3 ಅಭ್ಯರ್ಥಿಗಳ ಆಯ್ಕೆ: ಇಂದು ಬಿಜೆಪಿ ಸಭೆ

| Published : May 22 2024, 12:53 AM IST

ಸಾರಾಂಶ

ಅಸೆಂಬ್ಲಿ ಟಿಕೆಟ್‌ ವಂಚಿತರಿಗೆ ಅವಕಾಶ ನೀಡುವ ಜೊತೆಗೆ ರವಿಕುಮಾರ್‌ ಮುಂದುವರಿಕೆಗೆ ಒಲವು ತೋರಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ತನಗೆ ಲಭ್ಯವಾಗುವ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಬುಧವಾರ ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆ ನಡೆಯಲಿದೆ.ಕಳೆದ ವಿಧಾನಸಭಾ ಮತ್ತು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಿಗೆ ಈ ವಿಧಾನಪರಿಷತ್ ಚುನಾವಣೆಯಲ್ಲಿ ಅವಕಾಶ ಕಲ್ಪಿಸುವ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂಬ ಅಭಿಪ್ರಾಯ ಬಲವಾಗಿ ವ್ಯಕ್ತವಾಗುತ್ತಿದೆ.

ಲಭ್ಯವಾಗುವ ಮೂರು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಈಗ ನಿವೃತ್ತಿ ಹೊಂದುತ್ತಿರುವ ಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್ ಅವರನ್ನು ಮತ್ತೊಂದು ಅವಧಿಗೆ ಮುಂದುವರೆಸಲು ಒಲವು ವ್ಯಕ್ತವಾಗಿದೆ. ಸಂಘ ಪರಿವಾರ ಮೂಲದ ಹಾಗೂ ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದ ರವಿಕುಮಾರ್ ಅವರು ಮೊದಲ ಬಾರಿಗೆ ಸದಸ್ಯರಾಗಿದ್ದರೂ ಉತ್ತಮ ಸಾಧನೆ ತೋರಿದ್ದಾರೆ ಎಂಬ ಮೆಚ್ಚುಗೆ ಪಕ್ಷದ ನಾಯಕರಲ್ಲಿದೆ.

ಅಂತಿಮ ನಿರ್ಧಾರ ವರಿಷ್ಠರ ನಡೆ ಮೇಲೆ ಅವಲಂಬಿಸಿದೆ. ಈ ಸ್ಥಾನಗಳ ಮೇಲೆ ಪಕ್ಷದಲ್ಲಿ ಹಲವರು ಕಣ್ಣಿರಿಸಿದ್ದಾರೆ. ಪಕ್ಷದ ರಾಜ್ಯ ನಾಯಕರನ್ನು ಭೇಟಿ ಮಾಡಿ ಲಾಬಿಯನ್ನೂ ಆರಂಭಿಸಿದ್ದಾರೆ.ಆದರೆ, ಇತ್ತೀಚಿನ ಬೆಳವಣಿಗೆ ಗಮನಿಸಿದರೆ ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆಯಲ್ಲಿ ರಾಜ್ಯ ಘಟಕದ ಶಿಫಾರಸ್ಸಿಗೆ ಹೈಕಮಾಂಡ್‌ ಮಣೆ ಹಾಕಿದ್ದು ಕಡಿಮೆಯೇ ಎನ್ನಬಹುದು. ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಹೆಸರುಗಳನ್ನು ಹೈಕಮಾಂಡ್‌ಗೆ ಕಳುಹಿಸಿದರೂ ವರಿಷ್ಠರು ಅದನ್ನು ಒಪ್ಪುವ ಭರವಸೆ ರಾಜ್ಯ ನಾಯಕರಲ್ಲಿ ಉಳಿದಿಲ್ಲ. ಆದರೂ ಔಪಚಾರಿಕ ಎಂಬಂತೆ ಸಭೆ ನಡೆಸಿ ಹೆಸರುಗಳನ್ನು ಶಿಫಾರಸು ಮಾಡಲು ಮುಂದಾಗಿದ್ದಾರೆ.

ಒಂದು ಸ್ಥಾನಕ್ಕೆ ಮೂರು ಹೆಸರುಗಳಂತೆ ಮೂರು ಸ್ಥಾನಗಳಿಗೆ ಒಟ್ಟು ಒಂಭತ್ತು ಹೆಸರುಗಳನ್ನು ಬಿಜೆಪಿ ಹೈಕಮಾಂಡ್‌ಗೆ ರವಾನಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ವಿಧಾನಸಭೆಯ ಸಂಖ್ಯಾಬಲದ ಮೇಲೆ ಬಿಜೆಪಿಗೆ 3 ಸ್ಥಾನ ಸುಲಭವಾಗಿ ಲಭ್ಯವಾಗಲಿದ್ದು, ಈ ಸ್ಥಾನಗಳ ಮೇಲೆ ಹಲವರ ಕಣ್ಣು ಬಿದ್ದಿದ್ದು ನಾಯಕರನ್ನು ಭೇಟಿ ಮಾಡಿ ಲಾಬಿ ಆರಂಭ ಮಾಡಿದ್ದಾರೆ. ವಿಧಾನಸಭೆ, ಲೋಕಸಭೆ ಟಿಕೆಟ್‌ ವಂಚಿತರಿಗೆ ಅವಕಾಶ ಕಲ್ಪಿಸುವ ಬಗ್ಗೆ ಚರ್ಚೆ ನಡೆಸಿದ್ದು, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೂ ಟಿಕೆಟ್‌ ನೀಡಬೇಕೆಂದೂ ಅಭಿಪ್ರಾಯ ವ್ಯಕ್ತವಾಗಿದೆ.

ಹಾಲಿ ಸದಸ್ಯ, ಒಬಿಸಿ ವರ್ಗದ ರವಿ ಕುಮಾರ್‌ ಮುಂದುವರಿಸಲು ಒಲವು ತೋರಲಾಗಿದ್ದು, ಅಂತಿಮವಾಗಿ ನಿರ್ಧಾರವನ್ನು ಪಕ್ಷದ ವರಿಷ್ಠರ ನಡೆ ಮೇಲೆ ಅವಲಂಬನೆ ಮಾಡಲು ನಿರ್ಧರಿಸಲಾಗಿದೆ. ಅಭ್ಯರ್ಥಿಗಳ ಬಗ್ಗೆ ಚರ್ಚೆ ಮಾಡಲು ಇಂದು ಕೋರ್‌ ಕಮಿಟಿಯ ಸಭೆ ಕರೆಯಲಾಗಿದ್ದು, 1 ಸ್ಥಾನಕ್ಕೆ ಮೂರು ಹೆಸರುಗಳಂತೆ ಒಟ್ಟು 9 ಹೆಸರು ಅಂತಿಮ ಮಾಡವ ಸಾಧ್ಯತೆಯಿದೆ. ಶೀಘ್ರದಲ್ಲೆ ಪಟ್ಟಿಯನ್ನು ವರಿಷ್ಠರಿಗೆ ಕಳಿಸುವ ನಿರೀಕ್ಷೆಯಿದ್ದು ಬಳಿಕ ವರಿಷ್ಠರಿಂದ ತೀರ್ಮಾನ ಅಂತಿಮವಾಗಲಿದೆ.