ಸಾರಾಂಶ
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಲ್ಲಿನ ಜನರು ಆಮ್‌ಆದ್ಮಿಯನ್ನು ಪೊರಕೆಯಲ್ಲಿ ಗುಡಿಸಿ ಕಸದ ಬುಟ್ಟಿಗೆ ಹಾಕಿದ್ದಾರೆ. ಭ್ರಷ್ಟಾಚಾರ ತೊಡೆದುಹಾಕುವ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದ ಆಮ್‌ಆದ್ಮಿ ಪಕ್ಷದವರೇ ಭ್ರಷ್ಟಾಚಾರದಲ್ಲಿ ಮುಳುಗಿದರು. ಭ್ರಷ್ಟರ ರಕ್ಷಣೆಗೆ ಕೇಜ್ರಿವಾಲ್ ನಿಂತರು. ಇವರ ಆಡಳಿತದಿಂದ ನಿರಾಸೆಗೊಳಗಾದ ಜನರು ಈಗ ಬಿಜೆಪಿ ಕೈಹಿಡಿದಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿರುವುದನ್ನು ಸ್ವಾಗತಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ಬಿಜೆಪಿ ಹೆಚ್ಚು ಸ್ಥಾನ ಗಳಿಸಿದ್ದರಿಂದ ಕುಣಿದು ಕುಪ್ಪಳಿಸಿ ಹರ್ಷ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಮಾತನಾಡಿ, ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಲ್ಲಿನ ಜನರು ಆಮ್‌ಆದ್ಮಿಯನ್ನು ಪೊರಕೆಯಲ್ಲಿ ಗುಡಿಸಿ ಕಸದ ಬುಟ್ಟಿಗೆ ಹಾಕಿದ್ದಾರೆ. ಭ್ರಷ್ಟಾಚಾರ ತೊಡೆದುಹಾಕುವ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದ ಆಮ್‌ಆದ್ಮಿ ಪಕ್ಷದವರೇ ಭ್ರಷ್ಟಾಚಾರದಲ್ಲಿ ಮುಳುಗಿದರು. ಭ್ರಷ್ಟರ ರಕ್ಷಣೆಗೆ ಕೇಜ್ರಿವಾಲ್ ನಿಂತರು. ಇವರ ಆಡಳಿತದಿಂದ ನಿರಾಸೆಗೊಳಗಾದ ಜನರು ಈಗ ಬಿಜೆಪಿ ಕೈಹಿಡಿದಿದ್ದಾರೆ. ಜನಮೆಚ್ಚುವ ರೀತಿ ಆಡಳಿತ ನೀಡುವ ಶಕ್ತಿ ಇರುವುದು ಬಿಜೆಪಿಗೆ ಮಾತ್ರ ಎಂದರು.ಏಕೀಕೃತವಾದ ಏಕಸ್ವಾಮ್ಯಕ್ಕೆ ಬೆಲೆ ಇಲ್ಲ. ಅದೇನಿದ್ದರೂ ರಾಷ್ಟ್ರೀಯವಾದ ಮತ್ತು ರಾಷ್ಟ್ರೀಯ ಚಿಂತನೆಗೆ ಬೆಲೆ ಕೊಡುತ್ತಾರೆ ಎಂಬುದಕ್ಕೆ ದೆಹಲಿ ಚುನಾವಣೆಯೇ ದೊಡ್ಡ ಪಾಠ. ಅಣ್ಣಾ ಹಜಾರೆಯವರ ಹೋರಾಟವನ್ನು ಹೈಜಾಕ್ ಮಾಡಿ ಪ್ರಖ್ಯಾತಿ ಪಡೆದು ಅಧಿಕಾರಕ್ಕೆ ಬಂದವರು ಅರವಿಂದ್ ಕೇಜ್ರಿವಾಲ್. ಅದೇ ರೀತಿ ಗಾಂಧೀಜಿಯವರ ಸತ್ಯಾಗ್ರಹವನ್ನು ಹೈಜಾಕ್ ಮಾಡಿ ಅಧಿಕಾರಕ್ಕೆ ಬಂದಿದ್ದು ನಕಲಿ ಗಾಂಧಿ ವಂಶ. ಎರಡಕ್ಕೂ ದೆಹಲಿ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಮಾತನಾಡಿ, ಭ್ರಷ್ಟಾಚಾರದ ಹೆಸರೇಳಿಕೊಂಡು ಅಣ್ಣಾ ಹಜಾರೆ ಹೋರಾಟವನ್ನು ಹೈಜಾಕ್ ಮಾಡಿದ ಅರವಿಂದ ಕೇಜ್ರಿವಾಳ್ ಆಮ್‌ಆದ್ಮಿ ಪಕ್ಷ ಕಟ್ಟಿ ಅಧಿಕಾರಕ್ಕೆ ಬಂದರು. ದೇಶದ ಭ್ರಷ್ಚಾಚಾರದ ಕೊಳೆ ತೊಳೆಯಲು ಪೊರಕೆಯನ್ನೇ ಚಿಹ್ನೆಯನ್ನಾಗಿಸಿಕೊಂಡರು. ಎಎಪಿ ಈಗ ತಾನೇ ಕಸವಾಗಿರುವುದು ಒಂದು ತಾಜಾ ಉದಾಹರಣೆಯಾಗಿದೆ ಎಂದರು.ಮುಖಂಡರಾದ ಸಿದ್ದರಾಜುಗೌಡ, ನಾಗಣ್ಣ ಮಲ್ಲಪ್ಪ, ವಿವೇಕ್, ಶಿವಕುಮಾರ್ ಆರಾಧ್ಯ, ಚಂದ್ರು, ಹೊಸಹಳ್ಳಿ ಶಿವು, ಮಹಂತಪ್ಪ, ವಿನೋಭ, ನಾಗಾನಂದ್, ನರಸಿಂಹ, ಶಿವಣ್ಣ, ಪುಟ್ಟಸ್ವಾಮಿ, ಶಿವಕುಮಾರ್, ಪ್ರಸನ್ನ, ಯೋಗೇಶ್, ನಂದೀಶ್ ಸೇರಿದಂತೆ ಹಲವಾರು ಮಂದಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.