ಅನಧಿಕೃತ ಕಾಮಗಾರಿ ತಡೆಗೆ ಬಿಜೆಪಿ ಒತ್ತಾಯ

| Published : Apr 12 2025, 12:49 AM IST

ಸಾರಾಂಶ

ಬಿಎಲ್‌ಡಿಇ ಸಂಸ್ಥೆಯ ಆಯುರ್ವೇದಿಕ ಮಹಾವಿದ್ಯಾಲಯದವರು ಕಟ್ಟುತ್ತಿರುವ ಅನಧಿಕೃತ ಕಾಮಗಾರಿ ತಡೆಹಿಡಿಯಬೇಕೆಂದು ಆಗ್ರಹಿಸಿ ಡಿಸಿ ಮೂಲಕ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಂರಕ್ಷಿತ ಪ್ರದೇಶದಲ್ಲಿ ಅನಧಿಕೃತ ಕಾಮಗಾರಿಯಿಂದ ರಾಷ್ಟ್ರೀಯ ಪರಂಪರೆಗೆ ಧಕ್ಕೆ ಉಂಟಾಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.

ನಗರದ ಕೀರ್ತಿನಗರ ಹಾಗೂ ಮೂಡಣಕೇರಿ ಮಧ್ಯದಲ್ಲಿರುವ ಐತಿಹಾಸಿಕ ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆಗೆ ಸೇರಿದ ಸಂರಕ್ಷಿತ ಕೋಟೆ ಗೋಡೆ ಹಾಗೂ ಕಲ್ಯಾಣ ಚಾಲುಕ್ಯರ ಕಾಲದ ಶ್ರೀ ಸ್ವಯಂಭು ವಿನಾಯಕ ದೇವಸ್ಥಾನದ ನಿಷೇಧಿತ ಪ್ರದೇಶದಲ್ಲಿ ಬಿಎಲ್‌ಡಿಇ ಸಂಸ್ಥೆಯ ಆಯುರ್ವೇದಿಕ ಮಹಾವಿದ್ಯಾಲಯದವರು ಕಟ್ಟುತ್ತಿರುವ ಅನಧಿಕೃತ ಕಾಮಗಾರಿ ತಡೆಹಿಡಿಯಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಅವರು, ವಿಜಯಪುರ ಮ್ಯೂಸಿಯಂ ಅಲ್ಲಿರುವ ಕಲ್ಯಾಣ ಚಾಲುಕ್ಯರ ಕ್ರಿ.ಶ 1184ರ ವಿಜಯಪುರದ ಶಾಸನ ಮೂಡಣಕೇರಿ ಜಮೀನು ದಾನ -ದತ್ತಿ ಬಿಟ್ಟಿರುವ ಅಧಿಕೃತ ದಾಖಲೆಯಾಗಿದೆ. ಸಂರಕ್ಷಿತ ಪ್ರದೇಶವು ದೇವಸ್ಥಾನದ ಆಸ್ತಿಯಾಗಿದೆ. ಕೂಡಲೇ ಜಿಲ್ಲಾಡಳಿತ ದೇವಸ್ಥಾನದ ಆಸ್ತಿ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಜಿ.ಬಿರಾದಾರ ಮಾತನಾಡಿ, ನಗರದ ಜನ ಪಾರಂಪರಿಕವಾಗಿ ಪೂಜೆ ಪುನಸ್ಕಾರ ನಡೆಸಿಕೊಂಡು ಬಂದಿರುವ ಪುರಾತನ ಸ್ವಯಂಭು ಶ್ರೀ ವಿನಾಯಕ ದೇವಸ್ಥಾನ ನಮ್ಮ ಗತಕಾಲದ ಧಾರ್ಮಿಕ ಪರಂಪರೆಯಾಗಿದೆ. ಸಂರಕ್ಷಿತ ಕೋಟೆ ಹಾಗೂ ದೇವಸ್ಥಾನಕ್ಕೆ ಸೇರಿದ ನಿಷೇಧಿತ ಪ್ರದೇಶದಲ್ಲಿ ಬಿಎಲ್‌ಡಿಇ ಆಯುರ್ವೇದಿಕ ಸಂಸ್ಥೆಯವರು 1958ರ ಭಾರತೀಯ ಪುರಾತತ್ವ ಕಾಯ್ದೆ ಉಲ್ಲಂಘನೆ ಮಾಡಿ ನಿರ್ಮಿಸುತ್ತಿರುವ ಅನಧಿಕೃತ ಕಟ್ಟಡದ ಬಗ್ಗೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾಡಳಿತ ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ ಅನಧಿಕೃತ ಕಾಮಗಾರಿ ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿದರು.

