ಸಿದ್ದು ರಾಜೀನಾಮೆ ಕೋರಿ ಗೌರ್ನರ್‌ಗೆ ಬಿಜೆಪಿ ದೂರು

| Published : Jun 07 2024, 12:33 AM IST

ಸಾರಾಂಶ

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರು. ಮೊತ್ತದ ಹಗರಣಕ್ಕೆ ಸಂಬಂಧಿಸಿ ಹಣಕಾಸು ಇಲಾಖೆಯನ್ನು ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯುವಂತೆ ಆಗ್ರಹಿಸಿ ಪ್ರತಿಪಕ್ಷ ಬಿಜೆಪಿಯು ರಾಜ್ಯಪಾಲರಿಗೆ ದೂರು ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರು. ಮೊತ್ತದ ಹಗರಣಕ್ಕೆ ಸಂಬಂಧಿಸಿ ಹಣಕಾಸು ಇಲಾಖೆಯನ್ನು ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯುವಂತೆ ಆಗ್ರಹಿಸಿ ಪ್ರತಿಪಕ್ಷ ಬಿಜೆಪಿಯು ರಾಜ್ಯಪಾಲರಿಗೆ ದೂರು ನೀಡಿದೆ.ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ನೇತೃತ್ವದಲ್ಲಿ ವಿಧಾನಸೌಧದಿಂದ ರಾಜಭವನಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ ಶಾಸಕರ ನಿಯೋಗವು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿತು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಹೈದ್ರಾಬಾದ್‍ನಲ್ಲಿ 18ಕ್ಕೂ ಹೆಚ್ಚು ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಹಣವನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ. ಹಣಕಾಸು ಇಲಾಖೆ ಅನುಮತಿ ಇಲ್ಲದೇ ಇದು ನಡೆಯಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳ ಗಮನಕ್ಕೆ ಬರದೇ ಈ ಹಗರಣ ನಡೆದಿರಲು ಸಾಧ್ಯವಿಲ್ಲ. ಕೇವಲ ಸಚಿವರ ರಾಜೀನಾಮೆ ಪಡೆದರೆ ಸಾಲದು ಎಂದರು.ರಾಜ್ಯದ ಇತಿಹಾಸದಲ್ಲಿ ಇಂಥ ದೊಡ್ಡ ಹಗರಣ ನಡೆದಿರಲಿಲ್ಲ. ಹಗರಣ ನಡೆದು ಇಷ್ಟು ದಿನ ಆದರೂ ಸಚಿವರ ರಾಜೀನಾಮೆ ಪಡೆಯಲು ಮುಖ್ಯಮಂತ್ರಿಗಳು ಹಿಂದೆ ಮುಂದೆ ನೋಡುತ್ತಿದ್ದಾರೆ. ಸಿಬಿಐ ತನಿಖೆಗೆ ಕೋರಿದ್ದು, ಅದಕ್ಕೂ ಮಣಿದಿಲ್ಲ. ಈ ವಿಚಾರವನ್ನು ಇಲ್ಲಿಗೇ ಕೈಬಿಡುವುದಿಲ್ಲ. ವಿಪಕ್ಷವಾಗಿ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಮುಖ್ಯಮಂತ್ರಿಗಳು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಆನೆ ನಡೆದಿದ್ದೇ ದಾರಿ ಎಂಬಂತೆ ಮುಖ್ಯಮಂತ್ರಿಯವರ ವರ್ತನೆಯನ್ನು ಖಂಡಿಸುತ್ತೇವೆ ಎಂದು ತಿಳಿಸಿದರು.

ನಾಗೇಂದ್ರ ರಾಜೀನಾಮೆಗೂ ಮುನ್ನವೇ ‘ರಾಜೀನಾಮೆ ಕೊಟ್ಟಿದ್ದಾರೆ’ ಎಂದ ಡಿಕೆಶಿ!

