ಕನ್ನಡಪ್ರಭ ವಾರ್ತೆ ಬಾಗಲಕೋಟೆ ವಾಲ್ಮೀಕಿ ಹಗರಣದ ಆರೋಪಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಾಗಲಕೋಟೆ ಬಿಜೆಪಿ ಜಿಲ್ಲಾ ಘಟಕದಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ನವನಗರದ ಬಿಜೆಪಿ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಡಳಿತ ಭವನದ ಮುಂದೆ ಧರಣಿ ಸ್ಥಳಕ್ಕೆ ಆಗಮಿಸಿದರು
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಾಲ್ಮೀಕಿ ಹಗರಣದ ಆರೋಪಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಾಗಲಕೋಟೆ ಬಿಜೆಪಿ ಜಿಲ್ಲಾ ಘಟಕದಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.ನವನಗರದ ಬಿಜೆಪಿ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಡಳಿತ ಭವನದ ಮುಂದೆ ಧರಣಿ ಸ್ಥಳಕ್ಕೆ ಆಗಮಿಸಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪುಟದಲ್ಲಿ ಸಚಿವನಾಗಿರುವ ಬಿ.ನಾಗೇಂದ್ರ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿದರು. ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಒಳ ನುಗ್ಗಲು ಪ್ರತಿಭಟನಾಕಾರರು ಮುಂದಾದಾಗ ಗದ್ದಲ ಉಂಟಾಯಿತು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರು ಮಧ್ಯೆ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು. ಈ ವೇಳೆ ಕೆಲವು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆ ಮಾಡಿದರು.ಧರಣಿ ನಿರತ ಪ್ರತಿಭಟನಾಕಾರರು ಜಿಲ್ಲಾಡಳಿತ ಭವನದ ಮುಂದೆ ಹಾಕಿಲಾಗಿದ್ದ ಬ್ಯಾರಿಕೇಡ್‌ಗಳನ್ನು ತಳ್ಳಿ ಒಳ ನುಗ್ಗಿದರು. ಈ ವೇಳೆ ಪೊಲೀಸರು ಮತ್ತೆ ಗೇಟ್ ಬಂದ್ ಮಾಡಿ ಬ್ಯಾರಿಕೇಡ್‌ಗಳನ್ನು ಹಾಕಿದರು. ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಹಾಗೂ ಪ್ರತಿಭಟನಾಕಾರರನ್ನು ಒಳಗಡೆ ಬಿಡಬೇಕು ಎಂದು ಪ್ರತಿಭಟನಾಕಾರರು ಪೊಲೀಸರನ್ನು ಒತ್ತಾಯಿಸಿದ್ದು, ಈ ವೇಳೆ ವಾಗ್ವಾದ ಕೂಡ ನಡೆಯಿತು. ಆಗ ಸ್ಥಳಕ್ಕೆ ಆಗಮಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಅವರೊಂದಿಗೆ ಭಾಂಡಗೆ ಮಾತನಾಡಿ, ಎಲ್ಲರನ್ನು ಒಳಗಡೆ ಬಿಡಬೇಕು. ನಾವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದ ನಾರಾಯಣಸಾ ಭಾಂಡಗೆ ಪೊಲೀಸರ ವಿರುದ್ದ ಗರಂ ಆದರು. ಆಗ ಪೊಲೀಸರು ಬ್ಯಾರಿಕೇಡ್ ತೆಗೆದು ಪ್ರತಿಭಟನಾಕಾರನ್ನು ಒಳಗಡೆ ಬಿಟ್ಟರು.
ನಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ, ವೀರಣ್ಣ ಚರಂತಿಮಠ, ರಾಜಶೇಖರ ಶೀಲವಂತ, ಶ್ರೀಕಾಂತ ಕುಲಕರ್ಣಿ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಎಸ್ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಯಲ್ಲಪ್ಪ ಬೆಂಡಿಗೇರಿ, ಶ್ರೀನಾಥ ಸಜ್ಜನ, ಮಲ್ಲಯ್ಯ ಮೂಗನೂರಮಠ, ಸುರೇಶ ಮಜ್ಜಗಿ, ಸುರೇಶ ಕೊಣ್ಣೂರ, ವೀರಣ್ಣ ಹಳೇಗೌಡರ, ರವಿ ದಾಮಜಿ, ಚಂದ್ರ ಸರೂರ, ನಬಿ ಅನಗವಾಡಿ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.