ಬಿಜೆಪಿಯವರ ಸುಳ್ಳಿನ ಬಂಡವಾಳ ಬಯಲು: ತಂಗಡಗಿ

| Published : Apr 25 2024, 01:00 AM IST

ಸಾರಾಂಶ

ನಾವು ರಾಜ್ಯ ಹಾಗೂ ದೇಶದ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಬಿಜೆಪಿಯವರ ಹಾಗೇ ಸುಳ್ಳಿನ ಭಾಷಣ ಮಾಡಿ ಮನೆಗೆ ಹೋಗುವುದಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಮಸ್ಕಿ: ದೇಶದಲ್ಲಿ ಬರಿ ಸುಳ್ಳುಗಳನ್ನೇ ಬಂಡವಾಳ ಮಾಡಿಕೊಂಡು 10 ವರ್ಷಗಳ ಕಾಲ ಅಧಿಕಾರ ನಡೆಸಿದ ಬಿಜೆಪಿಯ ಅಸಲಿ ಬಂಡವಾಳ ಬಯಲಾಗಿದ್ದು, ಆದ್ದರಿಂದ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ಅಧಿಕಾರದಿಂದ ಇಳಿಸಿ ಕಾಂಗ್ರೆಸ್‌ಗೆ ಅಧಿಕಾರ ನೀಡಲಿದ್ದಾರೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದಲ್ಲಿ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ರಾಜ್ಯ ಹಾಗೂ ದೇಶದ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಬಿಜೆಪಿಯವರ ಹಾಗೇ ಸುಳ್ಳಿನ ಭಾಷಣ ಮಾಡಿ ಮನೆಗೆ ಹೋಗುವುದಿಲ್ಲ. ದೇಶದ ಜನರು ಬದಲಾವಣೆ ಬಯಸಿದ್ದು, ಈ ಬಾರಿ ಕೆಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು. ಸಂಸದ ಸಂಗಣ್ಣ ಕರಡಿ ಮಾತನಾಡಿ, ಬಿಜೆಪಿ ನಡೆಗೆ ಬಹಳಷ್ಟು ಜನ ಕಾರ್ಯಕರ್ತರು ರೋಸಿ ಹೋಗಿದ್ದಾರೆ. ಆದ್ದರಿಂದ ಬಿಜೆಪಿಯನ್ನು ತೊರೆಯುತ್ತಾರೆ. ಈ ಬಾರಿ ಲೋಕಸಭೆಯಲ್ಲಿ ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದು ಖಚಿತ ಎಂದರು.

ಶಾಸಕ ಆರ್.ಬಸನಗೌಡ ತುರ್ವಿಹಾಳ ಮಾತನಾಡಿದರು. ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ ಪಾಮಯ್ಯ ಮುರಾರಿ, ಮುಖಂಡರು, ಕಾರ್ಯಕರ್ತರು ಇದ್ದರು.ಬಿಜೆಪಿಗೆ ಕೈಕೊಟ್ಟು ಕಾಂಗ್ರೆಸ್ ಸೇರಿದ ಪ್ರತಾಪಗೌಡ ಪಾಟೀಲರ ಆಪ್ತರು

ಮಸ್ಕಿ ಪಟ್ಟಣದ ಪ್ರಭಾವಿ ಮುಖಂಡರಾದ ಅಂದಾನಪ್ಪ ಗುಂಡಳ್ಳಿ, ದೊಡ್ಡಪ್ಪ ಕಡಬೂರು, ಮಾಜಿ ಗ್ರಾಪಂ ಅಧ್ಯಕ್ಷ ಎಂ.ಅಮರೇಶ್, ಶ್ರೀಶೈಲಪ್ಪ ಸಜ್ಜನ್, ಮಾಜಿ ಎಪಿಎಂಸಿ ಮಾಜಿ ಅಧ್ಯಕ್ಷ ಬಸ್ಸಪ್ಪ ಬ್ಯಾಳಿ, ಉಮಾಪತಿ ಗೋನಾಳ, ಮಾನಪ್ಪ ಮಟ್ಟೂರು ಸೇರಿದಂತೆ ಇತರರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರು.