ಮತದಾರರಿಗೆ ಉತ್ತರಿಸಿ ಬಿಜೆಪಿಗರಿಂದ ಶಾಸಕರಿಗೆ ಮನವಿ

| Published : Feb 13 2024, 12:46 AM IST

ಸಾರಾಂಶ

ಅಭಿವೃದ್ಧಿ ಕಾರ್ಯಗಳ ವಿವರ ಒದಗಿಸುವಂತೆ ಆಗ್ರಹಿಸಿ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ನೇತೃತ್ವದಲ್ಲಿ ಬಿಜೆಪಿ ತಾಲೂಕಾ ಘಟಕದ ಸದಸ್ಯರು ಪಟ್ಟಣದ ಪ್ರವಾಸಿಮಂದಿರದಲ್ಲಿ ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಬಿಜೆಪಿ ಹಮ್ಮಿಕೊಂಡಿರುವ ಮತದಾರರಿಗೆ ಉತ್ತರಿಸಿ ಅಭಿಯಾನದ ಹಿನ್ನೆಲೆ ಬ್ಯಾಡಗಿ ವಿಧಾನಸಭಾ ಕ್ಷೇತ್ರಕ್ಕೆ ತಂದಿರುವ ಹಾಗೂ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನ, ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ವಿವರ ಒದಗಿಸುವಂತೆ ಆಗ್ರಹಿಸಿ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ನೇತೃತ್ವದಲ್ಲಿ ಬಿಜೆಪಿ ತಾಲೂಕಾ ಘಟಕದ ಸದಸ್ಯರು ಪಟ್ಟಣದ ಪ್ರವಾಸಿಮಂದಿರದಲ್ಲಿ ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಶಾಸಕರಾಗಿ ಒಂದು ವರ್ಷ ಅವಧಿ ಸಮೀಪಿಸುತ್ತಿದೆ. ಆದರೆ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ, ಇದು ಜನರ ಮುಂದಿರುವ ಸತ್ಯ, ಶಾಸಕರಾದ ಬಳಿಕ ಬ್ಯಾಡಗಿ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರ ನೀಡಿರುವ ಅನುದಾನವೆಷ್ಟು..? ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ಲಿಖಿತ ಮಾಹಿತಿ ನೀಡುವಂತೆ ಆಗ್ರಹಿಸಿದರು.

ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿದೆ, ಜಿಲ್ಲೆ ಸೇರಿದಂತೆ ಕ್ಷೇತ್ರದ ರೈತರು ಕಂಗಾಲಾಗಿದ್ದಾರೆ. ಬರಗಾಲಕ್ಕೆ ಸಿಲುಕಿ ನಲುಗಿರುವ ರೈತರಿಗೆ ಸರ್ಕಾರದಿಂದ ಬಿಡುಗಡೆ ಮಾಡಿಸಿರುವ ಪರಿಹಾರವೆಷ್ಟು..? ಕ್ಷೇತ್ರದಲ್ಲಿ ಸೃಷ್ಟಿ ಮಾಡಿರುವ ಉದ್ಯೋಗಗಳೆಷ್ಟು ಶೈಕ್ಷಣಿಕ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು..? ಉತ್ತಮ ದರ್ಜೆ ಆರೋಗ್ಯ ಸೇವೆಗೆ ಒದಗಿಸಲು ಮಾಡಿರುವ ಹೊಸ ಯೋಜನೆಗಳು ಯಾವವು ಎಂದು ಪ್ರಶ್ನಿಸಿದರು.

ಕ್ಷೇತ್ರದಲ್ಲಿ ಹೊಸದಾಗಿ ಎಷ್ಟು ಕಿಮೀ ರಸ್ತೆ ನಿರ್ಮಾಣ ಮಾಡಿದ್ದೀರಿ, ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಪರಿಪೂರ್ಣಗೊಳಿಸಲು ಹೊಸದಾಗಿ ಎಷ್ಟು ಕಾಮಗಾರಿ ಕೈಗೊಂಡಿದ್ದೀರಿ?, ಪ್ರಧಾನಿ ಮೋದಿ ಸರ್ಕಾರ ಕೊಡುತ್ತಿರುವ ಅನ್ನಭಾಗ್ಯದ 5 ಕೆಜಿ ಅಕ್ಕಿ ಹೊರತುಪಡಿಸಿ ನೀವೇಷ್ಟು ಅಕ್ಕಿಯನ್ನ ಬಡವರಿಗೆ ವಿತರಣೆ ಮಾಡುತ್ತಿದ್ದೀರಿ ಎಂಬುದನ್ನು ಸವಿವರವಾಗಿ ತಿಳಿಸುವಂತೆ ಆಗ್ರಹಿಸಿದರು.

ಶಾಸಕರ ಅನುಪಸ್ಥಿತಿಯಲ್ಲಿ ಆಪ್ತ ಸಹಾಯಕ ಎಂ.ಎ. ನದಾಫ್ ಬಿಜೆಪಿ ಮನವಿ ಸ್ವೀಕರಿಸಿದರು. ಈ ವೇಳೆ ತಾಲೂಕಾಧ್ಯಕ್ಷ ಹಾಲೇಶ ಜಾಧವ, ಪುರಸಭೆ ಸದಸ್ಯರಾದ ಚಂದ್ರಣ್ಣ ಶೆಟ್ಟರ, ಸುಭಾಸ ಮಾಳಗಿ, ವಿನಯ್ ಹಿರೇಮಠ, ಮುಖಂಡರಾದ ಶಿವಾನಂದ ಕಡಗಿ, ನಿಂಗಪ್ಪ ಬಟ್ಟಲಕಟ್ಟಿ, ಶಂಕ್ರಣ್ಣ ಅಕ್ಕಿ, ದ್ಯಾಮನಗೌಡ ಪೂಜಾರ, ಸಿದ್ದಯ್ಯ ಪಾಟೀಲ, ಮಂಜುನಾಥ ಜಾಧವ, ಪ್ರಕಾಶ ಸಿದ್ದಣ್ಣವರ, ಅಣ್ಣಪ್ಪ ಬೆಳಕೇರಿ, ಜಿತೇಂದ್ರ ಸುಣಗಾರ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.