ಸಾರಾಂಶ
ಕಮಲ ಕಾರ್ಯಕರ್ತರ ಮೆರವಣಿಗೆ । ಶಾಸಕರ ವಿರುದ್ಧ ಘೋಷಣೆ । ಧಿಕ್ಕಾರ ಕೂಗುತ್ತ ತಾಲೂಕು ಕಚೇರಿ ಮುಂದೆ ಧರಣಿ । ದಲಿತರಿಗೆ ನ್ಯಾಯ ದೊರಕಿಸಲು ಆಗ್ರಹ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನ ದಲಿತರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ಹಾಗೂ ಶಾಸಕರ ದಲಿತ ವಿರೋಧಿ ನಿಲುವು, ಭ್ರಷ್ಟಾಚಾರ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ಹೊರಟು ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ವಿರುದ್ಧ ದಿಕ್ಕಾರ ಕೂಗುತ್ತ ತಾಲೂಕು ಕಚೇರಿ ಮುಂದೆ ಕುಳಿತು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್. ನಿರಂಜನ್ ಕುಮಾರ್ ಮಾತನಾಡಿ ಕಳೆದ ಒಂದೂವರೆ ವರ್ಷಗಳಿಂದ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು, ಅಸ್ಪೃಶ್ಯತಾ ಆಚರಣೆಯಂತಹ ಹೇಯ ಕೃತ್ಯಗಳು ನಡೆಯುತ್ತಿವೆ ಎಂದು ಆರೋಪಿಸಿದರು.
ದುರಂತ ಎಂದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ನಿಲವನ್ನೇ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಅನುಸರಿಸುತ್ತಿದ್ದು, ದಲಿತರ ಮೇಲೆ ನಿರಂತರವಾಗಿ ಬೌದ್ಧಿಕ ಹಾಗೂ ಭೌತಿಕ ದಾಳಿಯನ್ನು ಕ್ಷೇತ್ರದಲ್ಲಿ ಮಾಡುತ್ತ ಬಂದಿದ್ದಾರೆ ಇದಕ್ಕೆ ಹತ್ತು ಹಲವು ಉದಾಹರಣೆಗಳಿವೆ ಎಂದರು.ತಾಲೂಕಿನಲ್ಲಿ ದಲಿತರು ನೆಮ್ಮದಿಯಿಂದ ಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ನ್ಯಾಯ ಕೇಳಲು ಹೋದರೆ ಬೇಲಿಯೇ ಎದ್ದು ಹೊಲ ಮೇದಂತೆ ತಾಲೂಕಿನ ಪೊಲೀಸರು ಶಾಸಕರ ಕಪಿಮುಷ್ಠಿಯಲ್ಲಿ ಸಿಲುಕಿ ದಲಿತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದರು.
ಜನತೆ ನೀಡಿದ ತನ್ನ ಅಧಿಕಾರವನ್ನು ಶಾಸಕರು ದುರುಪಯೋಗಪಡಿಸಿಕೊಂಡು ಸಂಬಂಧಿಕರೊಬ್ಬರಿಗೆ ಪುರಸಭೆ ಕೋಟ್ಯಂತರ ರು. ಬೆಲೆ ಬಾಳುವ ಪುರಸಭೆ ಆಸ್ತಿಯನ್ನು ಕಬಳಿಸಿದ್ದಾರೆ. ಇದಕ್ಕೆ ನಿಮಗೆ ಅಧಿಕಾರ ಬೇಕಾ ಎಂದು ಗುಡುಗಿದರು.ಅಗತಗೌಡನಹಳ್ಳಿ ಕ್ರಷರ್ ಪ್ರಕರಣದಲ್ಲಿ ಶಾಸಕರ ಹಿಂಬಾಲಕರು ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಶಾಸಕರ ಸಂಬಂಧಿಕರು ಕೋಟ್ಯಂತರ ರು. ಬೆಲೆಬಾಳುವ ಪುರಸಭೆ ಆಸ್ತಿಯನ್ನು ಅಕ್ರಮವಾಗಿ ಕಬಳಿಸಿ ವಾಣಿಜ್ಯ ಮಳಿಗೆ ಕಟ್ಟಡ ನಿರ್ಮಾಣ ಮಾಡಿದ್ದು ತಕ್ಷಣ ಪುರಸಭೆ ವಶಪಡಿಸಿಕೊಳ್ಳಬೇಕು. ದಲಿತ ಮುಖಂಡ ನಾಗಸ್ವಾಮೀಜಿ ಮೇಲೆ ಹಾಕಿರುವ ಕೇಸನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.ಶಾಸಕರು ಅಧಿಕಾರ ದುರುಪಯೋಗ ಪಡಿಸಿಕೊಂಡು ಹಿರೀಕಾಟಿ ಗ್ರಾಮದ ದಲಿತರ ಜಮೀನುಗಳ ಮೇಲೆ ರಸ್ತೆಯನ್ನು ಅಕ್ರಮವಾಗಿ ನಿರ್ಮಿಸಿಕೊಂಡು ದಬ್ಬಾಳಿಕೆ ನಡೆಸಿರುವುದನ್ನು ಖಂಡಿಸುತ್ತೇನೆ. ರಸ್ತೆಯನ್ನು ಶಾಶ್ವತವಾಗಿ ನಿಲ್ಲಿಸಿ ದಲಿತರಿಗೆ ನ್ಯಾಯ ದೊರಕಿಸಬೇಕು ಎಂದರು.
ಮಂಡಲ ಬಿಜೆಪಿ ಅಧ್ಯಕ್ಷ ಸಿ. ಮಹದೇವಪ್ರಸಾದ್, ಮಾಜಿ ಮಂಡಲ ಅಧ್ಯಕ್ಷರಾದ ಎಲ್.ಸುರೇಶ್, ಎನ್.ಮಲ್ಲೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ರವಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಪ್ರಣಯ್, ಬಿಜೆಪಿ ಮುಖಂಡರಾದ ಬಸವರಾಜು, ನವೀನ್ ಮೌರ್ಯ, ಕಲ್ಲಹಳ್ಳಿ ಮಹೇಶ್, ಚಿಕ್ಕಾಟಿ ಶಿವಣ್ಣನಾಯಕ, ಪುರಸಭೆ ಸದಸ್ಯ ನಾಗೇಶ್, ಬಿಜೆಪಿ ಕಾರ್ಯಕರ್ತರು ಇದ್ದರು.