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೆ ಮುನ್ನವೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನಾಗೇಂದ್ರ ರಾಜೀನಾಮೆ ಘೋಷಿಸಿದರು. ಕೊನೆಗೆ, ನಾಗೇಂದ್ರ ಅವರೇ ಡಿ.ಕೆ.ಶಿವಕುಮಾರ್‌ ಅವರಿಗೆ ದೂರವಾಣಿ ಕರೆ ಮಾಡಿ ತಾವಿನ್ನೂ ರಾಜೀನಾಮೆ ನೀಡಿಲ್ಲ ಎಂದು ಹೇಳಿದ ಪ್ರಹಸನ ನಡೆಯಿತು. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಡಿ.ಕೆ.ಶಿವಕುಮಾರ್‌, ಸರ್ಕಾರಕ್ಕೆ, ಪಕ್ಷಕ್ಕೆ ಮುಜುಗರ ಉಂಟಾಗಬಾರದು ಎಂಬ ಕಾರಣಕ್ಕಾಗಿ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ನಾವೇನೂ ಅವರಿಗೆ ರಾಜೀನಾಮೆ ನೀಡಿ ಎಂದು ಹೇಳಿರಲಿಲ್ಲ ಎಂದರು. ತಕ್ಷಣ ನಾಗೇಂದ್ರ ಕರೆ ಮಾಡಿ ರಾತ್ರಿ 7.30ಕ್ಕೆ ರಾಜೀನಾಮೆ ನೀಡುವೆ ಎಂದರು. ಆಗ ಡಿಕೆಶಿ ರಾತ್ರಿ ರಾಜೀನಾಮೆ ನೀಡುತ್ತಾರೆ ಎಂದು ಹೇಳಿದರು.

ಸುದ್ದಿಗೋಷ್ಠಿ ನಡೆಯುತ್ತಿದ್ದ ವೇಳೆಯಲ್ಲಿಯೇ ಸಚಿವ ಬಿ.ನಾಗೇಂದ್ರ ಅವರು ಡಿ.ಕೆ.ಶಿವಕುಮಾರ್‌ ಅವರಿಗೆ ಕರೆ ಮಾಡಿ, ತಾವು ಇನ್ನೂ ರಾಜೀನಾಮೆ ನೀಡಿಲ್ಲ ಎಂದರು. ಜತೆಗೆ ಸಂಜೆ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ನೀಡುತ್ತಿರುವುದನ್ನು ತಿಳಿಸುತ್ತೇನೆ. ರಾತ್ರಿ 7.30ಕ್ಕೆ ಮುಖ್ಯಮಂತ್ರಿಗಳ ಮನೆಗೆ ತೆರಳಿ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು. ಮಾತುಕತೆ ನಂತರ ಡಿ.ಕೆ.ಶಿವಕುಮಾರ್‌ ಸುದ್ದಿಗಾರರ ಕಡೆಗೆ ತಿರುಗಿ, ನಾಗೇಂದ್ರ ಇನ್ನೂ ರಾಜೀನಾಮೆ ನೀಡಿಲ್ಲ. ರಾತ್ರಿ ಕೊಡುತ್ತಾರೆ ಎಂದು ಹೇಳಿ ತಮ್ಮ ಹೇಳಿಕೆ ಸರಿಪಡಿಸಿಕೊಂಡರು.

ಹಗರಣದಲ್ಲಿ ಸಿಎಂ ಭಾಗಿ: ಅಶೋಕ್‌

ಆರ್ಥಿಕ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ನೇರವಾಗಿ ಶಾಮೀಲಾಗಿದ್ದಾರೆ. ಸಚಿವ ಬಿ.ನಾಗೇಂದ್ರ ಜೊತೆ ಮುಖ್ಯಮಂತ್ರಿಗಳು ಕೂಡ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್‌ ಆಗ್ರಹಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗೇಂದ್ರ ಅವರು ಈ ಪ್ರಕರಣದಲ್ಲಿ ಸಣ್ಣ ಆರೋಪಿ. ಇದಕ್ಕೂ ದೊಡ್ಡ ಆರೋಪಿಗಳು ಇದರ ಹಿಂದೆ ಇದ್ದಾರೆ. ಈ ಎಲ್ಲ ಸತ್ಯ ಹೊರಬರಲು ಪ್ರಕರಣವನ್ನು ಸಿಬಿಐಗೆ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡಬೇಕು. ಅಕ್ರಮದ ಹಣವನ್ನು ಸಚಿವರೊಬ್ಬರೇ ನುಂಗಿಲ್ಲ. ಇದರಲ್ಲಿ ಇಡೀ ಸಚಿವ ಸಂಪುಟ ಶಾಮೀಲಾಗಿದ್ದು, ಹಣ ಹೈದ್ರಾಬಾದ್‍ಗೆ ಹೋಗಿ ನಂತರ ದೆಹಲಿಗೆ ತಲುಪಿದೆ. ನನ್ನ ಬುಡಕ್ಕೆ ಬಂದುಬಿಡುತ್ತದೆ ಎಂಬ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಸಿಬಿಐ ತನಿಖೆ ಮಾಡಿಸಲು ಒಪ್ಪುತ್ತಿಲ್ಲ. ರಾಹುಲ್ ಗಾಂಧಿ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಕೂಡ ಇದಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಬಡವರಿಗೆ ಸೇರಬೇಕಾಗಿದ್ದ ಹಣ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೇಬಿಗೆ ಹೋಗಿದೆ. ಪರಿಶಿಷ್ಟ ಜಾತಿ, ಪಂಗಡದ ಹಣವನ್ನೂ ನುಂಗುತ್ತಾರೆ ಎನ್ನುವುದು ರಾಜ್ಯ ರಾಜಕೀಯದ ದುರಂತ. 14 ಬಾರಿ ಬಜೆಟ್ ಮಂಡಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ಈಗ ಅವರ ಕಣ್ಣಿನಡಿಯಲ್ಲೇ ಹಗರಣ ನಡೆದಿದೆ. ಒಂದು ವರ್ಷ ಕಾಂಗ್ರೆಸ್ ಸರ್ಕಾರ ಲೂಟಿ ಗ್ಯಾರಂಟಿಯನ್ನು ನೀಡಿದೆ ಎಂದು ದೂರಿದರು.

