ್ತೆ ಕುಮಟಾ

ಬಿಜೆಪಿ ಮಂಡಲಾಧ್ಯಕ್ಷ ಸ್ಥಾನದ ಮೇಲೆ ಬಂದ ಆರೋಪದಿಂದ ಸಮಾಜಕ್ಕೆ ಸುಳ್ಳು ಸಂದೇಶ ಹೋಗಿದೆ. ಆದ್ದರಿಂದ ಈ ಬಗ್ಗೆ ತಹಸೀಲ್ದಾರರು ಕೂಲಂಕಷ ತನಿಖೆ ನಡೆಸಿ ಭೂಕಬಳಿಕೆಯ ಆರೋಪದ ಸತ್ಯಸತ್ಯಾತೆಯ ವರದಿ ಬಹಿರಂಗ ಪಡಿಸಬೇಕು. ಸುಳ್ಳು ಆರೋಪ ಮಾಡಿ ಬಿಜೆಪಿ ವರ್ಚಸ್ಸಿಗೆ ಧಕ್ಕೆ ತರಲು ಅವಕಾಶವಿಲ್ಲ ಎಂದು ಬಿಜೆಪಿ ಮಂಡಲಾಧ್ಯಕ್ಷ ಜಿ.ಐ. ಹೆಗಡೆ ಸ್ಪಷ್ಟವಾಗಿ ಹೇಳಿದರು.

ಬಿಜೆಪಿ ಮಂಡಲಾಧ್ಯಕ್ಷ ಜಿ.ಐ. ಹೆಗಡೆ ಭೂಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ತಹಸೀಲ್ದಾರಿಗೆ ಹಿಂದೆ ಮೂರೂರು ಭಾಗದ ಕೆಲವರು ಮನವಿ ನೀಡಿದ್ದರ ಕುರಿತು ಕೂಲಂಕಷ ತನಿಖೆಗೆ ಆಗ್ರಹಿಸಿದ ಮನವಿ ತಹಸೀಲ್ದಾರ ಶ್ರೀಕೃಷ್ಣ ಕಾಮಕರ ಅವರಿಗೆ ತಾಲೂಕು ಸೌಧದಲ್ಲಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು, ಪುಂಡುಪೋಕರಿಗಳು ಮಾಡುವ ಆರೋಪಗಳಿಗೆ ಸಜ್ಜನ ಸಮಾಜ ಉತ್ತರಿಸಲು ಸಾಧ್ಯವಿಲ್ಲ. ಆದರೆ ಕಳೆದ ೨೨ ವರ್ಷಕ್ಕೂ ಹೆಚ್ಚು ಸಮಯದಿಂದ ಸಾರ್ವಜನಿಕ ಜೀವನದಲ್ಲಿದ್ದ ನಾನು ಆರೋಪ ಬಂದ ತಕ್ಷಣ ಪಕ್ಷದ ವರ್ಚಸ್ಸಿಗೆ ನನ್ನಿಂದ ಧಕ್ಕೆಯಾಗಬಾರದು ಎಂದು ಮಂಡಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ವೈಯಕ್ತಿಕವಾಗಿ ಹೋರಾಡಲು ಸಿದ್ಧನಿದ್ದೆ. ಆದರೆ ಪಕ್ಷದ ವರಿಷ್ಠರ ಸೂಚನೆಯಂತೆ ರಾಜೀನಾಮೆ ನೀಡಿಲ್ಲ. ನಮ್ಮ ಪಕ್ಷದಲ್ಲಿ ನಿಷ್ಠಾವಂತರಿದ್ದಾರೆ. ನಾವು ಸಜ್ಜನ ಸಮಾಜದವರಾಗಿದ್ದು ದುರಾಲೋಚನೆಯ ಮಿತಿಮೀರಿದ ಆರೋಪಗಳಿಗೆ ತಕ್ಕ ಉತ್ತರ ನೀಡಲೇಬೇಕಿದೆ ಎಂದರು.

ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಮಾತನಾಡಿ, ಬಿಜೆಪಿ ಕುಮಟಾ ಮಂಡಲಾಧ್ಯಕ್ಷರ ಮೇಲೆ ಬಂದ ಆಪಾದನೆ ಮತ್ತು ಈ ಕ್ಷೇತ್ರದಲ್ಲಿ ತೊಂದರೆಗೆ ಒಳಗಾದವರ ಸಹಾಯಕ್ಕೆ ಜಿ.ಐ. ಹೆಗಡೆ ನ್ಯಾಯಯುತ ಹೋರಾಟ ಮಾಡುತ್ತಿದ್ದಾರೆ. ಪಕ್ಷ ಅವರೊಂದಿಗೆ. ಅವರು ರಾಜಿನಾಮೆ ಕೊಡುವ ಅಗತ್ಯವಿಲ್ಲ. ಈ ಬಗ್ಗೆ ತಕ್ಷಣ ತನಿಖೆಗೆ ಅಧಿಕಾರಿಗಳನ್ನು ಕೇಳುತ್ತೇವೆ. ಕೆಲವು ಅಧಿಕಾರಿಗಳು ತಾವು ಮಾಡಿದ್ದೇ ಆಟ ಎನ್ನುವಂತಾಗಿದೆ. ಸರ್ಕಾರವೇ ಸತ್ತು ಹೋಗಿದೆ. ಆದರೂ ನ್ಯಾಯ ಕೇಳಿ ಬಂದವರಿಗೆ ನ್ಯಾಯ ಕೊಡಿ ಎಂದು ಅಧಿಕಾರಿಗಳಿಗೆ ಆಗ್ರಹಿಸುತ್ತೇವೆ ಎಂದರು.

ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ರಾಜ್ಯ ಶಿಕ್ಷಣ ಪ್ರಕೋಷ್ಠದ ಸಹ ಸಂಚಾಲಕ ಪ್ರೊ. ಎಂ.ಜಿ. ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಜಿ.ಎಸ್. ಗುನಗಾ, ಮಾಜಿ ತಾಲೂಕಾಧ್ಯಕ್ಷ ಕುಮಾರ ಮಾರ್ಕಾಂಡೇಯ, ನಿಕಟಪೂರ್ವ ಮಂಡಲಾಧ್ಯಕ್ಷ ಹೇಮಂತಕುಮಾರ್ ಗಾಂವಕರ, ಗೋಕರ್ಣ ಮಂಡಲಾಧ್ಯಕ್ಷ ಗಣೇಶ ಪಂಡಿತ, ನಗರ ಶಕ್ತಿಕೇಂದ್ರದ ಅಧ್ಯಕ್ಷ ತಿಮ್ಮಪ್ಪ ಮುಕ್ರಿ, ಸುಮತಿ ಭಟ್, ವಿ.ಹಿಂ.ಪರಿಷತ್ತಿನ ಸದಾನಂದ ಕಾಮತ ಸೇರಿದಂತೆ ನೂರಾರು ಜನರು ಇದ್ದರು.