ಸಾರಾಂಶ
- ಹೆಬ್ಬಾಳ್ ಬಳಿ ಸ್ವಾಗತಿಸಿ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಬೈಕ್ ರ್ಯಾಲಿ: ಜಿಲ್ಲಾಧ್ಯಕ್ಷ ಎನ್.ರಾಜಶೇಖರ ಮಾಹಿತಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಬಾಬಾ ಸಾಹೇಬ್ ಅಂಬೇಡ್ಕರ್ ಕರ್ನಾಟಕದ ನಿಪ್ಪಾಣಿಯಲ್ಲಿ ಭಾಷಣ ಮಾಡಿ ಏ.10ಕ್ಕೆ 100 ವರ್ಷವಾಗುವ ಹಿನ್ನೆಲೆ ಬಿಜೆಪಿಯಿಂದ ಭೀಮಾ ಹೆಜ್ಜೆ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ರಥಯಾತ್ರೆಯು ಏ.12ರಂದು ದಾವಣಗೆರೆ ನಗರಕ್ಕೆ ಬರಲಿದೆ ಎಂದು ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಹೇಳಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ವಿಧಾನಸೌಧ ಮುಂಭಾಗದಿಂದ ರಥಯಾತ್ರೆ ಹಮ್ಮಿಕೊಂಡಿದ್ದು, ಏ.10ರಿಂದ ಪಕ್ಷದ ಎಸ್ಸಿ-ಎಸ್ಟಿ ಮೋರ್ಚಾ, ಇತರೆ ಹಿಂದುಳಿದ ಸಮುದಾಯಗಳ ನಾಯಕರ ಜೊತೆಗೆ ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನಡೆಯಲಿದೆ ಎಂದರು.
ಏ.15ಕ್ಕೆ ನಿಪ್ಪಾಣಿಗೆ:ವಿಧಾನಸೌಧದಿಂದ ಹೊರಟು ನೆಲಮಂಗಲ, ಮಧುಗಿರಿ, ತುಮಕೂರು, ಚಿತ್ರದುರ್ಗ ಮಾರ್ಗವಾಗಿ ದಾವಣಗೆರೆ ನಗರಕ್ಕೆ ರಥಯಾತ್ರೆ ಬರಲಿದೆ. ಅನಂತರ ಹಾವೇರಿ, ಹುಬ್ಬಳ್ಳಿ- ಧಾರವಾಡ ಮೂಲಕ ಏ.15ಕ್ಕೆ ನಿಪ್ಪಾಣಿ ತಲುಪಲಿದೆ. ನಿಪ್ಪಾಣಿಯಲ್ಲಿ ಲಕ್ಷಾಂತರ ಜನರನ್ನು ಸೇರಿಸಿ, ಪರಿಶಿಷ್ಟರು, ಹಿಂದುಳಿದ ವರ್ಗಗಳ ಜನರನ್ನು ಸೇರಿಸಿ, ಸಮಾವೇಶ ಮಾಡುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ವಿಚಾರಧಾರೆ, ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಕಾರ್ಯಕ್ರಮ ಇದಾಗಿರಲಿದೆ ಎಂದರು.
ಚಿತ್ರದುರ್ಗದಿಂದ ಏ.12ರಂದು ಬೆಳಗ್ಗೆ 9.30ಕ್ಕೆ ದಾವಣಗೆರೆ ಜಿಲ್ಲೆಗೆ ಆಗಮಿಸುವ ರಥಯಾತ್ರೆಗೆ ಹೆಬ್ಬಾಳ್ ಬಳಿ ಸ್ವಾಗತಿಸಲಾಗುವುದು. ನೂರಾರು ಕಾರ್ಯರ್ತರು ಮಾಯಕೊಂಡ ಕ್ಷೇತ್ರದ ಆನಗೋಡಿನಲ್ಲಿ ಅಂಬೇಡ್ಕರ ರಥಯಾತ್ರೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವದಿಂದ ನಗರಕ್ಕೆ ಸ್ವಾಗತಿಸುವರು. ನಂತರ ಬೆಳಗ್ಗೆ 11.30 ಗಂಟೆಗೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ-48ಕ್ಕೆ ಹೊಂದಿಕೊಂಡಿರುವ ಸರ್ಕ್ಯೂಟ್ ಹೌಸ್ ಪಕ್ಕದಲ್ಲಿ ಅಂಬೇಡ್ಕರ್ ಭವನ ನಿರ್ಮಿಸುವ ಜಾಗದಲ್ಲಿ ಮಜ್ಜಿಗೆ ವಿತರಿಸಲಾಗುವುದು. ಅಲ್ಲಿಂದ ಜಿಲ್ಲಾ ಕೇಂದ್ರಕ್ಕೆ ನೂರಾರು ಬೈಕ್‌ಗಳ ರ್ಯಾಲಿ ಮೂಲಕ ರಥಯಾತ್ರೆಯನ್ನು ಬರಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.