ಸಾರಾಂಶ
ಗುಡಿಬಂಡೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರು, ಮಠ, ಮಂದಿರಗಳಿಗೆ ಸೇರಿದ ಜಾಗವನ್ನು ಪಹಣಿ ಕಲಂ 11 ರಲ್ಲಿ ವಕ್ಫ್ ಎಂದು ನಮೂದು ಮಾಡುತ್ತಿರುವುದನ್ನು ತಡೆಯುವಂತೆ ಒತ್ತಾಯಿಸಿ ಭಾರತೀಯ ಜನತಾ ಪಾರ್ಟಿ ಕಾನೂನು ಪ್ರಕೋಷ್ಠ ತಾಲೂಕು ಘಟಕದ ವತಿಯಿಂದ ಗೌರ್ನರ್ ರವರಿಗೆ ತಹಸೀಲ್ದಾರ್ ರವರ ಮೂಲಕ ಮನವಿ ಸಲ್ಲಿಸಲಾಯಿತು.
ಬಿಜೆಪಿ ಕಾನೂನು ಪ್ರಕೋಷ್ಠದ ಮಂಜುನಾಥ್ ಮಾತನಾಡಿ, ಹಿಂದೆ ಕಾಂಗ್ರೆಸ್ ನವರು ರೂಪಿಸಿರುವ ವಕ್ಫ್ ಕಾಯ್ದೆ ಮುಸ್ಲಿಂ ತುಷ್ಟೀಕರಣಕ್ಕಾಗಿ ರಚಿಸಿರುವ ಕಾಯ್ದೆಯಾಗಿದೆ. ಕರ್ನಾಟಕದ ಅಲ್ಪಸಂಖ್ಯಾತರ ಹಾಗೂ ವಕ್ಫ್ ಸಚಿವರಾದ ಜಮೀರ್ ಅಹ್ಮದ್ ಖಾನ್ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಿ ವಕ್ಫ್ ಪ್ರಗತಿ ಪರಿಶೀಲನೆ ಹಾಗೂ ವಕ್ಫ್ ಅದಾಲತ್ ಗಳನ್ನು ನಡೆಸಿ ಕರ್ನಾಟಕ ಸರ್ಕಾರದ 1974ರ ಗೆಜೆಟ್ ಆಗಿರುವ ಪ್ರಕಾರ ರೈತರ ಕೃಷಿ ಜಮೀನು, ಮಠ, ಮಂದಿರಗಳ ಆಸ್ತಿಗಳನ್ನೂ ಸೇರಿದಂತೆ ಬಹುದೊಡ್ಡ ಪ್ರಮಾಣದ ಆಸ್ತಿಗಳನ್ನು ವಕ್ಫ್ ಹೆಸರಿನಲ್ಲಿ ಕಂದಾಯ ದಾಖಲೆಗಳಲ್ಲಿ ನಮೂದಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈಗಾಗಲೇ ಕೇಂದ್ರದಲ್ಲಿ ಮೋದಿಯವರ ಸರ್ಕಾರ ವಕ್ಫ್ ಕಾಯ್ದೆಯ ಕುರಿತು ಹೊಸ ವಕ್ಫ್ ಕಾಯ್ದೆ ರಚಿಸುವ ಕ್ರಮಕ್ಕೆ ಮುಂದಾಗಿದೆ. ಕರಡು ಕಾಯ್ದೆಯನ್ನು ಸದನದಲ್ಲಿ ಮಂಡಿಸಿದ್ದಾರೆ. ಈ ಕಾಯ್ದೆ ಮುಂದಿನ ಸಂಸತ್ತಿನಲ್ಲಿ ಮಂಜೂರಾಗುವ ಸಾಧ್ಯತೆಯಿದೆ. ಈ ಆತಂಕದಿಂದ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸೂಚನೆಯ ಮೇರೆಗೆ ಜಮೀರ್ ಅಹ್ಮದ್ ಖಾನ್ ವಕ್ಫ್ ಆಸ್ತಿ ಎಂದು ನಮೂದಿಸುವ ಹುನ್ನಾರ ನಡೆಸಿದ್ದಾರೆ. ಆದ್ದರಿಂದ ಕೂಡಲೇ ರಾಜ್ಯಪಾಲರು ವಕ್ಫ್ ಎಂದು ನಮೂದಿಸದಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದರು.
ಬಿಜೆಪಿ ಕಾನೂನು ಪ್ರಕೋಷ್ಠ ತಾಲೂಕು ಘಟಕದ ಬದ್ರಿನಾಥ್, ಶರತ್, ಗಂಗರೆಡ್ಡಿ, ಗಜನಾಣ್ಯ ನಾಗರಾಜು, ಮಧುಸೂಧನ್, ಪದ್ಮಾವತಮ್ಮ, ರವಿ, ರೈತ ಸಂಘದ ಸೋಮಶೇಖರ್, ಚಲವಾದಿ ಸಂಘಟನೆಯ ಎಂ.ಸಿ.ಚಿಕ್ಕನರಸಿಂಹಪ್ಪ ಮತ್ತಿತರರು ಇದ್ದರು.