ಜನರ ಭಾವನೆ ಕೆರಳಿಸುವ ಕೆಲಸ ಮಾಡುವ ಬಿಜೆಪಿ : ಡಾ.ಕೆ.ಪಿ.ಅಂಶುಮಂತ್ ಆರೋಪ

| Published : Jul 11 2025, 01:47 AM IST

ಜನರ ಭಾವನೆ ಕೆರಳಿಸುವ ಕೆಲಸ ಮಾಡುವ ಬಿಜೆಪಿ : ಡಾ.ಕೆ.ಪಿ.ಅಂಶುಮಂತ್ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಬಿಜೆಪಿಯವರಿಗೆ ಬದುಕಿನ ವಿಚಾರಕ್ಕಿಂತ ಜನರ ಭಾವನೆ ಕೆರಳಿಸುವ ಕೆಲಸವನ್ನೇ ಜಾಸ್ತಿ ಮಾಡಿ ಅಧಿಕಾರಕ್ಕೆ ಬಂದು ರೈತ , ಜನ ವಿರೋಧಿ ಕೆಲಸ ಮಾಡುತ್ತಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಆರೋಪಿಸಿದರು.

- ತಾಲೂಕು ಕಚೇರಿ ಎದುರು ಯುವ ಕಾಂಗ್ರೆಸ್ ನೇತೃತ್ವ ದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಬಿಜೆಪಿಯವರಿಗೆ ಬದುಕಿನ ವಿಚಾರಕ್ಕಿಂತ ಜನರ ಭಾವನೆ ಕೆರಳಿಸುವ ಕೆಲಸವನ್ನೇ ಜಾಸ್ತಿ ಮಾಡಿ ಅಧಿಕಾರಕ್ಕೆ ಬಂದು ರೈತ , ಜನ ವಿರೋಧಿ ಕೆಲಸ ಮಾಡುತ್ತಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಆರೋಪಿಸಿದರು.

ಗುರುವಾರ ತಾಲೂಕು ಕಚೇರಿ ಎದುರು ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ನಿಂದ ರಸಗೊಬ್ಬರದ ಬೆಲೆ ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ರೈತ ವಿರೋಧಿ ನಿಲುವು ಅನುಸರಿಸಿದೆ. ಪದೇ, ಪದೇ ಬಿಜೆಪಿ ಕಾಂಗ್ರೆಸ್‌ ವಿರುದ್ಧ ಅಪಪ್ರಚಾರ ಮಾಡುತ್ತಿದೆ. 100 ಸುಳ್ಳನ್ನು ಹೇಳಿ ಸತ್ಯ ಮಾಡುವ ಬುದ್ಧಿ ಬಿಜೆಪಿ ಕಲಿತಿದೆ. ಯುವ ಕಾಂಗ್ರೆಸ್‌ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಜನರಿಗೆ ಸತ್ಯ ತಿಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಸ್ತೂರಿ ರಂಗನ್‌ ವರದಿಯಿಂದ ಮಾನವ ಹಾಗೂ ಪ್ರಾಣಿಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಇದು ಬಿಜೆಪಿ ದುರಾಡಳಿತದ ಫಲವಾಗಿದೆ. ಹಿಂದಿನ ಶಾಸಕರ ತಮ್ಮ ಕರ್ತವ್ಯ ಸರಿಯಾಗಿ ನಿಭಾಯಿಸದೆ ಅನೇಕ ಅರಣ್ಯ ಕಾಯ್ದೆಗಳು ಜಾರಿಗೆ ಬಂದವು. ರೈತರನ್ನು ಭೂ ಕಳ್ಳರು ಎಂಬ ಕಾಯ್ದೆ ತಂದಿದ್ದು ಸಹ ಬಿಜೆಪಿ ಸರ್ಕಾರವೇ. ರಾವೂರು, ಲಿಂಗಾಪುರ, ಕಾನೂರು, ಮಲ್ಲಂದೂರು ಭಾಗದಲ್ಲಿ ಕಂದಾಯ ಭೂಮಿ ಅರಣ್ಯ ಆಗುವ ಹಂತ ತಲಪಿದಾಗ ಆಗ ಅಧಿಕಾರಿ ದಲ್ಲಿದ್ದ ಬಿಜೆಪಿ ಶಾಸಕರ ದ್ವನಿ ಎಲ್ಲಿ ಹೋಗಿತ್ತು ? ಎಂದು ಪ್ರಶ್ನಿಸಿದರು.

ಅನೇಕ ಅರಣ್ಯ ಕಾಯ್ದೆ, ಕಸ್ತೂರಿ ರಂಗನ್ ವರದಿಗಳ ತೀರ್ಮಾನಗಳು ಕೇಂದ್ರದ ಮಟ್ಟದಲ್ಲಿ ಆಗಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್ ಮೂಲಕ ಜಿಲ್ಲೆಯ ಅನೇಕ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ಪೆಟ್ರೋಲ್‌ ದರ ಏರಿಸಿದೆ. ರೈತರಿಗೆ ಅಗತ್ಯವಿರುವ ರಸಗೊಬ್ಬರ ಬೆಲೆ ಗಗನಕ್ಕೇರಿಸಿದೆ ಎಂದರು.

ಕೇಂದ್ರದ ಕಾಂಗ್ರೆಸ್‌ ಪಕ್ಷದ ನೇತಾರರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮಾರ್ಗದರ್ಶನ ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜನರಿಗೆ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡುತ್ತಿದ್ದಾರೆ. 5 ಗ್ಯಾರಂಟಿಗಳನ್ನು ಜನರಿಗೆ ನೀಡಿ ಆರ್ಥಿಕ ಚೈತನ್ಯ ತುಂಬಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಸಾಧನೆಗಳನ್ನು ಯುವ ಕಾಂಗ್ರೆಸ್‌ ಸದಸ್ಯರು ಗ್ರಾಮೀಣ ಭಾಗದ ಜನರಿಗೆ ತಿಳಿಸಬೇಕು. ಬಿಜೆಪಿ ಅಪಪ್ರಚಾರಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಕರೆ ನೀಡಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಜಿತ್ ಗೌಡ ದಂಡಿನಮಕ್ಕಿ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ರೈತರಿಗೆ ಕಿಸಾನ್ ಸಮ್ಮಾನ್ ಎಂದು ವರ್ಷಕ್ಕೆ 4 ಸಾವಿರ ನೀಡಿ ಹಿಂಬಾಗಿಲಿನಿಂದ ರಸಗೊಬ್ಬರ, ಔಷಧಿ, ಬಿತ್ತನೆ ಬೀಜದ ಬೆಲೆ ಏರಿಕೆ ಮಾಡಿ ರೈತರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದೆ. ಮಳೆ ಅನಿಶ್ಚಿತತೆ. ಅತಿವೃಷ್ಟಿ, ಅನಾವೃಷ್ಟಿಗಳಿಂದ ರೈತರು ಸಂಕಷ್ಠದಲ್ಲಿದ್ದಾರೆ. ಬೆಳೆ ಹಾನಿ ಮುಂತಾದ ಕಾರಣಗಳಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.ಈ ಮಧ್ಯೆ ಬಿಜೆಪಿ ಕೇಂದ್ರ ಸರ್ಕಾರ ಅವೈಜ್ಞಾನಿಕವಾಗಿ ರಸಗೊಬ್ಬರದ ಬೆಲೆ ಏರಿಕೆ ಮಾಡುತ್ತಿದೆ ಎಂದು ಟೀಕಿಸಿದರು.

ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರತನ್ ಗೌಡ ಮಾತನಾಡಿ, ಕೇಂದ್ರ ಸರ್ಕಾರ ಇಪ್ಕೋ ರಸಗೊಬ್ಬರದ ಬೆಲೆಯನ್ನು ₹1250 ರಿಂದ ₹1650 ಕ್ಕೆ , ಆರ್.ಸಿಎಫ್ ಬೆಲೆ ₹1450 ರಿಂದ ₹1650ಕ್ಕೆ , ಇಪ್ಕೋ, ಯೂರಿಯಾ, ಪೋಟ್ಯಾಸ್ ಬೆಲೆಯನ್ನು 1 ಮೂಟೆಗೆ ₹200 ರಿಂದ ₹250 ರು. ಹೆಚ್ಚಿಸಿದೆ. ಕೇಂದ್ರ ಸರ್ಕಾರ ರಸಗೊಬ್ಬರದ ಬೆಲೆ ಇಳಿಕೆ ಮಾಡದಿದ್ದರೆ ಯುವ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡಲಿದೆ. ಆದ್ದರಿಂದ ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಿ ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಿ ರಸಗೊಬ್ಬರದ ಬೆಲೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಯುವ ಕಾಂಗ್ರೆಸ್‌ ಪಕ್ಷದ ಮುಖಂಡ ಕಾರ್ತಿಕ್ ಕಾರ್ಗದ್ದೆ ಮಾತನಾಡಿ, ಕಾಂಗ್ರೆಸ್‌ ಸರ್ಕಾರದ ಪ್ರಧಾನಿ ಮನಮೋಹನ್ ಸಿಂಗ್ ಕಾಲದಲ್ಲಿ ₹375 ರು. ಇದ್ದ ಗ್ಯಾಸ್ ಬೆಲೆ ಈಗ ₹1000 ರು. ದಾಟಿದೆ. ಪ್ರಧಾನಿ ಮೋದಿ ಅಚ್ಚೇ ದಿನ್ ಎನ್ನುತ್ತಾರೆ. ನಾನು ವಿಶ್ವ ಗುರು ಎನ್ನುತ್ತಾರೆ. ಆದರೆ, ರೈತರಿಗೆ ಯಾವುದೇ ಸೌಲಭ್ಯ ನೀಡುವುದಿಲ್ಲ. ರಸಗೊಬ್ಬರ, ಪೆಟ್ರೋಲ್‌, ಡೀಸೆಲ್, ಬಂಗಾರದ ಬೆಲೆ ಗಗನಕ್ಕೇರಿದೆ. ಕೇಂದ್ರದ ಬಿಜೆಪಿ ಸರ್ಕಾರ ಧರ್ಮವನ್ನು ಮುಂದಿಟ್ಟುಕೊಂಡು ಆಡಳಿತ ನಡೆಸುತ್ತಿದೆ. ಮೋದಿ ಬರೀ ಮಾತನಾಡುವ ಕಲೆ ರೂಢಿಸಿಕೊಂಡಿದ್ದಾರೆ. ಯೋಜನೆಯೂ ಇಲ್ಲ, ಯೋಚನೆಯೂ ಇಲ್ಲ ಎಂದು ಟೀಕಿಸಿದರು.

ನಂತರ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜೇಶ್ ಬಿಳುವ, ಎಂ.ಪಿ. ಅಭಿಲಾಶ್, ಕೌಸಿಕ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬೆನ್ನಿ, ತಾಲೂಕು ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ರಘು,ಕೆಡಿಪಿ ಸದಸ್ಯ ಮಾಳೂರು ದಿಣ್ಣೆ ರಮೇಶ್, ಕಾಂಗ್ರೆಸ್ ಪಕ್ಷದ ಮುಖಂಡ ದೇವಂತರಾಜ್ ಮತ್ತಿತರರು ಇದ್ದರು.