ರಾಜ್ಯ ಕಾಂಗ್ರೆಸ್ ಸರ್ಕಾರ ಎರಡೂ ಉಪ ಚುನಾವಣೆಗಳಲ್ಲಿ ಅಧಿಕಾರ ದುರ್ಬಳಕೆ ಮಾಡಿದರೂ ಫಲ ನೀಡುವುದಿಲ್ಲ. ಈ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದರು.
ಹುಬ್ಬಳ್ಳಿ: ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಈ ಬಾರಿ ಮತದಾರರ ಒಲವು ಬಿಜೆಪಿ ಪರವಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಎರಡೂ ಉಪ ಚುನಾವಣೆಗಳಲ್ಲಿ ಅಧಿಕಾರ ದುರ್ಬಳಕೆ ಮಾಡಿದರೂ ಫಲ ನೀಡುವುದಿಲ್ಲ. ಈ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದರು.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ನಾನೂ ಭಾಗಿಯಾಗಿದ್ದೆ. ಹಿಂದುಳಿದ ಸಮುದಾಯಗಳ ಪ್ರಮುಖರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದೇನೆ. ಮತದಾರರ ಒಲವು ಬಿಜೆಪಿ ಅಭ್ಯರ್ಥಿ ಪರ ಇದೆ. ಸಾಮಾನ್ಯ ಕಾರ್ಯಕರ್ತರನ್ನು ಅಭ್ಯರ್ಥಿ ಮಾಡಲಾಗಿದೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಮತ್ತು ಬೇರೆ ಬೇರೆ ಕಾರಣಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ತೀರ್ಮಾನಕ್ಕೆ ಮತದಾರರು ಬಂದಿದ್ದಾರೆ ಎಂದರು.ದಿಕ್ಕು ಬದಲಿಸುವ ಶಕ್ತಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಲಕೋಟೆಯಲ್ಲಿ ಬೀಡು ಬಿಟ್ಟಿದ್ದಾರೆ. ಕಾರಣವಿಷ್ಟೇ, ಬಾಗಲಕೋಟೆ ಮತ್ತು ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುವ ಮುನ್ಸೂಚನೆ ಸಿಕ್ಕಿದೆ. ಸೋತರೆ ತಮ್ಮ ರಾಜಕೀಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಅರ್ಥ ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು. ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ, ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ್ ಇತರ ಹಿರಿಯ ನಾಯಕರು ಪ್ರಚಾರ ನಡೆಸಲಿದ್ದಾರೆ ಎಂದರು.ಶಿಕ್ಷಣದ ವಿಷಯದಲ್ಲಿ ರಾಜ್ಯ ಸರ್ಕಾರ ಮೂರ್ಖರಂತೆ ನಡೆದುಕೊಳ್ಳುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿ ಧಿಕ್ಕರಿಸಿದರು. ಹೊಸ ಶಿಕ್ಷಣ ನೀತಿ ತರುತ್ತೇವೆ ಎಂದರು. ಮೂರು ವರ್ಷ ಕಳೆದರೂ ತಮ್ಮದೇ ಆದ ಶಿಕ್ಷಣ ನೀತಿ ತರಲಾಗುತ್ತಿಲ್ಲ. ತಾವೇ ನೇಮಕ ಮಾಡಿದ್ದ ಸಮಿತಿ ರಚಿಸಿ ವರದಿ ಕೊಟ್ಟರೂ ಉಪ ಸಮಿತಿ ರಚಿಸಿದ್ದಾರೆ. ರಾಜ್ಯದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತೆ ಮಾಡಿದ್ದಾರೆ ಎಂದರು.
ರಾಜ್ಯದಲ್ಲಿ ತ್ರಿಭಾಷಾ ಸೂತ್ರ ಇತ್ತು. ಕೇಂದ್ರ ಸರ್ಕಾರದ ವಿರುದ್ಧದ ಧೋರಣೆಯಿಂದಾಗಿ ಹಿಂದಿ ಭಾಷೆಯನ್ನು ಸೂತ್ರದಿಂದ ಕೈಬಿಡುತ್ತಿದ್ದಾರೆ. ಎಲ್ಲರನ್ನೂ ಮರೆತು ಅಧಿಕಾರದ ಅಮಲಿನಲ್ಲಿ ತೇಲುತ್ತಿದ್ದಾರೆ ಎಂದರು.