ಭಟ್ಕಳದ ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಹಾಕುವಂತೆ ಬಿಜೆಪಿ ಆಗ್ರಹ

| Published : Mar 16 2025, 01:46 AM IST

ಸಾರಾಂಶ

ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಹಾಕಬೇಕು

ಭಟ್ಕಳ: ತಾಲೂಕಿನಲ್ಲಿ ಅಕ್ರಮ ಗೋಸಾಗಾಟ ಹೆಚ್ಚುತ್ತಿರುವುದು ಆತಂಕಕಾರಿ ವಿಚಾರವಾಗಿದ್ದು, ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಹಾಕಬೇಕು ಎಂದು ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಒತ್ತಾಯಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು ತಾಲೂಕಿನಲ್ಲಿ ಗೋಸಾಗಾಟ ಹೆಚ್ಚುತ್ತಿರುವುದರಿಂದ ಶಿರಾಲಿ ಸೇರಿದಂತೆ ತಾಲ್ಲೂಕಿನ ಚೆಕ್ ಪೋಸ್ಟ್‌ಗಳನ್ನು ಮತ್ತಷ್ಟು ಬಿಗುಗೊಳಿಸಬೇಕು. ರಾತ್ರಿ ವೇಳೆ ಇಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಜಾನುವಾರುಗಳನ್ನು ಅಕ್ರಮವಾಗಿ ಮತ್ತು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದು, ಇದು ತೀರಾ ಖಂಡನೀಯ. ಅಕ್ರಮವಾಗಿ ಯಾವುದೇ ವ್ಯಕ್ತಿಗಳು ಜಾನುವಾರು ಸಾಗಾಟ ಮಾಡಿದರೂ ಅಂಥವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಬೇಕು. ಗೋವುಗಳನ್ನು ಹಿಂದೂಗಳು ಭಕ್ತಿಭಾವದಿಂದ ಪೂಜಿಸುತ್ತಿದ್ದು, ಗೋವುಗಳ ಹತ್ಯೆ ಮಾಡಿ ಧಾರ್ಮಿಕ ಭಾವನೆಗೆ ಧಕ್ಕೆ ತರುವುದು ಸರಿಯಲ್ಲ. ಭಟ್ಕಳದಲ್ಲಿ ಪದೇ ಪದೇ ಅಕ್ರಮ ಜಾನುವಾರು ಸಾಗಾಟ ನಡೆಯುತ್ತಿದ್ದು ಇದನ್ನು ತಡೆಯುವ ಕೆಲಸ ಆಗಬೇಕು. ಅಕ್ರಮ ಜಾನುವಾರು ಸಾಗಾಟದ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಜಾನುವಾರುಗಳನ್ನು ತುಂಬಿಕೊಂಡು ಹೊರಗಿನಿಂದ ಬರುವ ವಾಹನಗಳು ಮತ್ತು ಅದನ್ನು ತರುವ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಮಾ.17ರಂದು ಗೋ ಹತ್ಯ ಮತ್ತು ಗೋಸಾಗಾಟ ಖಂಡಿಸಿ ಹಿಂದೂ ಜಾಗರಣ ವೇದಿಕೆಯಿಂದ ನಡೆಸುವ ಪ್ರತಿಭಟನೆಗೆ ಬಿಜೆಪಿಯಿಂದ ಸಂಪೂರ್ಣ ಬೆಂಬಲವಿದ್ದು, ಅಂದಿನ ಹೋರಾಟದಲ್ಲಿ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಕ್ರಮ ಗೋವು ಸಾಗಾಟವನ್ನು ಬಲವಾಗಿ ಖಂಡಿಸಬೇಕು ಎಂದು ಅವರು ಹೇಳಿದ್ದಾರೆ.

ಲಕ್ಷ್ಮೀನಾರಾಯಣ ನಾಯ್ಕ , ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷರು