ಸಾರಾಂಶ
ಕನ್ನಡಪ್ರಭ ವಾರ್ತೆ ಚಡಚಣ
ಸ್ಥಳೀಯ ಪಟ್ಟಣ ಪಂಚಾಯಿತಿಗೆ ಶುಕ್ರವಾರ ನಡೆದ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ವಾರ್ಡ್ ನಂ.15ರ ಬಿಜೆಪಿ ಸದಸ್ಯ ಮಲ್ಲಿಕಾರ್ಜುನ ಧೋತ್ರೆ ಅವಿರೋಧವಾಗಿ ಹಾಗೂ ಉಪಾಧ್ಯಕ್ಷರಾಗಿ ವಾರ್ಡ್ ನಂ.5ರ ಕಾಂಗ್ರೆಸ್ ಸದಸ್ಯ ಇಲಾಹಿಸಾಬ ನಧಾಪ ತಮ್ಮ ಪ್ರತಿಸ್ಪರ್ಧಿ ವಾರ್ಡ್ ನಂ.9ರ ಬಿಜೆಪಿ ಸದಸ್ಯ ಶ್ರೀಕಾಂತ ಗಂಟಗಲ್ಲಿಯನ್ನು 4 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಚಡಚಣ ತಹಸೀಲ್ದಾರ್ ಸಂಜಯ ಕುಮಾರ ಇಂಗಳೆ ಘೋಷಿಸಿದ್ದಾರೆ.ಕಳೆದ ವರ್ಷ ಡಿಸೆಂಬರ್‌ನಲ್ಲಿ ಪಪಂನ ಒಟ್ಟು 16 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ 8, 4 ಕಾಂಗ್ರೆಸ್ ಹಾಗೂ 4 ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನ ಅನುಸೂಚಿತ ಜಾತಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಅಭ್ಯರ್ಥಿಗೆ ಮೀಸಲಾಗಿತ್ತು. ಅದರಂತೆ ಕಾಂಗ್ರೆಸ್‌ನಲ್ಲಿ ಅನುಸೂಚಿತ ಜಾತಿಗೆ ಸೇರಿದ ಯಾವುದೇ ಸದಸ್ಯ ಇರದೇ ಇರುವುದರಿಂದ ಅಧ್ಯಕ್ಷ ಗದ್ದುಗೆ ಬಿಜೆಪಿ ಮಲ್ಲಿಕಾರ್ಜುನ ಧೋತ್ರೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ.
ಇನ್ನು ಉಪಾಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿ ಶ್ರೀಕಾಂತ ಗಂಟಗಲ್ಲಿ, ಕಾಂಗ್ರೆಸ್ ಇಲಾಹಿಸಾಬ ನಧಾಪ ಹಾಗೂ ಪಕ್ಷೇತರ ಸದಸ್ಯ ಚೇತನ ನಿರಾಳೆ ಸ್ಪರ್ಧಿಸಿದ್ದರು. ಆದರೆ ನಿರಾಳೆ ಕೊನೆಗಳಿಗೆಯಲ್ಲಿ ಬಿಜೆಪಿಗೆ ಬೆಂಬಲಿಸಿ ತಮ್ಮ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಚುನಾವಣೆ ನಡೆಯಿತು.ಸರಳ ಬಹುಮತಕ್ಕಾಗಿ ಬಿಜೆಪಿಗೆ ಕೇವಲ ಒಂದೇ ಮತದ ಅವಶ್ಯಕತೆ ಹಿನ್ನೆಲೆ ಸಂಸದ ರಮೇಶ್ ಜಿಗಜಿಣಗಿ ಅವರು ತಮ್ಮ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಪರ ಮತ ಚಲಾಯಿಸಲು ಆಗಮಿಸಿದ್ರು. ಅಲ್ಲದೇ ಬಿಜೆಪಿಯೂ ತನ್ನ ಅಧಿಕೃತ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ವಿಪ್ ವಿಧಿಸಿದ್ರೂ ಕೆಲವು ಸದಸ್ಯರು ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಪರ ಅಡ್ಡ ಮತದಾನ ಮಾಡಿದ್ದರಿಂದ ಇಲಾಹಿಸಾಬ ನಧಾಪ ನಿರಾಯಾಸವಾಗಿ ಜಯಗಳಿಸಿದರು. ಇದರಿಂದಾಗಿ ಸಂಸದರ ಮತ ವ್ಯರ್ಥವಾಗಿ, ಬಿಜೆಪಿಗೆ ಭಾರಿ ಮುಖಭಂಗವಾಯಿತು.
ಇದೇ ಪ್ರಥಮ ಬಾರಿಗೆ ಪಪಂ ಆಡಳಿತ ಮಂಡಳಿಯ ಚುನಾವಣೆಯಲ್ಲಿ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಹಾಗೂ ನಾಗಠಾಣ ಶಾಸಕ ವಿಠ್ಠಲ್ ಕಟಕಧೋಂಡ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತ ಚಲಾಯಿಸಿದ್ದು ವಿಶೇಷವಾಗಿತ್ತು.ಕಾರ್ಯಕರ್ತರ ಆಕ್ರೋಶ:
ಸರಳ ಬಹುಮತ ಹಾಗೂ ಇಬ್ಬರು ಪಕ್ಷೇತರ ಸದಸ್ಯರ ಬೆಂಬಲ ಬಿಜೆಪಿಗೆ ಇದ್ದರೂ ಕೂಡ ಕೆಲವು ಸದಸ್ಯರು ಬಗೆದ ದ್ರೋಹದಿಂದಾಗಿ ಉಪಾಧ್ಯಕ್ಷ ಸ್ಥಾನ ಕೈ ತಪ್ಪಿದ್ದು ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ವಿಫ್ ಉಲ್ಲಂಘಿಸಿದ ಸದಸ್ಯರ ಮೇಲೆ ಹೈಕಮಾಂಡ್ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಯಾವುದೇ ಅಹಿತಕರ ಘಟನೆ ಸಂಬಂಧಿಸಿದಂತೆ ಮುಂಜಾಗ್ರತಾವಾಗಿ ಪಟ್ಟಣದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಚಡಚಣ ಸಿಪಿಐ ಸುರೇಶ ಬೆಂಡೆಗೊಂಬಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಕೈಗೊಳ್ಳಲಾಗಿತ್ತು.