ಬಾನು ಮುಷ್ತಾಕ್ ಆಯ್ಕೆ ಮರುಪರಿಶೀಲನೆಗೆ ಬಿಜೆಪಿ ಒತ್ತಾಯ

| Published : Aug 26 2025, 01:02 AM IST

ಬಾನು ಮುಷ್ತಾಕ್ ಆಯ್ಕೆ ಮರುಪರಿಶೀಲನೆಗೆ ಬಿಜೆಪಿ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ದಸರಾ ಉದ್ಘಾಟನೆ ನೆರವೇರಿಸುವವರು ನಾಡದೇವತೆ ಶ್ರೀಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವುದು ಸಂಪ್ರದಾಯ. ಆದರೆ, ಬಾನುಮುಷ್ತಾಕ್‌ ಅವರಿಗೆ ಹಿಂದೂ ಧಾರ್ಮಿಕ ವಿಧಿ-ವಿಧಾನಗಳ ಅರಿವಿಲ್ಲ, ಶ್ರೀಚಾಮುಂಡೇಶ್ವರಿ ತಾಯಿ ಪೂಜಾ ಪದ್ಧತಿಯ ಅರಿವಿಲ್ಲದಿರುವುದರಿಂದ ಮರುಪರಿಶೀಲನೆ ನಡೆಸಿ.

ಕನ್ನಡಪ್ರಭ ವಾರ್ತೆ ಮಂಡ್ಯ

ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರ ಅದನ್ನು ಮರುಪರಿಶೀಲನೆ ನಡೆಸುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ದಸರಾ ಉದ್ಘಾಟನೆ ನೆರವೇರಿಸುವವರು ನಾಡದೇವತೆ ಶ್ರೀಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವುದು ಸಂಪ್ರದಾಯ. ಆದರೆ, ಬಾನುಮುಷ್ತಾಕ್‌ ಅವರಿಗೆ ಹಿಂದೂ ಧಾರ್ಮಿಕ ವಿಧಿ-ವಿಧಾನಗಳ ಅರಿವಿಲ್ಲ, ಶ್ರೀಚಾಮುಂಡೇಶ್ವರಿ ತಾಯಿ ಪೂಜಾ ಪದ್ಧತಿಯ ಅರಿವಿಲ್ಲದಿರುವುದರಿಂದ ಮರುಪರಿಶೀಲನೆ ನಡೆಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಸಹಾಯಕಿ ಡಾ. ರೋಹಿಣಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮ್ಯಯ್ಯ ಅವರಿಗೆ ಮನವಿ ಸಲ್ಲಿಸಿದರು.

ನಾಡಹಬ್ಬ ದಸರಾ ಆಚರಣೆ ಯಾವುದೇ ಜಾತಿ, ಮತ, ಪಂಥಗಳ ವಿರೋಧವಿಲ್ಲ. ನಾವೆಲ್ಲರೂ ಭಾರತೀಯರು, ಹಿಂದೂ, ಕ್ರೈಸ್ತ, ಮುಸಲ್ಮಾನ ಎಲ್ಲರನ್ನೂ ಪ್ರೀತಿಸುವವರು. ಆದರೆ, ದಸರಾ ಹಬ್ಬದ ಉದ್ಘಾಟನೆಗೆ ಆಹ್ವಾನಿಸಿರುವ ಬಾನುಮುಷ್ತಾಕ್ ಅವರು ನಮ್ಮ ನಾಡದೇವತೆ ಶ್ರೀಚಾಮುಂಡೇಶ್ವರಿ ತಾಯಿ ಹಣೆಗೆ ಸಿಂಧೂರವನ್ನು ಇಟ್ಟು ಹರಿಶಿಣ, ಕುಂಕುಮ ಹಚ್ಚಿ, ಗಂಧದ ಕಡ್ಡಿ, ಕರ್ಪೂರ ಇಟ್ಟು ಆರತಿ ಬೆಳಗುವರೇ. ಒಂದು ವೇಳೆ ಬೆಳಗಿದಲ್ಲಿ ನಾವು ಅದನ್ನು ಸ್ವಾಗತಿಸುತ್ತೇವೆ. ಅವರ ಧರ್ಮದಲ್ಲಿ ಮೂರ್ತಿಪೂಜೆ ಮಾಡುವುದಿಲ್ಲವೆಂದು ಹೇಳಲಾಗುತ್ತದೆ. ಆದರೆ ನಮ್ಮ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರೆ ಸ್ವಾಗತ ಎಂದು ತಿಳಿಸಿದ್ದಾರೆ.

ಬಾನುಮುಷ್ತಾಕ್ ಅವರೊಂದಿಗೆ ಮುಖ್ಯಮಂತ್ರಿಗಳು ಮಾತನಾಡಿ, ಕರ್ನಾಟಕದ ಜನತೆಗೆ ಸ್ಪಷ್ಟ ಸಂದೇಶ ನೀಡಬೇಕು. ಸತ್ಯದ ವಿಚಾರವನ್ನು ಕೊಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಎಸ್. ಶಿವಕುಮಾರ್ ಆರಾಧ್ಯ, ಪೂರ್ಣಾರಾಧ್ಯ, ಶಿವಲಿಂಗಪ್ಪ, ಆನಂದ, ಚಂದ್ರು ಜಿ.ವೈ., ಪ್ರಸನ್ನಕುಮಾರ್, ಎಸ್.ಸಿ.ಯೋಗೇಶ್ ಸೇರಿದಂತೆ ಹಲವರು ಹಾಜರಿದ್ದರು.