ನ್ಯಾಯವಾದಿ ಸುಪ್ರೀತ ದೇಸಾಯಿ ಮಾತನಾಡಿ, ಐತಿಹಾಸಿಕ ಪರಂಪರೆ ನಾಶ ಮಾಡಲು ಮುಂದಾಗಿರುವ ಬಿಎಲ್‌ಡಿಇ ಸಂಸ್ಥೆಯವರ ನಡೆ ಖಂಡನೀಯ ಎಂದರು. 1958ರ ಭಾರತೀಯ ಪುರಾತತ್ವ ಕಾಯ್ದೆಯ ಪ್ರಕಾರ 100 ಮೀ. ವ್ಯಾಪ್ತಿ ಒಳಗಡೆ ಯಾವುದೇ ಕಟ್ಟಡ ಕಟ್ಟುವಂತಿಲ್ಲ ಎಂಬ ನಿಯಮವಿದ್ದರೂ ಕೂಡ ಪುರಾತತ್ವ ಇಲಾಖೆ ಹಾಗೂ ಮಹಾನಗರ ಪಾಲಿಕೆಯಿಂದ ಕಟ್ಟಡ ಪರವಾನಗಿ ಪಡೆಯದೇ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹಾಗೂ ವಿಪ ಸದಸ್ಯ ಸುನೀಲಗೌಡ ಪಾಟೀಲ ರಾಜಕೀಯ ಪ್ರಭಾವ ಬಳಸಿ ನಡೆಸುತ್ತಿರುವ ಅನಧಿಕೃತ ಕಟ್ಟಡ ಕಾಮಗಾರಿ ತಡೆಹಿಡಿಯಬೇಕು. ಪುರಾತತ್ವ ಸಂರಕ್ಷಣಾ ಕಾಯ್ದೆಯಡಿ ಸದರಿ ಸಂಸ್ಥೆಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಸಂರಕ್ಷಿತ ಕೋಟೆ ಹಾಗೂ ಚಾಲುಕ್ಯರ ಶ್ರೀ ಸ್ವಯಂಭು ವಿನಾಯಕ ದೇವಸ್ಥಾನ ರಕ್ಷಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗ ಬಿಜೆಪಿಯ ವೈದ್ಯಕೀಯ ಪ್ರಕೋಷ್ಟದ ಪ್ರಮುಖ ಮಲ್ಲಿಕಾರ್ಜುನ ಕಲಾದಗಿ, ಮುಖಂಡರಾದ ಮಲ್ಲಿಕಾರ್ಜುನ ಕನ್ನೂರ, ಬಸವಕುಮಾರ ಕಾಂಬಳೆ, ಬಸವರಾಜ ಕುಬಕಡ್ಡಿ, ಛಲವಾದಿ ಪ್ರದೀಪ, ವಿಜಯ ಹಿಟ್ನಳ್ಳಿ, ಮಂಜುನಾಥ ಶಿವಶರಣ, ಲಾಯಪ್ಪ ಇಂಗಳೆ, ಛಲವಾದಿ ಕೃಷ್ಣಾ ಸೇರಿದಂತೆ ಇತರರು ಉಪಸ್ಥಿತರಿದ್ದರು.