ಜಮ್ಮಾ ಬಾಣೆಯ ಸಮಸ್ಯೆ ಬಗೆಹರಿಸಲು ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಶೀಘ್ರವೇ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿಗೆ ಶನಿವಾರ ಮನವಿ ಪತ್ರ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಮ್ಮಾ ಬಾಣೆಯ ಸಮಸ್ಯೆ ಬಗೆಹರಿಸಲು ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಶೀಘ್ರವೇ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿಗೆ ಶನಿವಾರ ಮನವಿ ಪತ್ರ ಸಲ್ಲಿಸಲಾಯಿತು.

ಮಾಜಿ ಸ್ಪೀಕರ್ ಮತ್ತು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ, ೨೦೧೧ರಲ್ಲಿ ಅಂದಿನ ಬಿಜೆಪಿ ಸರ್ಕಾರವು ಕೊಡಗಿನ ಜ್ವಲಂತ ಸಮಸ್ಯೆಯಾದ ಜಮ್ಮಾ ಬಾಣೆಯ ಸಮಸ್ಯೆಯನ್ನು ಬಗೆಹರಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ರ ನಿಯಮ ೨(೨೦) ಮತ್ತು ನಿಯಮ ೮೦ಕ್ಕೆ ತಿದ್ದುಪಡಿ ತಂದಿರುತ್ತದೆ. ಈ ತಿದ್ದುಪಡಿಯು ೧೬/೧೨/೨೦೧೧ರಂದು ವಿಧಾನಸಭೆ ವಿಧಾನ ಪರಿಷತ್‌ನಲ್ಲಿ ಅಂಗೀಕಾರಗೊಂಡು ಅಂತಿಮವಾಗಿ ಗೌರವಾನ್ವಿತ ರಾಷ್ಟ್ರಪತಿಗಳು ಈ ತಿದ್ದುಪಡಿ ಕಾಯ್ದೆಗೆ ಒಪ್ಪಿಗೆಯನ್ನು ನೀಡಿ ೦೧/೦೨/೨೦೧೧ರಂದು ರಾಜ್ಯ ಸರ್ಕಾರದ ಪತ್ರದಲ್ಲಿ ಪ್ರಕಟಣೆಗೊಂಡಿರುತ್ತದೆ. ಇದನ್ನು ಪ್ರಶ್ನಿಸಿ ೩೬ ಜನರು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಈ ರಿಟ್ ಅರ್ಜಿಗಳ ಬಗ್ಗೆ ಸುದೀರ್ಘವಾದ ವಾದ ವಿವಾದಗಳು ನಡೆದು ಉಚ್ಚ ನ್ಯಾಯಾಲಯವು ೨೫/೦೭/೨೦೨೪ರಂದು ಸುದೀರ್ಘ ತೀರ್ಪು ನೀಡಿ, ರಿಟ್ ಪಿಟಿಷನ್ ಅನ್ನು ವಜಾ ಮಾಡಿದೆ ಎಂದು ತಿಳಿಸಿದರು.

ಕರ್ನಾಟಕ ಭೂ ಕಂದಾಯ ಕಾಯ್ದೆಗೆ ೨೦೧೧ರಲ್ಲಿ ತಂದ ತಿದ್ದುಪಡಿಯು ಸಂವಿಧಾನಾತ್ಮಕವಾಗಿಯೇ ಇದೆ. ಈ ಒಂದು ತಿದ್ದುಪಡಿಯನ್ನು ಜಿಲ್ಲಾಡಳಿತ / ಕಂದಾಯ ಇಲಾಖೆಯವರು ಈ ತೀರ್ಪಿನ ಪ್ರತಿ ಸಿಕ್ಕಿದ ೩೦ ದಿನಗೊಳಗಾಗಿ ಜಾರಿಗೊಳಿಸಲು ಆದೇಶಿಸಿದೆ. ಆದರೆ, ತೀರ್ಪು ಪ್ರಕಟವಾಗಿ ಒಂದೂವರೆ ವರ್ಷ ಕಳೆದರೂ ಜಿಲ್ಲಾಡಳಿತ, ಕಂದಾಯ ಇಲಾಖೆ ಈ ತಿದ್ದುಪಡಿಯನ್ನು ಜಾರಿಗೆ ತರಲು ಕ್ರಮ ಕೈಗೊಂಡಿರುವುದಿಲ್ಲ. ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆ ಮತ್ತು ನ್ಯಾಯಾಂಗ ನಿಂದನೆಯಾಗಿದೆ. ಆದ್ದರಿಂದ ರಿಟ್ ಪಿಟಿಷನ್‌ಗಳ ತೀರ್ಪಿನಲ್ಲಿ ಆದೇಶಿಸಿರುವಂತೆ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಮನವಿ ಸಲ್ಲಿಸುವ ಸಂದರ್ಭ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿಗಳಾದ ವಿ.ಕೆ. ಲೋಕೇಶ್, ಮಹೇಶ್ ಜೈನಿ, ಉಪಾಧ್ಯಕ್ಷ ಮನು ಮಂಜುನಾಥ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ ಮತ್ತಿತರರು ಹಾಜರಿದ್ದರು.ಸಾರ್ವಜನಿಕ ಚರ್ಚೆಗೆ ಸದಾ ಸಿದ್ಧ

ಜಮ್ಮಾಬಾಣೆ ಸಮಸ್ಯೆ ಕುರಿತು ಚರ್ಚೆಗೆ ಬನ್ನಿ ಎಂದು ಶಾಸಕರು ಸವಾಲು ಹಾಕಿರುವುದನ್ನು ಅತ್ಯಂತ ವಿನಯದಿಂದ ಸ್ವೀಕರಿಸುತ್ತೇವೆ ಎಂದು ಹೇಳಿದ ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಆಡಳಿತ ಪಕ್ಷದಲ್ಲಿರುವ ಅವರೇ ಚರ್ಚೆಗೆ ವೇದಿಕೆ ಸಿದ್ದಪಡಿಸಲಿ. ಸಾರ್ವಜನಿಕ ಚರ್ಚೆಗೆ ಸದಾ ಸಿದ್ದ ಎಂದು ಹೇಳಿದರು. ಅವರ ಅಹವಾಲು ಅವರು ಹೇಳಲಿ. ನಮ್ಮ ಕೆಲಸ ನಾವು ಹೇಳುತ್ತೇವೆ ಎಂದು ಹೇಳಿದರು.