ಬೈಪಾಸ್ ರಸ್ತೆಯಿಂದ ಹದಡಿ ರಸ್ತೆ ಮಾರ್ಗವಾಗಿ ಡಾ.ಅಂಬೇಡ್ಕರ್ ವೃತ್ತಕ್ಕೆ ರಥಯಾತ್ರೆ ಆಗಮಿಸಲಿದೆ. ನಂತರ ಇಲ್ಲಿ ಸಭೆ ಮಾಡಿ, ಹರಿಹರ ನಗರದತ್ತ ರಥಯಾತ್ರೆಗೆ ಬೀಳ್ಕೊಡಲಾಗುವುದು. ಅಲ್ಲಿಂದ ರಥಯಾತ್ರೆಯನ್ನು ಪಕ್ಷದ ಮುಖಂಡರು, ಪದಾಧಿಕಾರಿಗಳು, ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಹಾವೇರಿ ಜಿಲ್ಲೆಗೆ ಬೀಳ್ಕೊಡಲಿದ್ದಾರೆ. ಮಾಜಿ ಸಂಸದರು, ಹಾಲಿ-ಮಾಜಿ ಶಾಸಕರು, ಮಾಜಿ ಸಚಿವರು, ಪಕ್ಷದ ಹಿರಿಯ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಪಕ್ಷದ ಮುಖಂಡರಾದ ಹನುಮಂತ ನಾಯ್ಕ, ಓದೋ ಗಂಗಪ್ಪ, ಧನಂಜಯ ಕಡ್ಲೇಬಾಳು, ಆರ್.ಶಿವಾನಂದ, ಜಿ.ವಿ.ಗಂಗಾಧರ, ಕರಿಯಣ್ಣ, ಬಿ.ಆನಂದ ಕೆಟಿಜೆ ನಗರ, ಹರೀಶ ಶಾಮನೂರು, ಮಂಜಾನಾಯ್ಕ, ಎಚ್.ಪಿ. ವಿಶ್ವಾಸ್ ಇತರರು ಇದ್ದರು.- - -
(ಬಾಕ್ಸ್) * ಯಡಿಯೂರಪ್ಪ ಅವರನ್ನು ಆಹ್ವಾನಿಸಿ: ನಿಂಗರಾಜ ಬಿಜೆಪಿ ಹಿರಿಯ ಮುಖಂಡ ಆಲೂರು ನಿಂಗರಾಜ ಮಾತನಾಡಿ, ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭವನವನ್ನು ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸಬೇಕೆಂಬ ನಮ್ಮ ಕೂಗಿಗೆ ಸ್ಪಂದಿಸಿ, 2010ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ₹5 ಕೋಟಿ ಮಂಜೂರು ಮಾಡಿದ್ದರು. ಇದೀಗ ಜಾಗದ ಬಗ್ಗೆ ಇದ್ದ ಗೊಂದಲವೂ ನಿವಾರಣೆಯಾಗಿದೆ. ಏ.14ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರೆವೇರಲಿದೆ. ಸಮಾರಂಭಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಜಿಲ್ಲಾಡಳಿತ ಆಹ್ವಾನಿಸಬೇಕು ಎಂದು ಮನವಿ ಮಾಡಿದರು.- -
(ಕೋಟ್) ಬಿಜೆಪಿಯ ಪ್ರತಿಯೊಂದು ಕಾರ್ಯಕ್ರಮಕ್ಕೂ ಎಲ್ಲಾ ಹಾಲಿ-ಮಾಜಿ ಜನ ಪ್ರತಿನಿಧಿಗಳು, ಹಿರಿಯ ಮುಖಂಡರು, ನಾಯಕರನ್ನು ಆಹ್ವಾನಿಸುತ್ತಲೇ ಇದ್ದೇವೆ. ಪ್ರತಿಭಟನೆಯಾಗಲಿ, ಸಭೆ, ಸಮಾರಂಭ ಆಗಿರಲಿ ಎಲ್ಲರಿಗೂ ಆಹ್ವಾನಿಸುವುದು ನಮ್ಮ ಕರ್ತವ್ಯ. ಯಾರನ್ನೂ ಕಡೆಗಣಿಸುವ ಪ್ರಶ್ನೆಯೇ ಇಲ್ಲ- ಎನ್.ರಾಜಶೇಖರ ನಾಗಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ
- - --9ಕೆಡಿವಿಜಿ2, 3.ಜೆಪಿಜಿ:
ದಾವಣಗೆರೆಯಲ್ಲಿ ಬುಧವಾರ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.