ಬೆಂಗಳೂರು ಕೇಂದ್ರದಲ್ಲಿ ಬಿಜೆಪಿ-ಕಾಂಗ್ರೆಸ್‌ ಸಮಬಲ ಹೋರಾಟ

| Published : Apr 24 2024, 02:16 AM IST

ಬೆಂಗಳೂರು ಕೇಂದ್ರದಲ್ಲಿ ಬಿಜೆಪಿ-ಕಾಂಗ್ರೆಸ್‌ ಸಮಬಲ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿರುವ ಲೋಕಸಭಾ ಕ್ಷೇತ್ರಗಳಲ್ಲಿ ಬೆಂಗಳೂರು ಕೇಂದ್ರ ಕೂಡ ಒಂದು.

ವಿಜಯ್ ಮಲಗಿಹಾಳ

ಕನ್ನಡಪ್ರಭ ವಾರ್ತೆ ಬೆಂಗಳೂರುರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿರುವ ಲೋಕಸಭಾ ಕ್ಷೇತ್ರಗಳಲ್ಲಿ ಬೆಂಗಳೂರು ಕೇಂದ್ರ ಕೂಡ ಒಂದು. ಎರಡೂ ಪಕ್ಷಗಳು ಹೆಚ್ಚೂ ಕಡಮೆ ಸಮಬಲದ ಹೋರಾಟ ನಡೆಸಿವೆ. ಗೆಲುವಿನ ಅಂತರ ಕಡಮೆಯೇ ಇರಲಿದೆ ಎಂಬುದು ಮೇಲ್ನೋಟಕ್ಕೇ ಸ್ಪಷ್ಟವಾಗಿ ಕಂಡು ಬರುತ್ತದೆ.

ಒಟ್ಟು 24 ಮಂದಿ ಕಣದಲ್ಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ನ ಅಭ್ಯರ್ಥಿಗಳನ್ನು ಹೊರತುಪಡಿಸಿ ಇನ್ನುಳಿದವರು ಹೆಸರಿಗೆ ಎಂಬಂತಿದ್ದಾರೆ. ಬಿಜೆಪಿಯಿಂದ ಹಾಲಿ ಸಂಸದ ಪಿ.ಸಿ.ಮೋಹನ್ ಸ್ಪರ್ಧಿಸಿದ್ದರೆ ಕಾಂಗ್ರೆಸ್‌ನಿಂದ ಹಿರಿಯ ಕಾಂಗ್ರೆಸ್ ನಾಯಕ ಕೆ.ರೆಹಮಾನ್ ಖಾನ್‌ ಪುತ್ರ ಮನ್ಸೂರ್ ಅಲಿ ಖಾನ್‌ ಕಣಕ್ಕಿಳಿದಿದ್ದಾರೆ.

ಹ್ಯಾಟ್ರಿಕ್ ಗೆಲುವನ್ನು ಸಾಧಿಸಿರುವ ಪಿ.ಸಿ.ಮೋಹನ್ ನಾಲ್ಕನೇ ಬಾರಿ ಜಯದ ನಿರೀಕ್ಷೆಯಲ್ಲಿದ್ದಾರೆ. ಕ್ಷೇತ್ರ ಪುನರ್‌ವಿಂಗಡಣೆ ಬಳಿಕ 2009ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕ್ಷೇತ್ರದಿಂದ ಸತತವಾಗಿ ಬಿಜೆಪಿಯಿಂದ ಮೋಹನ್ ಅವರೇ ಗೆದ್ದಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಈಗಿನ ಚುನಾವಣೆ ಸೇರಿದಂತೆ ಇದುವರೆಗೆ ಅಲ್ಪಸಂಖ್ಯಾತ ಸಮುದಾಯದವರನ್ನೇ ಕಣಕ್ಕಿಳಿಸಿದೆ.

ಇದು ಅಲ್ಪಸಂಖ್ಯಾತರೇ ನಿರ್ಣಾಯಕರಾಗಿರುವ ಕ್ಷೇತ್ರ. ಮೇಲಾಗಿ ಮಧ್ಯಮ ಹಾಗೂ ಬಡವರ್ಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕೊಳಗೇರಿಗಳಿವೆ. ಹೀಗಾಗಿಯೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಗೆ ಇಲ್ಲಿ ಹೇಗೆ ಮನ್ನಣೆ ಸಿಗಲಿದೆ ಎಂಬುದೂ ಕುತೂಹಲಕರವಾಗಿದೆ.

ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ವಜ್ಞನಗರ, ಸಿ.ವಿ.ರಾಮನ್‌ ನಗರ. ಶಿವಾಜಿನಗರ, ಶಾಂತಿನಗರ, ಗಾಂಧಿ ನಗರ, ರಾಜಾಜಿನಗರ, ಚಾಮರಾಜಪೇಟೆ ಮತ್ತು ಮಹದೇವಪುರ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, ಇನ್ನುಳಿದ ಮೂರರಲ್ಲಿ ಬಿಜೆಪಿ ಶಾಸಕರಿದ್ದಾರೆ. ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ಜಮೀರ್ ಅಹಮದ್ ಈ ಕ್ಷೇತ್ರದ ವ್ಯಾಪ್ತಿಗೆ ಸೇರಿದವರು.