ವಾಲ್ಮೀಕಿ ಕೇಸ್‌ ಸಿಎಂಗೆ ಗೊತ್ತಿದ್ದೇ ನಡೆದಿದೆ: ಎಚ್‌ಡಿಕೆ

ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಹಣವರ್ಗಾವಣೆ ಪ್ರಕರಣವು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರಿಗೆ ಗೊತ್ತಿದ್ದೇ ನಡೆದಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಕರಣದಲ್ಲಿ 80-85 ಕೋಟಿ ರು. ರವಾನೆ ಆಗಿರುವ ಮಾಹಿತಿ ಇದೆ. ರಾಜೀನಾಮೆ ನಿರ್ಧಾರ ಮೊದಲೇ ಆಗಬೇಕಿತ್ತು. ಇಷ್ಟೆಲ್ಲಾ ಕೇವಲ ಒಬ್ಬ ಸಚಿವರಿಂದ ಆಗಿರುವುದಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇಬ್ಬರೂ ಸೇರಿಯೇ ಮಾಡಿರುವುದು ಎಂದು ಕಿಡಿಕಾರಿದರು.ರಾಜೀನಾಮೆ ಸಂಬಂಧ ಸಚಿವರಿಗೆ ನಾವು ಹೇಳಿಲ್ಲ ಎಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ಇದು ಕೇವಲ ಡ್ರಾಮಾ ಮಾತ್ರ. ಸಚಿವರಿಗೆ ರಾಜೀನಾಮೆ ನೀಡಿ ಎನ್ನುವ ಧೈರ್ಯ ಇವರಿಗೆ ಇರಲಿಲ್ಲ. ಹಗರಣದಲ್ಲಿ ದೊಡ್ಡ ಮಟ್ಟದ ಕೈಗಳಿರುವುದೇ ಇದಕ್ಕೆ ಕಾರಣ. ಕಳೆದ ಮಾರ್ಚ್ ತಿಂಗಳಿನಲ್ಲಿಯೇ ಹಗರಣ ನಡೆದಿದ್ದು, ಇವರೆಲ್ಲರೂ ಸೇರಿ ಮುಚ್ಚಿಟ್ಟಿದ್ದಾರೆ. ಅಧಿಕಾರಿ ಸಾವಿನಿಂದ ಮತ್ತು ಮಾಧ್ಯಮಗಳ ಮೂಲಕ ಇದು ಹೊರ ಬಾರದಿದ್ದರೆ ಮುಚ್ಚಿ ಹಾಕುತ್ತಿದ್ದರು ಎಂದು ದೂರಿದರು.

ಹಗರಣ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಕೇವಲ ಒಂದು ಗಂಟೆಯಲ್ಲಿ ಹಣ ಬಿಡುಗಡೆಯಾಗಲು ಸಹಾಯ ಮಾಡಿದ್ದು ಯಾರು? ಅದೆಲ್ಲಾ ಹೊರಗೆ ಬರಬೇಕು. ತೆಲಂಗಾಣದ ಚುನಾವಣೆಗೆ ಹೋಗಿರುವ ಹಣ ಇದಾಗಿದೆ. ಹಗರಣದಲ್ಲಿ ಯಾರ, ಯಾರ ಪಾತ್ರ ಏನಿದೆ? ಎಲ್ಲವೂ ಹೊರಗೆ ಬರಬೇಕು. ವಾಲ್ಮೀಕಿ ನಿಗಮದ ಹಣ ತೆಲಂಗಾಣಕ್ಕೆ ಹೋಗಿದೆ ಎನ್ನುವುದು ತನಿಖೆ ಬಳಿಕ ಗೊತ್ತಾಗಲಿದೆ ಎಂದರು.