ದೇಶದ ಅಭಿವೃದ್ಧಿಗೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಮಾರಕ: ಬಿಎಸ್ಪಿ ಅಭ್ಯರ್ಥಿ

| Published : Apr 03 2024, 01:35 AM IST

ದೇಶದ ಅಭಿವೃದ್ಧಿಗೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಮಾರಕ: ಬಿಎಸ್ಪಿ ಅಭ್ಯರ್ಥಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಕ್ಷೇತ್ರದಿಂದ ಮೂರು ಬಾರಿ ಸಂಸದರಾದ ಡಿ.ಕೆ. ಸುರೇಶ್ ಅವರು ಈ ಭಾಗದ ರೈತರ,ಬಡವರ ಪರವಾಗಿ ಶಾಶ್ವತವಾದ ಒಂದೇ ಒಂದು ಯೋಜನೆಯನ್ನು ಜಾರಿಗೆ ತಂದಿಲ್ಲ.

ಕನ್ನಡಪ್ರಭ ವಾರ್ತೆ ಕನಕಪುರ

ದೇಶದಲ್ಲಿ ಮನುವಾದಿಗಳ ಆಡಳಿತಕ್ಕೆ ಕಾಂಗ್ರೆಸ್ ಪಕ್ಷ ಸಹ ಪರೋಕ್ಷವಾಗಿ ಬೆಂಬಲಕ್ಕೆ ನಿಂತಿದ್ದು, ಇವೆರಡೂ ರಾಷ್ಟ್ರೀಯ ಪಕ್ಷಗಳಿಂದ ದೇಶ ಹಾಗೂ ದೇಶದ ಜನರ ಅಭಿವೃದ್ಧಿ ಅಸಾಧ್ಯ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಎಸ್ಪಿ ಪಕ್ಷದ ಅಭ್ಯರ್ಥಿ ಡಾ. ಚಿನ್ನಪ್ಪ ವೈ.ಚಿಕ್ಕಹಾಗಡೆ ಆರೋಪಿಸಿದರು.

ನಗರದ ಮೇಳೆಕೋಟಿ ಬಳಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಬಾಬಾ ಸಾಹೇಬರು ರಚಿಸಿದ ಸಂವಿಧಾನ ಜಾರಿಯಾಗಿ ಏಳು ದಶಕಗಳು ಕಳೆದರೂ ಸಹ ಆಳುವ ಸರ್ಕಾರಗಳು ದೇಶದ ಜನರಿಗೆ ಇನ್ನೂ ಮೂಲಭೂತ ಸೌಲಭ್ಯ ಕಲ್ಪಿಸಿಕೊಟ್ಟಿಲ್ಲ. ಜನರಿಗೆ ಉಚಿತ ಶಿಕ್ಷಣ,ಆರೋಗ್ಯ, ಉದ್ಯೋಗ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡಬೇಕಾಗಿದ್ದ ಆಳುವ ಸರ್ಕಾರಗಳು ಕೇವಲ ತಮ್ಮ ಹಾಗೂ ತಮ್ಮ ಪಕ್ಷದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿವೆ ಎಂದು ಆರೋಪಿಸಿದರು.

