ಸಾರಾಂಶ
ಬ್ಯಾಡಗಿ: ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ಹಾಗೂ ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಸೋಮವಾರ ಪಟ್ಟಣದಲ್ಲಿ ಬಿಜೆಪಿ ತಾಲೂಕು ಘಟಕದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು.
ಪಟ್ಟಣದ ಹಳೆಯ ಪುರಸಭೆಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಮುಖ್ಯರಸ್ತೆ, ಸುಭಾಸ್ ಸರ್ಕಲ್ ರೈಲ್ವೆ ಸ್ಟೇಷನ್ ಮೂಲಕ ತಹಸೀಲ್ದಾರ್ ಕಚೇರಿ ತಲುಪಿತು. ಮೆರವಣಿಗೆಯುದ್ದಕ್ಕೂ ಧರ್ಮಸ್ಥಳದ ಪಿತೂರಿ ಹಿಂದಿರುವ ಕಾಂಗ್ರೆಸ್ ಸಂಸದ ಸೆಂಥಿಲ್, ಮಹೇಶ ಶೆಟ್ಟಿ ತಿಮರೋಡಿ, ಯೂಟ್ಯೂಬರ್ ಸಮೀರ್, ಬುರುಡೆ ಚಿನ್ನಯ್ಯ ಇನ್ನಿತರರ ವಿರುದ್ಧ ಘೋಷಣೆಗಳನ್ನು ಕೂಗಿದರು.ನಗರ ನಕ್ಸಲರ ಹಾವಳಿ: ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಮಹೇಶ ಶೆಟ್ಟಿ ತಿಮರೋಡಿ ಅವರ ಬುರುಡೆ ಗ್ಯಾಂಗ್ ನಗರ ನಕ್ಸಲರಾಗಿದ್ದಾರೆ. ಜಿಹಾದಿಗಳು ಹಾಗೂ ಕ್ರೈಸ್ತ ಮಶಿನರಿಗಳು ಗ್ಯಾಂಗ್ ಹಿಂದೂ ಧರ್ಮದ ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದು, ವ್ಯವಸ್ಥಿತವಾಗಿ ಅವುಗಳ ಚಾರಿತ್ರ್ಯ ವಧೆ ಮಾಡಲಾಗುತ್ತಿದೆ. ಕೂಡಲೇ ಇಂತಹುದಕ್ಕೆ ಅವಕಾಶ ನೀಡದಂತೆ ಸರ್ಕಾರ ಅವರ ವಿರುದ್ಧ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದರು.
ಧರ್ಮಾಧಿಕಾರಿಗಳಿಗೆ ಅಭಯ: ಜಿಲ್ಲಾ ಉಪಾಧ್ಯಕ್ಷ ಬಸವರಾಜ ಛತ್ರದ ಮಾತನಾಡಿ, ಕ್ಷೇತ್ರ ಧರ್ಮಸ್ಥಳವು ಕೇವಲ ರಾಜ್ಯವಲ್ಲದೇ ದೇಶಾದ್ಯಂತ ಕೋಟ್ಯಂತರ ಭಕ್ತರನ್ನು ಹೊಂದಿದೆ. ಇಂತಹ ಸುಕ್ಷೇತ್ರದ ಮೇಲೆ ಹಲವರು ಬೆಂಬಿಡದೆ ಷಡ್ಯಂತ್ರ ನಡೆಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ಇದರ ಹಿಂದೆ ಹಿಂದೂಗಳ ಶ್ರದ್ಧಾಭಕ್ತಿಯನ್ನು ಅತ್ಯಂತ ನಿಕೃಷ್ಟವಾಗಿ ಬಿಂಬಿಸುವ ಹುನ್ನಾರವಿದೆ. ಇದಕ್ಕೆ ಯಾವತ್ತು ಹಿಂದೂಗಳು ಸೊಪ್ಪು ಹಾಕುವುದಿಲ್ಲ ಎಂದರು.