ಬಿಜೆಪಿಗೆ ಬಡವರ ಬಗ್ಗೆ ಕಾಳಜಿಯೇ ಇಲ್ಲ: ಸಚಿವ ಮಧು

| Published : Mar 25 2024, 12:56 AM IST

ಸಾರಾಂಶ

ಗದ್ದೆ ಹಸಿರಾಗಲು ಬಂಗಾರಪ್ಪನವರ ಉಚಿತ ವಿದ್ಯುತ್ ಯೋಜನೆ ಕಾರಣ, ಕಾಂಗ್ರೆಸ್‌ ಗ್ಯಾರೆಂಟಿ ಬಗ್ಗೆ ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ಅವರಿಗೆ ಬಡವರ ಹಸಿವಿನ ಬಗ್ಗೆ ಗೊತ್ತಿಲ್ಲ, ಅವರ ಬಗ್ಗೆ ಕಾಳಜಿಯೂ ಇಲ್ಲ. ರಾಮ, ಹನುಮ ಎಂದು ಅಧಿಕಾರಕ್ಕೆ ಬಂದವರು. ಅವರಿಂದ ಇನ್ನೇನೂ ಅಪೇಕ್ಷೆ ಮಾಡಲು ಸಾಧ್ಯ. ಅವರಿಗೆ ಬಡವರ ಹಸಿವಿನಿಂದ ಜಾತಿ, ಧರ್ಮವೇ ಮುಖ್ಯ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಮ, ಹನುಮ ಎಂದು ಬಿಜೆಪಿ ಬರುತ್ತದೆ. ಆದರೆ, ಹಸಿವಿನ ಹೋರಾಟದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ನಿಲ್ಲುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ತಾಲೂಕಿನ ಸಂತೆಕಡೂರಿನಲ್ಲಿ ಭಾನುವಾರ ಜಿಲ್ಲಾ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಸೇವೆಯ ಹೆಮ್ಮೆ ಇದೆ. ಒಂದು ವರ್ಷದ ಹಿಂದೆ ಗ್ಯಾರಂಟಿ ಕಾರ್ಡ್ ತಂದಿದ್ವಿ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದೇವೆ ಎಂದರು. ಗದ್ದೆ ಹಸಿರಾಗಲು ಬಂಗಾರಪ್ಪನವರ ಉಚಿತ ವಿದ್ಯುತ್ ಯೋಜನೆ ಕಾರಣ, ಕಾಂಗ್ರೆಸ್‌ ಗ್ಯಾರೆಂಟಿ ಬಗ್ಗೆ ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ಅವರಿಗೆ ಬಡವರ ಹಸಿವಿನ ಬಗ್ಗೆ ಗೊತ್ತಿಲ್ಲ, ಅವರ ಬಗ್ಗೆ ಕಾಳಜಿಯೂ ಇಲ್ಲ. ರಾಮ, ಹನುಮ ಎಂದು ಅಧಿಕಾರಕ್ಕೆ ಬಂದವರು. ಅವರಿಂದ ಇನ್ನೇನೂ ಅಪೇಕ್ಷೆ ಮಾಡಲು ಸಾಧ್ಯ. ಅವರಿಗೆ ಬಡವರ ಹಸಿವಿನಿಂದ ಜಾತಿ, ಧರ್ಮವೇ ಮುಖ್ಯ ಎಂದು ಹರಿಹಾಯ್ದರು.

ಶಿವಮೊಗ್ಗದ ಧ್ವನಿಯಾಗಿ ಗೀತಾ ಸಂಸತ್‌ನಲ್ಲಿ ಕೆಲಸ ಮಾಡುತ್ತಾರೆ. ಅವರ ವಿರುದ್ಧ ಟೀಕಾ ಟಿಪ್ಪಣಿ ಮಾಡಲಾಗುತ್ತಿದೆ. ಆದರೆ, ಇದಕ್ಕೆಲ್ಲ ಮೇ 7ರಂದು ಮತಗಳ ಮೂಲಕ ಉತ್ತರಿಸಬೇಕು ಎಂದು ಕರೆ ನೀಡಿದರು.

ಅಭ್ಯರ್ಥಿ ಗೀತಾ ಮಾತನಾಡಿ, ಈ ಬಾರಿ ನನಗೆ ಮತ ಹಾಕಲೇಬೇಕು. ನಾನು ಈ ಜಿಲ್ಲೆಯ ಮಗಳು. ಕಳೆದ ಬಾರಿ ಸೋತಿದ್ದೇವೆ. ಈ ಬಾರಿ ಖಾಲಿ ಕೈಯಲ್ಲಿ ಕಳುಹಿಸಲ್ಲ ಎಂದು ಭಾವಿಸಿದ್ದೇನೆ ಎಂದು ಮನವಿ ಮಾಡಿದರು. ಇಷ್ಟೊಂದು ಮಹಿಳೆಯರನ್ನ ನೋಡಿ ತುಂಬಾ ಸಂತೋಷ ಆಗಿದೆ. ಸಮಾಜ ಸೇವೆ ಮಾಡಬೇಕು ಅನ್ನೋದು ನನ್ನ ಬಯಕೆ. ನಮ್ಮ ಪಕ್ಷ ಬೇರೆ ಬೇರೆ ಯೋಜನೆ ತರ್ತಾ ಇದೆ. ನಾನು ಗೆದ್ದರೆ ನಿಮ್ಮ ಧ್ವನಿಯಾಗಿ ಇರುತ್ತೇನೆ ಎಂದರು.

ಸಮಾವೇಶದಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಎಸ್‌.ಸುಂದರೇಶ್‌, ಕೆಪಿಸಿಸಿ ವಕ್ತಾರ ಆಯೂನೂರು ಮಂಜುನಾಥ್‌, ಮುಖಂಡರಾದ ರವಿಕುಮಾರ್‌, ಶ್ರೀನಿವಾಸ್‌ ಕರಿಯಣ್ಣ, ಜಿ.ಪಲ್ಲವಿ, ವಿಜಯಕುಮಾರ್‌, ಎಸ್‌.ಕೆ.ಮರಿಯಪ್ಪ ಸೇರಿ ಹಲವರು ಉಪಸ್ಥಿತರಿದ್ದರು.

-----

ಜನರಿಂದ ಉತ್ತಮ ಸ್ಪಂದನೆ

ಚುನಾವಣಾ ಪ್ರಚಾರ ಆರಂಭ ಮಾಡಿದ್ದೇನೆ. ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಎರಡು ದಿನ ಪ್ರಚಾರ ಮಾಡಿದ ಬಳಿಕ ಇಂದು ಮತ್ತೆ ಪ್ರಚಾರ ಆರಂಭ ಮಾಡಿದ್ದೇನೆ. ಶಿವಮೊಗ್ಗ ಜಿಲ್ಲೆಯಲ್ಲಿ ಇದು ಐದನೇ ಚುನಾವಣಾ ‌ಪ್ರಚಾರ. ನಮ್ಮ ಸರ್ಕಾರ ಹೊಸ ಹೊಸ ಯೋಜನೆಗಳ ಜಾರಿಗೆ ತರುತ್ತಿದೆ. ಅದರ ಆಧಾರದ ಮೇಲೆ ಮತ ಕೇಳ್ತಿದ್ದೇನೆ

ಗೀತಾ, ಕಾಂಗ್ರೆಸ್‌ ಅಭ್ಯರ್ಥಿ