ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ ಭಾರತ ಜಾತ್ಯತೀತ ರಾಷ್ಟ್ರ. ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯವನ್ನು ಒಲೈಕೆ ಮಾಡುವ ದೃಷ್ಟಿಕೋನದಲ್ಲಿ ದಲಿತರು ಮತ್ತು ಹಿಂದುಳಿದ ವರ್ಗಕ್ಕೆ ಸಂವಿಧಾನ ನೀಡಿರುವ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಬಿಜೆಪಿ ಮಂಡಲದ ತಾಲೂಕು ಅಧ್ಯಕ್ಷ ರುದ್ರೇಶ್ ಆರೋಪ ಮಾಡಿದರು. ಪಟ್ಟಣದ ಎಸ್‌ಎಸ್‌ಆರ್ ವೃತ್ತದಲ್ಲಿ ತಾಲೂಕು ಕಚೇರಿಯವರಿಗೆ ಬಿಜೆಪಿ ಪಕ್ಷದಿಂದ ಕಾರ್ಯಕರ್ತರು ರಾಜ್ಯ ಸರ್ಕಾರದಿಂದಾಗುತ್ತಿರುವ ಅನ್ಯಾಯ ಹಾಗೂ ಸಂವಿಧಾನ ವಿರೋಧಿ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದರು. ಈ ವರ್ಷದ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ದೇವರಾಜ್ ಅರಸು ನಿಗಮ, ಅಂಬೇಡ್ಕರ್ ನಿಗಮ, ಬಾಬು ಜಗಜೀವನ್‌ರಾಮ್ ನಿಗಮ, ಮಾದರ ಚೆನ್ನಯ್ಯ ನಿಗಮಕ್ಕೆ, ಸವಿತಾ ಸಮಾಜ ಹೀಗೆ ಅನೇಕ ನಿಗಮ ಮಂಡಳಿ ಕಲ್ಯಾಣದ ಅಭಿವೃದ್ಧಿಗೆ ನಯಾಪೈಸೆ ನೀಡದೆ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ರಾಜ್ಯದ ತೆರಿಗೆ ಹಣವನ್ನು ಮೀಸಲಿರಿಸಿದೆ ಎಂದು ಕಿಡಿಕಾರಿದರು. ನೆಹರೂ, ರಾಹುಲ್, ಮಲ್ಲಿಕಾರ್ಜುನ್‌ಖರ್ಗೆ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿದ ದಿನಗಳಿಂದಲೂ ಮುಸ್ಲಿಂ ಸಮುದಾಯಕ್ಕೆ ಮಾತ್ರ ಸೀಮಿತಗೊಂಡಿದೆ. ಸರ್ಕಾರ ಓಲೈಕೆ ರಾಜಕಾರಣದಲ್ಲಿ ತಲ್ಲಿನವಾಗಿದೆ. ಸಂವಿಧಾನ ವಿರೋಧಿ ಡಿ.ಕೆ ಶಿವಕುಮಾರ್ ನಿಲುವನ್ನು ಬಿಜೆಪಿ ಪಕ್ಷ ಖಂಡಿಸಿದ್ದು, ರಾಜ್ಯಪಾಲರು ಸರ್ಕಾರದ ದುರಾಡಳಿತಕ್ಕೆ ಕಡಿವಾಣಹಾಕಬೇಕು ಎಂದು ಆಗ್ರಹ ಮಾಡಿದರು.ಜಿಲ್ಲಾ ಉಪಾಧ್ಯಕ್ಷ ಪವನ್‌ಕುಮಾರ್ ಮಾತನಾಡಿ, ಈ ವರ್ಷದ ಬಜೆಟ್‌ನಲ್ಲಿ ಮುಸ್ಲಿಂ ಸಮುದಾಯಕ್ಕೆ ಅತಿಹೆಚ್ಚು ಅನುದಾನ ನೀಡುವುದಲ್ಲದೆ, ಅವರನ್ನು ಓಲೈಸುವ ಮತ ಬ್ಯಾಂಕ್ ರಾಜಕಾರಣವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಮುಸ್ಲಿಂ ಸಮುದಾಯಕ್ಕೆ ಗುತ್ತಿಗೆಯಲ್ಲಿ ೪% ಮೀಸಲಾತಿಯನ್ನು ಜಾರಿ ಮಾಡಿರುವುದನ್ನು ಸಮರ್ಥಿಸಿಕೊಳ್ಳಲು ಸಂವಿಧಾನ ಬದಲಿಸಲು ರಾಜ್ಯ ಸರ್ಕಾರ ತಯಾರಿ ಮಾಡಿಕೊಂಡಿದ್ದು, ಡಿ.ಕೆ ಶಿವಕುಮಾರ್‌ರವರ ಸಂವಿಧಾನ ವಿರೋಧಿ ಹೇಳಿಕೆಗೆ ಘನತೆವೆತ್ತ ರಾಜ್ಯಪಾಲರು ಕಡಿವಾಣ ಹಾಕಬೇಕು ಎಂದು ಹೇಳಿದರು.ಜಿಲ್ಲಾ ಕಾರ್ಯದರ್ಶಿ ಅರುಣ್ ಮಾತನಾಡಿ ರಾಜ್ಯದಲ್ಲಿ ಇರುವ ಕಾಂಗ್ರೆಸ್ ಪಕ್ಷ ದಲಿತರು ಮತ್ತು ಹಿಂದುಳಿದ ವರ್ಗದ ಕಲ್ಯಾಣಕ್ಕೆ ಯಾವುದೇ ಅನುದಾನ ನೀಡದೆ ದಲಿತ ವಿರೋಧಿ ಆಡಳಿತ ಮಾಡುತ್ತಿದ್ದು, ಬಡವರ ಟಿಎಸ್‌ಪಿ ಎಸ್‌ಪಿಪಿ, ಇತರೆ ಎಲ್ಲಾ ಅನುದಾನವನ್ನು ಬಿಟ್ಟಿ ಭಾಗ್ಯಗಳಿಗೆ ಬಳಸಿಕೊಂಡು ಸಮುದಾಯಗಳಿಗೆ ಸರ್ಕಾರ ದೋರಣೆ ಮಾಡುತ್ತಿದೆ ಎಂದು ಹೇಳಿದರು.ಈ ವೇಳೆ ಕೆ.ಎಸ್, ಯುವ ಮೋರ್ಚಾ ಅಧ್ಯಕ್ಷ ಶಿವಕುಮಾರ್ ಸ್ವಾಮಿ, ಮಂಡಲ ಪ್ರಧಾನ ಕಾರ್ಯದರ್ಶಿ ಗುರುದತ್ತ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ರಾಜೇಂದ್ರ, ದಯಾನಂದ್, ಸಿದ್ದನಂಜಪ್ಪ, ಮುಖಂಡರಾದ ವೀರಭದ್ರಯ್ಯ, ನಟರಾಜ್, ಮೂರ್ತಿ, ಯತೀಶ್, ಮೋಹನ್, ಮಹೇಶ್ ಸೇರಿದಂತೆ ಇತರರು ಇದ್ದರು.