ಈ ಕ್ಷೇತ್ರದಿಂದ ಮೂರು ಬಾರಿ ಸಂಸದರಾದ ಡಿ.ಕೆ. ಸುರೇಶ್ ಅವರು ಈ ಭಾಗದ ರೈತರ,ಬಡವರ ಪರವಾಗಿ ಶಾಶ್ವತವಾದ ಒಂದೇ ಒಂದು ಯೋಜನೆಯನ್ನು ಜಾರಿಗೆ ತಂದಿಲ್ಲ. ಆದರೆ ಈಗ ತಮ್ಮ ಚುನಾವಣಾ ಪ್ರಚಾರದಲ್ಲಿ ಕೋವಿಡ್ ಸಂದರ್ಭದಲ್ಲಿ ನಾನು ಯಾರೂ ಮಾಡದ ಕೆಲಸವನ್ನು ಮಾಡಿದ್ದೇನೆ ಎಂದು ಬರೀ ಪ್ರಚಾರ ತೆಗೆದುಕೊಳ್ಳುತ್ತಿದ್ದು, ನಮ್ಮ ಪಕ್ಷದ ಕಾರ್ಯಕರ್ತರು ಸಹ ಕೋವಿಡ್ ವೇಳೆ ಅನಾಥ ಶವಗಳಿಗೆ ಮುಕ್ತಿ ನೀಡಿದ್ದಲ್ಲದೆ ಅವರ ಕುಟುಂಬಗಳಿಗೆ ತಮ್ಮ ಕೈಲಾದಷ್ಟು ನೆರವನ್ನು ನೀಡಿದ್ದು, ಆದರೆ ಇದನ್ನು ನಮ್ಮ ಚುನಾವಣಾ ಪ್ರಚಾರಕ್ಕೆ ಬಳಸಿ ಕೊಳ್ಳುವ ಹೀನಾಯ ಸ್ಥಿತಿಗೆ ತಲುಪಿಲ್ಲ ಎಂದರು.

ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಮೇಕೆದಾಟು ಯೋಜನೆ ಜಾರಿ ಮಾಡುವುದಾಗಿ ಇಡೀ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಸಾವಿರಾರು ಜನರನ್ನು ಸೇರಿಸಿ ಪಾದಯಾತ್ರೆ ಎಂಬ ದೊಂಬರಾಟ ಮಾಡಿ, ಈಗ ಅವರದೇ ಸರ್ಕಾರವಿದ್ದರೂ ಮೌನವಾಗಿದ್ದು, ಕೇವಲ ಚುನಾವಣಾ ಪ್ರಚಾರಕ್ಕೆ ಮೇಕೆದಾಟು ಯೋಜನೆಯನ್ನು ಬಳಸಿಕೊಂಡರು ಎಂದು ದೂರಿದರು.

ಈ ಕ್ಷೇತ್ರದ ಅಭಿವೃದ್ಧಿ ವಂಚಿತವಾಗಿ ಹಿಂದುಳಿದಿದ್ದು, ಕಳೆದ ಹತ್ತು ವರ್ಷಗಳಲ್ಲಿ ಇವರ ಸಾಧನೆಗಳು ಹಾಗೂ ಅಭಿವೃದ್ಧಿ ಎಂದರೆ ಇವರ ಆಸ್ತಿ ದ್ವಿಗುಣಗೊ಼ಂಡಿರುವುದು ಮಾತ್ರವಾಗಿದೆ. ತಮ್ಮ ಅನುಕೂಲಕ್ಕಾಗಿ ತೆರಿಗೆ ಹೆಸರಿನಲ್ಲಿ ದೇಶವನ್ನು ಇಬ್ಭಾಗ ಮಾಡಲು ಹೊರಟಿರುವ ಈ ಮಹಾನ್ ನಾಯಕರಿಗೆ ಈ ಭಾಗದ ಮತದಾರ ಬಂಧುಗಳು ತಕ್ಕ ಉತ್ತರ ನೀಡುವುದರ ಜೊತೆಗೆ ಬಿಎಸ್ಪಿ ಪಕ್ಷಕ್ಕೆ ಮತ ನೀಡಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ನದಾನಪ್ಪ, ಜಿಲ್ಲಾಧ್ಯಕ್ಷ ಕೃಷ್ಣಪ್ಪ ಬಿಎಸ್ಪಿ ರಾಜ್ಯ ಉಸ್ತುವಾರಿ ಎಂ.ನಾಗೇಶ್, ಜಿಲ್ಲಾ ಸಂಯೋಜಕ ಉಮೇಶ್, ವೆಂಕಟಾಚಲ, ಜಿಲ್ಲಾ ಉಪಾಧ್ಯಕ್ಷ ಮಹದೇವ್, ಕಾರ್ಯದರ್ಶಿ ರಮೇಶ್, ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಕಾಂತರಾಜು ಸೇರಿ ಪಕ್ಷದ ಕಾರ್ಯಕರ್ತರು, ಮುಖಂಡರು ಭಾಗಿಯಾಗಿದ್ದರು.