ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ವಿರುದ್ಧ ಬಿಜೆಪಿ ಕಪ್ಪು ಬಾವುಟ ಪ್ರದರ್ಶನ

| Published : Apr 15 2024, 01:24 AM IST

ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ವಿರುದ್ಧ ಬಿಜೆಪಿ ಕಪ್ಪು ಬಾವುಟ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅವರನ್ನು ಬಳ್ಳಾರಿಗೆ ಪ್ರವೇಶ ಮಾಡಲು ಬಿಡುವುದಿಲ್ಲ. ಕೂಡಲೇ ವಾಪಸಾಗಬೇಕು.

ಬಳ್ಳಾರಿ: ರಾಜ್ಯಸಭಾ ಸದಸ್ಯರಾದ ಬಳಿಕ ಇದೇ ಮೊದಲ ಬಾರಿಗೆ ಬಳ್ಳಾರಿಗೆ ಆಗಮಿಸಿದ ನಾಸಿರ್ ಹುಸೇನ್ ವಿರುದ್ಧ ಕಪ್ಪುಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲು ಮುಂದಾದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಭಾನುವಾರ ಬಂಧಿಸಿದರು.

ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಜಮಾಯಿಸಿದರಲ್ಲದೆ, ನಾಸಿರ್ ಹುಸೇನ್ ಗೋ ಬ್ಯಾಕ್ ಘೋಷಣೆಗಳನ್ನು ಕೂಗಿದರು.

ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅವರನ್ನು ಬಳ್ಳಾರಿಗೆ ಪ್ರವೇಶ ಮಾಡಲು ಬಿಡುವುದಿಲ್ಲ. ಕೂಡಲೇ ವಾಪಸಾಗಬೇಕು. ಪಾಕಿಸ್ತಾನ ಪರ ಬೆಂಬಲಿಗರು ಘೋಷಣೆ ಕೂಗಿದ್ದರೂ ಯಾವುದೇ ರೀತಿಯ ಕ್ರಮಕ್ಕೆ ಮುಂದಾಗುವ ಬದಲು ಸಮರ್ಥಿಸಿಕೊಂಡಿರುವ ನಾಸಿರ್ ಹುಸೇನ್ ದೇಶದ್ರೋಹಿಯಾಗಿದ್ದಾರೆ. ದೇಶ ವಿರೋಧಿ ನಿಲುವು ಹೊಂದಿರುವ ನಾಸಿರ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿಕೊಳ್ಳುತ್ತಿರುವುದು ಅತ್ಯಂತ ನಾಚಿಕೆಗೇಡು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ನಾಸಿರ್ ಅವರನ್ನು ಸ್ವಾಗತಿಸಿಕೊಳ್ಳಲು ಬೈಕ್ ರ್‍ಯಾಲಿ ಮೂಲಕ ಆಗಮಿಸುತ್ತಿದ್ದ ಯುವಕರು, ಬಿಜೆಪಿ ಪ್ರತಿಭಟನೆಯಿಂದಾಗಿ ಮಾರ್ಗ ಬದಲಿಸಿಕೊಂಡು ಸಂಗಂ ವೃತ್ತ ತಲುಪಿದರು.

ದೇಶದ್ರೋಹಿ ನಾಸಿರ್ ವಾಪಸಾಗಲಿ, ಭಾರತ ಮಾತಾ ಕಿ ಜೈ, ಪಾಕಿಸ್ತಾನ್ ಪರ ಧೋರಣೆ ಹೊಂದಿರುವ ನಾಸಿರ್‌ಗೆ ಧಿಕ್ಕಾರ ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ಅನಿಲಕುಮಾರ್ ಮೋಕಾ ಮಾತನಾಡಿ, ಪಾಕಿಸ್ತಾನ ಪರ ಮನಸ್ಥಿತಿ ಇರುವ ನಾಸಿರ್‌ಗೆ ಯಾವುದೇ ಕಾರಣಕ್ಕೂ ಬಳ್ಳಾರಿ ಪ್ರವೇಶಕ್ಕೆ ಆಸ್ಪದ ನೀಡುವುದಿಲ್ಲ ಎಂದರು.

ಇದೇ ವೇಳೆ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲು ಪೊಲೀಸರು ಮುಂದಾಗುತ್ತಿದ್ದಂತೆಯೇ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಬಳಿಕ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಂಧಿಸಲಾಯಿತು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮನಗೌಡ, ಮಹಾನಗರ ಪಾಲಿಕೆ ಸದಸ್ಯ ಶ್ರೀನಿವಾಸ ಮೋತ್ಕರ್, ಹನುಮಂತಪ್ಪ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದಪ್ಪ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ರಘು, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುಗುಣ, ಗೋವಿಂದ, ತಿಪ್ಪಣ್ಣ, ರಾಮಾಂಜಿನಿ, ವೆಂಕಟೇಶ್, ಮಲ್ಲೇಶ್ ಕುಮಾರ್, ರೂಪಾ, ಪುಷ್ಪಾಲತಾ, ಅಶೋಕ್, ಉಡೇದ ಸುರೇಶ್ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ನಾಸಿರ್ ಹುಸೇನ್‌ಗೆ ಅದ್ಧೂರಿ ಸ್ವಾಗತ:ಬಿಜೆಪಿ ಕಾರ್ಯಕರ್ತರ "ಗೋ ಬ್ಯಾಕ್ " ಹೋರಾಟದ ನಡುವೆ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅವರಿಗೆ ಪಕ್ಷದ ಕಾರ್ಯಕರ್ತರು ಭಾನುವಾರ ಸಂಜೆ ಅದ್ಧೂರಿ ಸ್ವಾಗತ ಕೋರಿದರು.ಸಂಗಂ ವೃತ್ತದಿಂದ ತೆರೆದ ವಾಹನದಲ್ಲಿ ಸಾಗಿದ ಮೆರವಣಿಗೆಯಲ್ಲಿ ಪಕ್ಷದ ಕಾರ್ಯಕರ್ತರು ಜೆಸಿಬಿ ಮೂಲಕ ನಾಸಿರ್ ಹುಸೇನ್ ಅವರಿಗೆ ಪುಷ್ಪಾರ್ಪಣೆ ಮಾಡಿ, ಕಾಂಗ್ರೆಸ್ ಪರ ಘೋಷಣೆಗಳನ್ನು ಕೂಗಿದರು. ಸಚಿವ ನಾಗೇಂದ್ರ, ಶಾಸಕ ನಾರಾಭರತ್‌ ರೆಡ್ಡಿ, ಪಾಲಿಕೆ ಸದಸ್ಯರು, ಮುಖಂಡರು ಪಾಲ್ಗೊಂಡಿದ್ದರು. ಪಕ್ಷದ ನೂರಾರು ಕಾರ್ಯಕರ್ತರು ಬೈಕ್ ರ್‍ಯಾಲಿ ಮೂಲಕ ಗಮನ ಸೆಳೆದರು. ಮೆರವಣಿಗೆ ವಾಹನ ರಾಯಲ್ ವೃತ್ತ ತಲುಪುತ್ತಿದ್ದಂತೆಯೇ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.