ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ತವರು ಚಿಕ್ಕಾಟಿ ಗ್ರಾಪಂನಲ್ಲಿ ಅರಳಿದ ಕಮಲ

| Published : Jul 17 2025, 12:30 AM IST

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ತವರು ಚಿಕ್ಕಾಟಿ ಗ್ರಾಪಂನಲ್ಲಿ ಅರಳಿದ ಕಮಲ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಮೇಲ್ನೋಟಕ್ಕೆ ೮ ಮಂದಿ ಕಾಂಗ್ರೆಸ್‌ ಬೆಂಬಲಿತರ ಸದಸ್ಯರು ಇದ್ದರು. ೭ ಮಂದಿ ಬಿಜೆಪಿ ಬೆಂಬಲಿತ ಸದಸ್ಯರು ಪ್ರವಾಸಕ್ಕೆ ತೆರಳಿದ್ದರು. ಆದರೆ ಫಲಿತಾಂಶ ಹೊರ ಬಿದ್ದಾಗ ಕಾಂಗ್ರೆಸ್‌ಗೆ ಒಳೇಟು ಬಿದ್ದಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಿ.ಎಂ. ಮುನಿರಾಜು ತವರು ಗ್ರಾಪಂನಲ್ಲಿ ಕಮಲ ಅರಳಿದ್ದು, ಅಧ್ಯಕ್ಷರಾಗಿ ಬಿಜೆಪಿ ಯುವ ಮುಖಂಡ ಚಿಕ್ಕಾಟಿ ಶಿವಣ್ಣನಾಯಕ, ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ತೊಂಡವಾಡಿ ಮಹದೇವಮ್ಮ ಗೆಲುವು ಸಾಧಿಸಿದರು.

ಚಿಕ್ಕಾಟಿ ಗ್ರಾಪಂ ಅಧ್ಯಕ್ಷರಾಗಿದ್ದ ಅರೇಪುರ ವಿ. ಮಹದೇವಕುಮಾರ್‌, ಉಪಾಧ್ಯಕ್ಷೆ ಭಾಗ್ಯ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಗ್ರಾಪಂ ಅಧ್ಯಕ್ಷ ಸ್ಥಾನ ಬಿಜೆಪಿ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲಾಗಿವೆ.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಯುವ ಮುಖಂಡ ಚಿಕ್ಕಾಟಿ ಶಿವಣ್ಣನಾಯಕ ೮ ಮತ, ಕಾಂಗ್ರೆಸ್‌ ಬೆಂಬಲಿತ ವೆಂಕಟೇಶ್‌ಗೆ ೭ ಮತ ಪಡೆದರೆ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಬೆಂಬಲಿತ ತೊಂಡವಾಡಿ ಮಹದೇವಮ್ಮ ೮ ಮತ, ಬಿಜೆಪಿ ಬೆಂಬಲಿತ ಮಹದೇವಮ್ಮ ೭ ಮತ ಪಡೆದರು.

ಅಧ್ಯಕ್ಷರಾಗಿ ಶಿವಣ್ಣ ನಾಯಕ, ಉಪಾಧ್ಯಕ್ಷರಾಗಿ ಮಹದೇವಮ್ಮ ೧ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ಸತೀಶ್‌ ಘೋಷಿಸಿದ ಬಳಿಕ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು.

ಈ ಸಮಯದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷರಾದ ಅರೇಪುರ ವಿ.ಮಹದೇವಕುಮಾರ್‌, ಬಸವರಾಜು, ಹೊಣಕಾರ ನಾಯಕ, ಗ್ರಾಪಂ ಮಾಜಿ ಉಪಾಧ್ಯಕ್ಷೆ ಭಾಗ್ಯ, ಗ್ರಾಪಂ ಸದಸ್ಯರಾದ ಚಿನ್ನಮ್ಮ, ಮಹದೇವಮ್ಮ, ಪದ್ಮ, ಡೇರಿ ಅಧ್ಯಕ್ಷ ನಾಗರಾಜು (ವಾಟಾಳ್‌), ಮುಖಂಡರಾದ ಪುಟ್ಟಬುದ್ದಿ, ಕುಮಾರ್‌, ಬಂಗಾರನಾಯಕ, ಹೊರೆಯಾಲ ಮಹದೇವಸ್ವಾಮಿ, ಪಿಡಿಒ ಶಕುಂತಲ ಸೇರಿದಂತೆ ಬಿಜೆಪಿಗರಿದ್ದರು.-------------

ಕಾಂಗ್ರೆಸ್‌ ಒಳ ಜಗಳ; ಬಿಜೆಪಿಗೆ ಅವಕಾಶ!

ಗುಂಡ್ಲುಪೇಟೆ: ತಾಲೂಕಿನ ಚಿಕ್ಕಾಟಿ ಗ್ರಾಪಂ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲಾಗಬೇಕಿತ್ತು. ಆದರೆ ಮುಖಂಡರ ಒಳ ಜಗಳದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದು, ತೀವ್ರ ಮುಖಭಂಗ ಅನುಭವಿಸಿದೆ.

ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಮೇಲ್ನೋಟಕ್ಕೆ ೮ ಮಂದಿ ಕಾಂಗ್ರೆಸ್‌ ಬೆಂಬಲಿತರ ಸದಸ್ಯರು ಇದ್ದರು. ೭ ಮಂದಿ ಬಿಜೆಪಿ ಬೆಂಬಲಿತ ಸದಸ್ಯರು ಪ್ರವಾಸಕ್ಕೆ ತೆರಳಿದ್ದರು. ಆದರೆ ಫಲಿತಾಂಶ ಹೊರ ಬಿದ್ದಾಗ ಕಾಂಗ್ರೆಸ್‌ಗೆ ಒಳೇಟು ಬಿದ್ದಿದೆ. ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಿ.ಎಂ. ಮುನಿರಾಜು, ತಾಪಂ ಮಾಜಿ ಅಧ್ಯಕ್ಷ ಬಂಗಾರನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ಜಿ.ಮಹೇಶ್‌ ಕಾಂಗ್ರೆಸ್ಸಿಗರಾದರೂ ಮೂವರಲ್ಲಿ ಹೊಂದಾಣಿಕೆ ಇರಲಿಲ್ಲ ಎನ್ನಲಾಗಿದೆ. ಕಾಂಗ್ರೆಸ್ಸಿಗರ ಒಳ ಜಗಳದಲ್ಲಿ ಬಿಜೆಪಿ ಮುಖಂಡ ಚಿಕ್ಕಾಟಿ ಶಿವಣ್ಣ ನಾಯಕ ಗ್ರಾಪಂ ಅಧ್ಯಕ್ಷರಾಗಿ ಗೆಲುವು ಸಾಧಿಸಿದ್ದಾರೆ. ಇದು ಕಾಂಗ್ರೆಸ್ಸಿಗೆ ತೀವ್ರ ಮುಜುಗರ ತರಿಸಿದೆ.