ಸಾರಾಂಶ
ಶಿರಸಿ: ರಾಜ್ಯ ಸರ್ಕಾರ ಕೂಡಲೇ ಬಿತ್ತನೆ ಬೀಜದ ದರ ಇಳಿಕೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿ, ಬಿಜೆಪಿ ರೈತ ಮೋರ್ಚಾ ವತಿಯಿಂದ ನಗರದ ಎಪಿಎಂಸಿ ಆವಾರದ ಕೃಷಿ ಇಲಾಖೆಯ ಉಪನಿರ್ದೇಶಕರ ಕಚೇರಿ ಎದುರು ಧರಣಿ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ ಮಾತನಾಡಿ, ರಾಜ್ಯ ಸರ್ಕಾರ ಬಿತ್ತನೆ ಬೀಜದ ದರ ಹೆಚ್ಚಳ ಮಾಡಿರುವುದರಿಂದ ರೈತರು ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ. ರೈತಾಪಿ ವರ್ಗ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆಯಂತಹ ಯೋಚನೆಗೆ ಒಳಗಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹಾಲು ಉತ್ಪಾದಕ ರೈತರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ತಕ್ಷಣ ಬಿತ್ತನೆ ಬೀಜದ ದರ ಇಳಕೆ ಮಾಡಿ, ಹಾಲಿನ ಪ್ರೋತ್ಸಾಹಧನ ತಕ್ಷಣ ಬಿಡುಗಡೆ ಮಾಡಬೇಕು. ಅರ್ಹತೆ ಇದ್ದ ರೈತರಿಗೆ ಬೆಳೆ ಸಾಲ ₹೫ ಲಕ್ಷದ ವರೆಗೆ ಹಾಗೂ ಮಾಧ್ಯಮಿಕ ಸಾಲ ₹೧೫ ಲಕ್ಷದ ವರೆಗೆ ನೀಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಆದರೆ ಇದುವರೆಗೂ ಜಾರಿಗೊಂಡಿಲ್ಲ. ಅಡಿಕೆಗೆ ಸಿಂಪಡಿಸುವ ಬೋರ್ಡೋ ದ್ರಾವಣದ ಸಬ್ಸಿಡಿ ಬಂದಿಲ್ಲ. ರೈತರ ಕಷ್ಟವನ್ನು ಆಲಿಸಿ, ತಕ್ಷಣ ಎಲ್ಲ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ರೈತರು ಬದುಕುವುದು ಇಷ್ಟವಿಲ್ಲ. ೫ ಭಾಗ್ಯದ ಜತೆ ೬ ಭಾಗ್ಯವಾಗಿ ರೈತರಿಗೆ ವಿಷ ಭಾಗ್ಯ ನೀಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ ಮೂಲಕ ಪ್ರತಿ ರೈತರಿಗೆ ₹೬ ಸಾವಿರ ನೀಡಿದಂತೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ₹೪ ಸಾವಿರ ನೀಡುತ್ತಿದ್ದರು. ರೈತ ನಾಯಕ ಯಡಿಯೂರಪ್ಪ ಕಟ್ಟಿ ಬೆಳೆಸಿದ ಬಿಜೆಪಿಯು ರೈತರ ಕಷ್ಟಗಳಿಗೆ ಸದಾ ಸ್ಪಂದಿಸುತ್ತದೆ. ಕೂಡಲೇ ರೈತರ ಬೇಡಿಕೆ ಈಡೇರಿಸದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ಕೃಷಿಕ ಸಮಾಜದ ಅಧ್ಯಕ್ಷ ಎಸ್.ಜಿ. ಹೆಗಡೆ, ನಗರ ಮಂಡಲಾಧ್ಯಕ್ಷ ಆನಂದ ಸಾಲೇರ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನಮಠ, ಗ್ರಾಮೀಣ ಮಂಡಳಾಧ್ಯಕ್ಷೆ ಉಷಾ ಹೆಗಡೆ, ಪ್ರಮುಖರಾದ ರಮಾಕಾಂತ ಭಟ್ಟ ಮತ್ತಿತರರು ಇದ್ದರು.