ಸಾರಾಂಶ
ಹುಬ್ಬಳ್ಳಿ: ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸೇನಾನಿಗಳಿಗೆ ಅಭಿನಂದನೆ ಸಲ್ಲಿಸಲು ನಗರದಲ್ಲಿ ಬಿಜೆಪಿ ವತಿಯಿಂದ ತಿರಂಗಾಯಾತ್ರೆ ನಡೆಯಿತು.
ಇಲ್ಲಿಯ ಮೂರುಸಾವಿರ ಮಠ ಶಾಲಾ ಆವರಣದಲ್ಲಿ ಶುಕ್ರವಾರ ಮೂರುಸಾವಿರ ಮಠದ ಗುರುಸಿದ್ಧ ರಾಜೋಗೀಂದ್ರ ಸ್ವಾಮೀಜಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿರಂಗಾ ಯಾತ್ರೆಗೆ ಚಾಲನೆ ನೀಡಿದರು.ಮೂರುಸಾವಿರ ಮಠದಿಂದ ಆರಂಭವಾದ ತಿರಂಗಾ ರ‍್ಯಾಲಿ ದಾಜಿಬಾನಪೇಟ, ಕೊಪ್ಪಿಕರ್ ರಸ್ತೆ, ಚಿಟಗುಪ್ಪಿ ವೃತ್ತ, ಲ್ಯಾಮ್ಮಿಂಗ್ಟನ್ ಶಾಲೆಯ ಮಾರ್ಗವಾಗಿ ಸ್ಟೇಶನ್ ರಸ್ತೆಯಲ್ಲಿರುವ ಅಂಬೇಡ್ಕರ್ ವೃತ್ತ ತಲುಪಿತು. ನಿವೃತ್ತ ಸೈನಿಕರು, ಶಾಲಾ-ಕಾಲೇಜ್ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿ ನೂರಾರು ಜನರು ಭಾಗವಹಿಸಿದ್ದರು.
ವಿದ್ಯಾರ್ಥಿಗಳು ಬೃಹತ್ ಆಕಾರದ ತ್ರಿವರ್ಣ ಧ್ವಜ ಹಿಡಿದು ಯಾತ್ರೆಯಲ್ಲಿ ಭಾಗಹಿಸಿದ್ದರು. ಪ್ರಾಣ ಬಿಟ್ಟೆವೂ ಕಾಶ್ಮೀರ ಬಿಡೆವೂ, ಭಾರತ ಮಾತಾಕೀ ಜೈ, ಒಂದೇ ಮಾತರಂ, ದೇಶ ಭಕ್ತ ಸೈನಿಕರಿಗೆ ಜೈ, ವೀರ ಸೈನಿಕರಿಗೆ ಜೈ ಎಂಬ ಘೋಷಣೆ ಕೂಗಿದರು. ಅಲ್ಲದೆ ಭಾರತೀಯ ಸೇನೆ ನಮ್ಮ ಹೆಮ್ಮೆ, ಪ್ರಾಣದ ಹಂಗು ತೊರೆದ ವೀರ ಯೋಧರಿಗೆ ನಮದೊಂದು ಸಲಾಮ, ಭಯೋತ್ಪಾದಕ ತೊಲಗಬೇಕು ಎಂಬ ಬಿತ್ತಿ ಪತ್ರಗಳ ಪ್ರದರ್ಶಿಸಿದರು.ಮೆರವಣಿಗೆಯಲ್ಲಿ ತ್ರಿವರ್ಣ ಧ್ವಜ ಭಾರತ ಮಾತೆ ಭಾವಚಿತ್ರಗಳು ರಾರಾಜಿಸುತ್ತಿದ್ದವು. ಮೆರವಣಿಗೆ ನಂತರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾಧ್ಯಮದವರೊಂದಿಗೆ ಮಾತನಾಡಿ, ಭಯೋತ್ಪಾಕರ ವಿರುದ್ಧ, ವಿಶೇಷವಾಗಿ ಪಹಲ್ಗಾಮ ದಾಳಿ ನಂತರ ಭಾರತ ಪಾಕಿಸ್ತಾನ ಉಗ್ರರಿಗೆ ಆಪರೇಷನ್ ಸಿಂದೂರ ಮೂಲಕ ತಕ್ಕ ಪ್ರತಿಕ್ರಿಯೆ ನೀಡಿದೆ. ಆದ್ದರಿಂದ ದೇಶ ಸೈನಿಕರಿಗೆ ಅಭಿನಂದನೆ ಹಾಗೂ ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ ಎಂಬ ಸಂದೇಶ ಸಾರುವ ಉದ್ದೇಶದಿಂದ ನಗರದ ನಾಗರಿಕರು ತಿರಂಗಾ ರ‍್ಯಾಲಿಯಲ್ಲಿ ಭಾಗವಹಿಸಿ ಯಶಸ್ವಿ ಮಾಡಿದ್ದಾರೆ ಎಂದು ತಿಳಿಸಿದರು.
ರಾಜಕೀಯ ಇಚ್ಛಾಶಕ್ತಿ, ಸೈನ್ಯದ ಧೈರ್ಯಶಾಲೆ ಪ್ರವೃತ್ತಿ, ದೇಶ ಸೇನೆ ಆಧುನೀಕರಣಗೊಂಡ ಪರಿಣಾಮವಾಗಿ ಭಯೋತ್ಪಾದಕರ ಅಡುಗುತಾಣ, ತರಬೇತಿ ಕೇಂದ್ರ, ವಸತಿ ಸ್ಥಳ ಗುರಿಯಾಗಿಸಿಕೊಂಡು ನಮ್ಮ ಸೈನಿಕರು ನಾಶ ಮಾಡಿದ್ದಾರೆ ಎಂದು ಹೇಳಿದರು.ಪಾಕಿಸ್ತಾನಕ್ಕೆ ಇದರಿಂದ ಊಹಿಸಲಾರದಷ್ಟು ಪೆಟ್ಟು ಬಿದ್ದಿದೆ. ಆ ದೇಶದಲ್ಲಿ ಭಯೋತ್ಪಾದಕರಿಗೆ ಸಹಕಾರ ಎಷ್ಟಿದೆ ಎಂದರೆ ಅವರು ಮೃತಪಟ್ಟಾಗ ಅಂತ್ಯ ಸಂಸ್ಕಾರದಲ್ಲಿ ಅಲ್ಲಿನ ಸೈನ್ಯದ ಅಧಿಕಾರಿಗಳು, ರಾಜಕಾರಣಿಗಳು ಭಾಗವಹಿಸಿದ್ದರು ಎಂದು ಕಿಡಿಕಾರಿದರು.
ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಾಜಿ ಶಾಸಕ ಅಶೋಕ ಕಾಟವೆ, ಹಿರಿಯ ಮುಖಂಡರಾದ ರಂಗಾ ಬದ್ದಿ, ಬಸವರಾಜ ಕುಂದಗೋಳಮಠ, ದತ್ತಮೂರ್ತಿ ಕುಲಕರ್ಣಿ, ಸಂತೋಷ ಚವ್ಹಾಣ, ವೀಣಾ ಬರದ್ವಾಡ, ದುರ್ಗಮ್ಮ ಬಿಜವಾಡ, ಚಂದ್ರಿಕಾ ಮೇಸಿ, ಸಿದ್ದು ಮೊಗಲಿಶೆಟ್ಟರ, ರವಿ ನಾಯಕ ಇದ್ದರು.