ತಂಗಡಗಿ ಹೇಳಿಕೆ ತಿರುಚಿದ ಬಿಜೆಪಿ: ಕೃಷ್ಣ ಇಟ್ಟಂಗಿ

| Published : Mar 28 2024, 12:50 AM IST

ಸಾರಾಂಶ

ಆಡು ಭಾಷೆಯಲ್ಲಿ ಬುದ್ದಿ ಹೇಳುವ ಮಾತಿನಂತೆ ಯುವಕರಿಗೆ ಕಪಾಳಕ್ಕೆ ಹೊಡೆಯಬೇಕು ಎಂದಿದ್ದ ಹೇಳಿಕೆಯನ್ನು ಬಿಜೆಪಿ ತಿರುಚಿ, ವಿವಾದ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಆಡು ಭಾಷೆಯಲ್ಲಿ ಬುದ್ದಿ ಹೇಳುವ ಮಾತಿನಂತೆ ಯುವಕರಿಗೆ ಕಪಾಳಕ್ಕೆ ಹೊಡೆಯಬೇಕು ಎಂದಿದ್ದ ಹೇಳಿಕೆಯನ್ನು ಬಿಜೆಪಿ ತಿರುಚಿ, ವಿವಾದ ಮಾಡುತ್ತಿದೆ. ಇದನ್ನು ಇಷ್ಟಕ್ಕೆ ಬಿಡದಿದ್ದರೇ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ ಹೇಳಿದರು.

ನಗರದ ಮೀಡಿಯಾ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಶಿವರಾಜ ತಂಗಡಗಿ ಮೋದಿ ಅವರು 2 ಕೋಟಿ ಉದ್ಯೋಗ ಕೊಡುವುದಾಗಿ ಹೇಳಿದ್ದರು. ಆದರೆ ಕೊಟ್ಟ ಭರವಸೆಯಂತೆ ಉದ್ಯೋಗ ಕೊಡಲಿಲ್ಲ. ಆದರೂ ಯುವಕರು ಮೋದಿ ಮೋದಿ ಎನ್ನುತ್ತಿದ್ದು ಅವರ ಕಪಾಳಕ್ಕೆ ಹೊಡೆಯಬೇಕೆಂದು ಸಹಜವಾಗಿ ಬುದ್ದಿ ಮಾತಿನಂತೆ ಹೇಳಿದ್ದಾರೆ.

ಆದರೆ, ಉದ್ಯೋಗ ಕೊಡದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಮಾತನಾಡುವುದನ್ನು ಬಿಟ್ಟು, ವಿಷಯಾಂತರ ಮಾಡಿ, ಕಪಾಳಕ್ಕೆ ಹೊಡೆಯಬೇಕು ಎಂದಿದ್ದನ್ನೇ ಬಿಜೆಪಿ ದೊಡ್ಡ ವಿಷಯ ಮಾಡುತ್ತಿದೆ.

ಉದ್ಯೋಗ ಕೇಳಿದರೆ ಪಕೋಡಾ ಮಾರಾಟ ಮಾಡಿ ಎಂದು ಬಿಜೆಪಿ ಹೇಳುತ್ತಿದೆ. ಮೋದಿ ಮೋದಿ ಎನ್ನುವ ಯುವಕರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದ್ದಾರೆ. ಆದರೆ ಬಿಜೆಪಿ ಸಚಿವರ ಹೇಳಿಕೆಯನ್ನೇ ತಿರುಚಿ ಮಾತನಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಕೃಷ್ಣಾರಡ್ಡಿ ಗಲಬಿ ಮಾತನಾಡಿ, ಬಿಜೆಪಿ ರೈತ ಪರ ಯೋಜನೆ ತಂದಿಲ್ಲ. ಅಭಿವೃದ್ಧಿ ಮಾಡಿಲ್ಲ. ಬರಿ ಇಂಥ ವಿವಾದಗಳನ್ನೇ ಮಾಡಿ, ನಿಜವಾಗಿ ಚರ್ಚೆಯಾಗುವ ವಿಷಯಗಳನ್ನು ತಪ್ಪಿಸುತ್ತಿದೆ ಎಂದರು.

ಅಷ್ಟಕ್ಕೂ ಸಚಿವ ಶಿವರಾಜ ತಂಗಡಗಿ ಅವರ ಭಾಷಣದಲ್ಲಿ ಅಶ್ಲೀಲ ಪದ ಬಳಕೆ ಮಾಡಿಲ್ಲ. ಉತ್ತರ ಕರ್ನಾಟಕದಲ್ಲಿ ನಾವು ಆಡು ಭಾಷೆಯಲ್ಲಿ ಈ ರೀತಿ ಮಾತನಾಡುತ್ತೇವೆ. ಆ ದಾಟಿಯಲ್ಲಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಅವರ ಹೇಳಿಕೆಯಲ್ಲಿ ದುರುದ್ದೇಶವಿಲ್ಲ. ಚುನಾವಣೆ ವೇಳೆ ಬಿಜೆಪಿಯವರು ಧರ್ಮ, ದೇವರ ಹೆಸರು ಮುನ್ನೆಲೆಗೆ ತರುತ್ತಾರೆ. ಇದೇ ರೀತಿ ಬಿಜೆಪಿ ನಡೆದುಕೊಂಡರೆ ಕಾಂಗ್ರೆಸ್ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.

ಕಾಂಗ್ರೆಸ್ ಮುಖಂಡರಾದ ಕಾಟನ್ ಪಾಷಾ, ಅಕ್ಬರ್ ಪಾಷಾ ಉಪಸ್ಥಿತಿ ಇದ್ದರು.