ಮೇಲ್ನೋಟಕ್ಕೆ ಕಾಣುವಂತೆ ಕಾಂಗ್ರೆಸ್ ನಾಯಕರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸುಮಾರು 70 ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದ ರಿಜ್ವಾನ್ ಅರ್ಷದ್‌ ಈಗ ಶಿವಾಜಿನಗರದ ಶಾಸಕರು. ಶಾಸಕ ಹಾಗೂ ಮಾಜಿ ಸಚಿವ ಕೆ.ಜೆ.ಜಾರ್ಜ್‌, ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್‌ ಮೊದಲಾದವರಿದ್ದಾರೆ. ಅವರೆಲ್ಲರೂ ಬಿರುಸಿನ ಕೆಲಸ ಮಾಡಿದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಾಳೆಯದಿಂದ ಒಗ್ಗಟ್ಟಿನ ಪ್ರಚಾರ ಮೇಲ್ನೋಟಕ್ಕೆ ಕಂಡು ಬರುತ್ತಿಲ್ಲ ಎನ್ನುವುದೇ ಬಿಜೆಪಿಗೆ ತುಸು ನಿಟ್ಟುಸಿರು ಬಿಡುವಂಥ ವಿಷಯ.

ಬಿಜೆಪಿಯಲ್ಲಿ ಹಾಲಿ ಶಾಸಕರ ಪೈಕಿ ರಾಜಾಜಿನಗರದ ಸುರೇಶ್‌ಕುಮಾರ್, ಸಿ.ವಿ.ರಾಮನ್‌ನಗರದ ಎಸ್‌.ರಘು ಅವರು ಪ್ರಚಾರದಲ್ಲಿ ನಿರತರಾಗಿದ್ದರೆ, ಮಹದೇವಪುರ ಕ್ಷೇತ್ರದ ಹಾಲಿ ಶಾಸಕಿ ಮಂಜುಳಾ ಅವರ ಪತಿ ಹಾಗೂ ಮಾಜಿ ಸಚಿವ ಅರವಿಂದ್ ಲಿಂಬಾವಳಿ ಹೆಚ್ಚು ಸಕ್ರಿಯರಾಗಿಲ್ಲ. ಮೇಲಾಗಿ ಬಿಜೆಪಿ ಅಭ್ಯರ್ಥಿ ಮೋಹನ್ ಅವರು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಹೆಚ್ಚಾಗಿ ನಂಬಿ ಕೂರದೇ ಪ್ರಧಾನಿ ನರೇಂದ್ರ ಮೋದಿ ಅವರ ನಾಮವನ್ನೇ ನಂಬಿ ಭರದ ಪ್ರಚಾರ ನಡೆಸಿರುವುದು ಕಂಡು ಬರುತ್ತಿದೆ.-ಬಾಕ್ಸ್ ಸುದ್ದಿಗಳು-ಕ್ಷೇತ್ರದ ಮತದಾರರ ವಿವರ:

ಪುರುಷರು- 12,36,897

ಮಹಿಳೆಯರು- 11,61,548

ಇತರರು- 465ಒಟ್ಟು- 23,98,910

ಜಾತಿ-ಮತ ಲೆಕ್ಕಾಚಾರ:

ಅಹಿಂದ ವರ್ಗದ ಮತದಾರರು ಹೆಚ್ಚಿರುವ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ನಿರ್ಣಾಯಕರಾಗಿದ್ದಾರೆ. ಅವರನ್ನು ಹೊರತುಪಡಿಸಿದರೆ ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತಮಿಳು ಭಾಷಿಕರಲ್ಲಿ ಕ್ರಿಶ್ಚಿಯನ್ನರೂ ಸೇರಿದ್ದಾರೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡು ಮೀಸಲು ಕ್ಷೇತ್ರಗಳಿವೆ ಎನ್ನುವುದು ಗಮನಾರ್ಹ. ಇನ್ನುಳಿದಂತೆ ಜೈನರು, ಗುಜರಾತಿಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಅಭ್ಯರ್ಥಿಗಳ ಪರಿಚಯ:1.ಪಿ.ಸಿ.ಮೋಹನ್‌- ಇದೇ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಇದಕ್ಕೂ ಮುನ್ನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ 2009, 2014 ಮತ್ತು 2019 ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ. ಇತರ ಹಿಂದುಳಿದ ವರ್ಗಕ್ಕೆ ಸೇರಿದ ಮೋಹನ್ ಅವರು ಹೆಚ್ಚು ಸದ್ದು ಗದ್ದಲವಿಲ್ಲದೆ ರಾಜಕಾರಣ ಮಾಡುವ ವ್ಯಕ್ತಿ ಎಂದೇ ಹೆಸರಾಗಿದ್ದಾರೆ.

2.ಮನ್ಸೂರ್ ಅಲಿ ಖಾನ್‌- ಕೇಂದ್ರದ ಮಾಜಿ ಸಚಿವ ರೆಹಮಾನ್‌ ಖಾನ್‌ ಪುತ್ರರಾಗಿರುವ ಮನ್ಸೂರ್ ಅಲಿ ಖಾನ್‌ ಯುವ ಕಾಂಗ್ರೆಸ್‌ ಮೂಲಕ ರಾಜಕಾರಣ ಪ್ರವೇಶಿಸಿದರು. ಈ ಹಿಂದೆ ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಮನ್ಸೂರ್‌ ತೆಲಂಗಾಣದ ಕಾಂಗ್ರೆಸ್ ಉಸ್ತುವಾರಿಯಾಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷರಾಗಿದ್ದರು.

2019ರ ಚುನಾವಣಾ ಫಲಿತಾಂಶ:

ಪಿ.ಸಿ.ಮೋಹನ್‌- ಬಿಜೆಪಿ- 6,02,583ರಿಜ್ವಾನ್ ಅರ್ಷದ್‌- ಕಾಂಗ್ರೆಸ್‌- 5,31,885