ಧರ್ಮಕ್ಕೆ ಧಕ್ಕೆ ತರಲು ಹುನ್ನಾರ: ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ಮಾತನಾಡಿ, ದೇಶದ ಪ್ರಸಿದ್ಧ ಹಿಂದೂ ಧಾರ್ಮಿಕ ಕೆಂದ್ರಗಳಾದ ತಿರುಪತಿ ಶನಿಸಿಂಗಾಪುರ, ಶಬರಿಮಲೈ ಸೇರಿದಂತೆ ಹಲವು ಹಿಂದೂ ದೇವಸ್ಥಾನಗಳ ಪಾವಿತ್ರ್ಯ ಹಾಳು ಮಾಡಲು ಧರ್ಮ ವಿರೋಧಿಗಳಿಗೆ ವಿದೇಶದಿಂದ ಹಣ ಹರಿದುಬರುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಈ ಪ್ರಕರಣವನ್ನು ಎನ್‌ಐಎ ವಹಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರದ ವೈಫಲ್ಯ: ಮುಖಂಡ ಎಂ.ಎಸ್. ಪಾಟೀಲ ಮಾತನಾಡಿ, ಅನಾಮಿಕ ವ್ಯಕ್ತಿಯೊಬ್ಬ ಯಾವುದೇ ಆಧಾರಗಳಿಲ್ಲದೇ ಮಾಡಿದ ಆರೋಪಕ್ಕೆ ರಾಜ್ಯ ಸರ್ಕಾರ ಲಕ್ಷಾಂತರ ರುಪಾಯಿಗಳನ್ನು ವ್ಯಯಿಸಿ, ಆತ ಹೇಳಿದ ಕಡೆಗಳೆಲ್ಲೆಲ್ಲ ಗುಂಡಿಗಳನ್ನು ತೋಡಿದೆ. ಇದಕ್ಕೂ ಮೊದಲು ಅವನಿಗೆ ಬ್ರೈನ್ ಮಾಪಿಂಗ್ ಮಾಡಿದ್ದರೆ ಸತ್ಯ ಹೊರ ಬರುತ್ತಿತ್ತು. ಸರ್ಕಾರ ಅವನ ಆಣತಿಯಂತೆ ಕುಣಿಯುತ್ತಿದೆ ಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ವಕ್ತಾರ ಪರಮೇಶ್ವರಪ್ಪ ಮೇಗಳಮನಿ, ಮುಖಂಡರಾದ ಮುರಿಗೆಪ್ಪ ಶೆಟ್ಟರ, ಚಂದ್ರಣ್ಣ ಶೆಟ್ಟರ, ಶಿವಯೋಗಿ ಶಿರೂರು, ಗಾಯತ್ರಿ ರಾಯ್ಕರ, ಸುಭಾಸ ಮಾಳಗಿ, ಶಿವಯೋಗಿ ಉಕ್ಕುಂದ, ಶಿವಬಸಪ್ಪ ಕುಳೇನೂರ, ಶಿವಣ್ಣ ಕುಮ್ಮೂರ, ಶೇಖರಗೌಡ ಗೌಡ್ರ, ಕವಿತಾ ಸೊಪ್ಪಿನಮಠ, ಸುರೇಶ ಉದ್ಯೋಗಣ್ಣನವರ, ಸರೋಜಾ ಉಳ್ಳಾಗಡ್ಡಿ, ಕಲಾವತಿ ಬಡಿಗೇರ, ಶ್ರೇಣಿಕರಾಜ್ ಯಳವತ್ತಿ, ಶಿವಾನಂದ ಕಡಗಿ, ಶಂಕರಗೌಡ ಪಾಟೀಲ, ಜ್ಯೋತಿ ಕುದಿರಾಳ, ನಾಗರಾಜ ಹಾವನೂರ, ಶಂಕ್ರಪ್ಪ ಅಕ್ಕಿ, ಮೃತ್ಯುಂಜಯ ಕಡೇಮನಿ, ವಿಜಯಭರತ ಬಳ್ಳಾರಿ, ರುದ್ರೇಶ ಚಿನ್ನಣ್ಣನವರ, ವಿನಾಯಕ ಕಂಬಳಿ, ಶಿವಾನಂದ ಒಗ್ಗರಣಿ, ಗುತ್ತೆಮ್ಮ ಮಾಳಗಿ, ಗಿರಿಜಮ್ಮ ಪಟ್ಟಣಶೆಟ್ಟಿ, ಪ್ರದೀಪ ಜಾಧವ, ಅಂಬಾಲಾಲ್ ಜೈನ್, ಮಹಾವೀರ ಜೈನ್, ಉಮೇಶ ಜೈನ್, ಪ್ರವೀಣ ಜೈನ್ ಭಾಗವಹಿಸಿದ್ದರು.