ಬಿಜೆಪಿಗೆ ಅಭಿವೃದ್ಧಿ ಬೇಕಿಲ್ಲ; ಅಧಿಕಾರ ಬೇಕು: ಸಚಿವ ಡಿ.ಸುಧಾಕರ್ ಕಿಡಿ

| Published : Sep 02 2025, 12:00 AM IST

ಸಾರಾಂಶ

ಎಸ್ಐಟಿ ರಚನೆಯನ್ನು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲ ಪಕ್ಷದವರೂ ಸ್ವಾಗತ ಮಾಡಿದ್ದಾರೆ

ಶಿರಸಿ: ಎಸ್ಐಟಿ ರಚನೆಯನ್ನು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲ ಪಕ್ಷದವರೂ ಸ್ವಾಗತ ಮಾಡಿದ್ದಾರೆ. ಸುಮಾರು 14 ವರ್ಷಗಳಿಂದ ಖಾವಂದರರ ಮೇಲೆ ನಿರಂತರವಾಗಿ ಷಡ್ಯಂತ್ರ ನಡೆದಿದೆ. ಇದಕ್ಕೆ ಇತಿಶ್ರೀ ಹಾಡಲು, ಸತ್ಯಾಂಶ ಹೊರತರಲು ಎಸ್ಐಟಿ ರಚಿಸಲಾಗಿದೆ. ಆದರೆ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಅಪಪ್ರಚಾರಕ್ಕೆ ಏನೂ ಕ್ರಮ ಆಗಿರಲಿಲ್ಲ ಎಂದು ಸಚಿವ ಡಿ.ಸುಧಾಕರ್ ಬಿಜೆಪಿಗೆ ತಿರುಗೇಟು ನೀಡಿದರು.

ತಾಲೂಕಿನ ಸೋದೆ ಜೈನ ಮಠಕ್ಕೆ ಸೋಮವಾರ ಭೇಟಿ ನೀಡಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿಗೆ ಅಭಿವೃದ್ಧಿ ಬೇಕಾಗಿಲ್ಲ. ಅವರಿಗೆ ಅಧಿಕಾರ ಬೇಕು. ಅವರು ಕೇವಲ ರಾಜಕಾರಣ ಮಾಡುತ್ತಾರೆ. ಯಾವುದೇ ಧರ್ಮವಾದರೂ ಅವರೆಲ್ಲರೂ ಮನುಷ್ಯರೇ. ಕನ್ನಡಕ್ಕೆ ಬಾನು ಮುಷ್ತಾಕ್ ಅವರ ಕೊಡುಗೆ ಸಾಕಷ್ಟಿದೆ. ದಸರಾ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿರುವುದು ಸರಿಯಿದೆ. ಈ ಕುರಿತು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಆದರೆ ಬಿಜೆಪಿ ಎಲ್ಲದರಲ್ಲೂ ರಾಜಕೀಯ ಮಾತ್ರ ನೋಡುತ್ತದೆ. ನಾನು ಐದು ವರ್ಷ ಬಿಜೆಪಿಯಲ್ಲಿ ಅಧಿಕಾರ ನೋಡಿದ್ದೇನೆ. ಧರ್ಮದ ಹೆಸರಿನಲ್ಲೂ ರಾಜಕೀಯ ಮಾಡುತ್ತಾರೆ. ಇದಕ್ಕೆ ಅಲ್ಲಿಯೇ ಇದ್ದ ಶಾಸಕ ಶಿವರಾಮ ಹೆಬ್ಬಾರ್ ಸಹ ಬಿಜೆಪಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತದೆ ಎಂದು ಧ್ವನಿಗೂಡಿಸಿದರು.

ಧರ್ಮಸ್ಥಳವು ಆಪಾದನೆಯಿಂದ ಮುಕ್ತವಾಗಿದೆ ಎಂದು ರಾಜ್ಯದ ಜನರು ಅಭಿಪ್ರಾಯ ಪಡುತ್ತಿದ್ದಾರೆ. ಇದರಿಂದ ನಮಗೂ ಸಂತೋಷವಾಗಿದೆ. ಧರ್ಮಸ್ಥಳ ವಿಷಯದಲ್ಲಿ ಬಿಜೆಪಿ, ಜೆಡಿಎಸ್ ಏನೇ ಹೇಳಿದರೂ ರಾಜ್ಯದ ಕೋಟ್ಯಂತರ ಜನಕ್ಕೆ ಸತ್ಯಾಂಶ ಗೊತ್ತಿದೆ. ಎಲ್ಲರಿಗೂ ತಿಳಿದಿದೆ. ಶಾಸಕ ಹೆಬ್ಬಾರ್ ನಮಗೆಲ್ಲರಿಗಿಂತ ಹಿರಿಯರು. ಅವರಿಗೆ ಸಾಕಷ್ಟು ತಿಳಿವಳಿಕೆ ಇದೆ. ಪಕ್ಷ ಸೇರ್ಪಡೆ ಅಥವಾ ಇತರೆ ಚುನಾವಣಾ ರಾಜಕೀಯದ ವಿಷಯದ ಕುರಿತು ಸೂಕ್ತ ಸಮಯದಲ್ಲಿ ಅವರು ತೀರ್ಮಾನ ಮಾಡುತ್ತಾರೆ. ಜತೆಗೆ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿದೆ ಎಂದು ಸ್ಪಷ್ಟಪಡಿಸಿದರು.

ಶಾಸಕರಾದ ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ, ಶಿರಸಿ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಪ್ರಮುಖರಾದ ದೀಪಕ ಹೆಗಡೆ ದೊಡ್ಡೂರು, ಜಾಫಿ ಪೀಠರ್‌, ಜಗದೀಶ ನಾಯ್ಕ, ಪ್ರವೀಣ ಗೌಡರ್ ತೆಪ್ಪಾರ ಇದ್ದರು.