ಕುಕನೂರು: ರಾಷ್ಟ್ರೀಯತೆ ಮತ್ತು ರಾಷ್ಟ್ರೀಯ ಸುರಕ್ಷತೆಗೆ ಬಿಜೆಪಿ ಅರ್ಪಣೆ ಆಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಜರುಗಿದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, 1980ರಿಂದ ಆರಂಭವಾದ ಬಿಜೆಪಿ ಭಾರತದ ಉಳಿವಿಗೆ ಶ್ರಮಿಸುತ್ತಿದೆ. ರಾಷ್ಟ್ರದ ಹಿತವೊಂದೇ ಪಕ್ಷದ ಗುರಿ ಆಗಿದ್ದು, ರಾಷ್ಟ್ರ ಧರ್ಮದ ಉಳಿವಿಗೆ ಶ್ರಮಿಸುತ್ತಿದೆ. ಬಿಜೆಪಿ ಸ್ಥಾಪಿಸಿದ ಮಹನೀಯರು ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದರು. ಸದ್ಯ ಬಿಜೆಪಿ ವಿಶ್ವದಲ್ಲಿ ಮಹತ್ತರ ಸ್ಥಾನ ಗಳಿಸಲು ಪ್ರಾಮಾಣಿಕ ಹಾದಿ ಹಾಗೂ ಜನಾನುರಾಗಿ ಕಾರ್ಯಗಳು ಮಾತ್ರ ಕಾರಣ ಎಂದರು.ವಿಶ್ವದಲ್ಲಿ ಗುರುವಿನ ಸ್ಥಾನದಲ್ಲಿ ಭಾರತ ದೇಶ ಕಾಣಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಅಣ್ಣ-ತಮ್ಮಂದಿರು ಇದ್ದರೂ ಅವರಿಗಾಗಿ ಸಮಯ ನೀಡುವುದಿಲ್ಲ, ಬರೀ ದೇಶದ ಚಿಂತನೆ ಅವರದ್ದು. ಕುಟುಂಬ ವ್ಯಾಮೋಹ ಅವರಿಗಿಲ್ಲ. ಪ್ರಾಮಾಣಿಕತೆ, ಧರ್ಮನಿಷ್ಠೆಗೆ ಶ್ರೀರಾಮಚಂದ್ರನ ಆಡಳಿತ ಹೋಲಿಕೆ ಮಾಡುತ್ತೇವೆ. ಅಂತಹ ಹೋಲಿಕೆ ಸದ್ಯ ಪ್ರಧಾನಿ ಮೋದಿ ಅವರದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿಯಿಂದ ಇಡೀ ರಾಷ್ಟ್ರ ಗೌರವ ನೀಡುತ್ತಿದೆ. ಕಡು ಬಡತನದಲ್ಲಿ ಹುಟ್ಟಿದ ನರೇಂದ್ರ ಮೋದಿ ಜನಸಂಘಕ್ಕೆ ತಮ್ಮನ್ನು ಸಂಪೂರ್ಣ ಅರ್ಪಣೆ ಮಾಡಿಕೊಂಡರು. ಮೊದಲಿಗೆ ಗುಜರಾತನ್ನು ಬಿಜೆಪಿಯನ್ನಾಗಿಸಿದ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ. ಆನಂತರ ಇಡೀ ರಾಷ್ಟ್ರ ಸಹ ಬಿಜೆಪಿಮಯವಾಗುತ್ತಿದೆ. ದೇಶದ ಪ್ರಧಾನಿ ಆಗಿ ವಿಶ್ವದ ಗಮನ ಸೆಳೆಯುತ್ತಿದ್ದಾರೆ ಎಂದರು.
ಬಿಟ್ಟಿ ಕಾರ್ಯಕ್ರಮಗಳಿಂದ ರಾಜ್ಯದ ಆಡಳಿತ ಪಕ್ಷ ಜನಾನುರಾಗಿ ಆಗುವ ಕನಸು ಕಾಣುತ್ತಿದೆ. ಅವರೆಂದಿಗೂ ಬಡವರ ಕೈಗೆ ಕೆಲಸ ಕೊಡುವುದಿಲ್ಲ. ನಂಬಿದ ಜನರಿಗೆ ಕೈ ಕೊಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಜನರ ಕಷ್ಟ ಅರಿತು ಚಿಂತನೆ ಮಾಡಿ ಜನಾಭಿವೃದ್ಧಿ ಯೋಜನೆ ರೂಪಿಸುತ್ತಾರೆ ಎಂದರು.ಬಿಜೆಪಿ ಯಲಬುರ್ಗಾ ಮಂಡಲ ಅಧ್ಯಕ್ಷ ಮಾರುತಿ ಹೊಸಮನಿ, ಪ್ರಮುಖರಾದ ಅಯ್ಯನಗೌಡ ಕೆಂಚಮ್ಮನವರ್, ಪ್ರಕಾಶ ತಹಸೀಲ್ದಾರ, ಶರಣಪ್ಪ ಬಣ್ಣದಬಾವಿ, ಕರಬಸಯ್ಯ ಬಿನ್ನಾಳ, ಪ್ರಭು ಆಚಾರ್, ಮಂಜುನಾಥ ನಾಡಗೌಡರ್, ಮಂಜುನಾಥ ಚನ್ನಪ್ಪನಹಳ್ಳಿ, ಕನಕಪ್ಪ ಬ್ಯಾಡರ್, ಮಹಾಂತೇಶ ಹೂಗಾರ, ಪಪಂ ಸದಸ್ಯ ಮಲ್ಲಿಕಾರ್ಜುನ ಚೌದ್ರಿ ಇತರರಿದ್ದರು.