ಸಾರಾಂಶ
ತುಮಕೂರು: ದೇಶ ರಕ್ಷಣೆ ಮಾಡುತ್ತಿರುವ ಭಾರತೀಯ ಸೇನೆ ವಿರುದ್ಧ ಹೇಳಿಕೆ ನೀಡಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿರುವುದನ್ನು ಜಿಲ್ಲಾ ಬಿಜೆಪಿ ಸ್ವಾಗತಿಸಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಹೇಳಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯನ್ನು ಮರೆತಂತಿರುವ ರಾಹುಲ್ ಗಾಂಧಿ ಅವರು ಕೇವಲ ಪ್ರಚಾರ ಉದ್ದೇಶದಿಂದ ದೇಶ ವಿರೋಧಿ ಹೇಳಿಕೆಯನ್ನು ಹಿಂದೆಯೂ ನೀಡಿ ಕೋರ್ಟ್ ತರಾಟೆಗೆ ಒಳಗಾಗಿದ್ದರು. ಅದನ್ನು ಗಮನದಲ್ಲಿಟ್ಟುಕೊಳ್ಳದೆ ಪದೇಪದೆ ದೇಶ ವಿರೋಧಿ ಹೇಳಿಕೆಗಳನ್ನು ನೀಡುವ ಚಾಳಿ ಮುಂದುವರೆಸಿರುವುದನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.
ಯಾವುದೇ ಲೋಪಗಳಿದ್ದರೆ ಲೋಕಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಚರ್ಚೆ ಮಾಡಲು ಅವಕಾಶ ಇದ್ದಾಗಲೂ ಸದನದ ಹೊರಗೆ ದೇಶ ವಿರೋಧಿ ಹೇಳಿಕೆ ನೀಡುತ್ತಿರುವುದು ದೇಶ ಕಾಯುವ ಸೇನಾನಿಗಳಿಗೆ ಮತ್ತು ದೇಶದ ಪ್ರಜೆಗಳಿಗೆ ಮಾಡಿರುವ ಅವಮಾನವಾಗಿದೆ. ಯಾವುದೇ ದಾಖಲೆ ಇಲ್ಲದೆ ಚೀನಾ ನಮ್ಮ ಎರಡು ಸಾವಿರ ಚದುರ ಕಿಲೋಮೀಟರ್ ಭೂ ಪ್ರದೇಶವನ್ನು ಆಕ್ರಮಿಸಿಕೊಂಡು 20 ಭಾರತೀಯ ಸೈನಿಕರನ್ನು ಕೊಂದಿದೆ. ಅರುಣಾಚಲ ಪ್ರದೇಶದಲ್ಲಿ ನಮ್ಮ ಸೈನಿಕರ ಮೇಲೆ ಚೀನಾ ಸೈನಿಕರು ಹಲ್ಲೆ ನಡೆಸಿದ್ದಾರೆ’ ಎಂದು ಹೇಳಿಕೆ ನೀಡಿದ್ದ ಪ್ರಕರಣವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ನೀಡಿರುವ ತೀರ್ಪು ದೇಶದ ಜನರ ಗೌರವದ ಪ್ರತೀಕವಾಗಿದೆ ಎಂದು ರವಿಶಂಕರ್ ಹೆಬ್ಬಾಕ ಹೇಳಿದ್ದಾರೆ.ಕೋರ್ಟ್ ನೀಡಿರುವ ತೀರ್ಪನ್ನು ಕಡೆಗಣಿಸಿ ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕ ಗಾಂಧಿ ಅವರು ತಮ್ಮ ಸಹೋದರನ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವುದನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ. ಅವರುಗಳ ಹೇಳಿಕೆ ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ. ರಾಹುಲ್ ಗಾಂಧಿ ಅವರಿಗೆ ಉತ್ತಮ ವೈದ್ಯರ ಸಲಹೆ ಅಗತ್ಯವಿದೆ. ದೇಶ ವಿರೋಧಿ ಹೇಳಿಕೆ ನೀಡುವುದನ್ನು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ನವರು ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.