ಕೊಪ್ಪ, ಜನಸಾಮಾನ್ಯರ ಜೀವರಕ್ಷಕವಾಗಿರುವ ೧೦೮ ಅಂಬುಲೆನ್ಸ್ ಸೇವೆ ಸರ್ಕಾರದ ನಿರ್ಲಕ್ಷ್ಯದಿಂದ ಕಳೆದ ಒಂದೂವರೆ ತಿಂಗಳಿನಿಂದ ಸ್ಥಗಿತಗೊಂಡಿದೆ. ಇದರಿಂದ ಗ್ರಾಮೀಣ ಭಾಗದ ಬಡರೋಗಿಗಳಿಗೆ ತುರ್ತು ಚಿಕಿತ್ಸೆ ಪಡೆಯಲು ಕಷ್ಟವಾಗಿದ್ದು, ನೂರಾರು ರೋಗಿಗಳು ತೊಂದರೆಗೆ ಸಿಲುಕಿದ್ದಾರೆ.
ಕನ್ನಡಪ್ರಭ ವಾರ್ತೆ, ಕೊಪ್ಪ
ಜನಸಾಮಾನ್ಯರ ಜೀವರಕ್ಷಕವಾಗಿರುವ ೧೦೮ ಅಂಬುಲೆನ್ಸ್ ಸೇವೆ ಸರ್ಕಾರದ ನಿರ್ಲಕ್ಷ್ಯದಿಂದ ಕಳೆದ ಒಂದೂವರೆ ತಿಂಗಳಿನಿಂದ ಸ್ಥಗಿತಗೊಂಡಿದೆ. ಇದರಿಂದ ಗ್ರಾಮೀಣ ಭಾಗದ ಬಡರೋಗಿಗಳಿಗೆ ತುರ್ತು ಚಿಕಿತ್ಸೆ ಪಡೆಯಲು ಕಷ್ಟವಾಗಿದ್ದು, ನೂರಾರು ರೋಗಿಗಳು ತೊಂದರೆಗೆ ಸಿಲುಕಿದ್ದಾರೆ. ಅಂಬ್ಯುಲೆನ್ಸ್ ಸೇವೆಯನ್ನು ಕೂಡಲೇ ಪುನರಾರಂಭಿಸಬೇಕೆಂದು ಕೊಪ್ಪ ಮಂಡಲ ಬಿಜೆಪಿಯಿಂದ ಸರ್ಕಾರವನ್ನು ಒತ್ತಾಯಿಸಿ ತಹಸೀಲ್ದಾರ್ ಮುಖೇನ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು.ರಾಜ್ಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕನಸಿನ ಯೋಜನೆಯಾದ ೧೦೮ ಅಂಬುಲೆನ್ಸ್ ಪ್ರಸ್ತುತ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಮೂಲೆ ಗುಂಪಾಗಿದೆ. ಅಲ್ಲದೇ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುವ ೧೦೮ ಜೀವರಕ್ಷಕ ಅಂಬುಲೆನ್ಸ್ ನೌಕರರಿಗೆ ಅವರ ಕೆಲಸಕ್ಕೆ ತಕ್ಕಂತೆ ಸಂಬಳ ಪಾವತಿಸದೆ ಸರ್ಕಾರ ವಿಳಂಬ ಧೋರಣೆ ಅನುಸರಿಸು ತ್ತಿರುವುದು ಖಂಡನೀಯ. ಈ ಬಗ್ಗೆ ಸರ್ಕಾರ ತುರ್ತು ಗಮನಹರಿಸಿ ಪುನಃ ಅಂಬುಲೆನ್ಸ್ ಸೇವೆಯನ್ನು ಯಥಾ ಸ್ಥಿತಿ ಮಾಡುವ ಮೂಲಕ ರೋಗಿಗಳ ನೆರವಿಗೆ ಧಾವಿಸಬೇಕಾಗಿ ಹಕ್ಕೋತ್ತಾಯ ಮಾಡುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮನವಿಯ ಪ್ರತಿಯನ್ನು ಆರೋಗ್ಯ ಮಂತ್ರಿ, ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿಗಳ ಕಚೇರಿಗೂ ತಹಸೀಲ್ದಾರ್ ಮುಖೇನ ರವಾನಿಸಲಾಗಿದೆ.ಕೊಪ್ಪ ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಕೆ. ದಿನೇಶ್, ಬಿಜೆಪಿ ವಕ್ತಾರ ಎಚ್.ಆರ್. ಜಗದೀಶ್, ಕಸಬಾ ಹೋಬಳಿ ಸಹ ಕಾರ್ಯದರ್ಶಿ ಯು.ಪಿ. ವಿಜಯ್ ಕುಮಾರ್, ಪಪಂ ಮಾಜಿ ಅಧ್ಯಕ್ಷ ದಿವಾಕರ್ ಭಟ್, ಬಿಂತ್ರವಳ್ಳಿ ಗ್ರಾಪಂ ಸದಸ್ಯರಾದ ಪ್ರತಾಪ್, ಭಾಸ್ಕರ್, ಮಾಜಿ ಅಧ್ಯಕ್ಷ ರವಿಕುಮಾರ್, ದೇವರಾಜ್ ಪೂಜಾರಿ, ಪ್ರದೀಪ್ ಶೆಟ್ಟಿ, ರಾಘವೇಂದ್ರ, ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.