ಸಾರಾಂಶ
ಲೋಕಸಭೆ ಚುನಾವಣೆ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ಸಿನ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಕೇಂದ್ರದ ಮಾಜಿ ಸಚಿವ, ಬಿಜೆಪಿ ಮಾಜಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ವಂದೇ ಭಾರತ್ ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯನ್ನೇರಿ ಗಮನ ಸೆಳೆದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಲೋಕಸಭೆ ಚುನಾವಣೆ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ಸಿನ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಕೇಂದ್ರದ ಮಾಜಿ ಸಚಿವ, ಬಿಜೆಪಿ ಮಾಜಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ವಂದೇ ಭಾರತ್ ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯನ್ನೇರಿ ಗಮನ ಸೆಳೆದರು.ಚುನಾವಣೆ ನಂತರ ಒಂದೇ ವೇದಿಕೆಯಲ್ಲಿ ಹಾಲಿ-ಮಾಜಿ ಸಂಸದರು ಇದ್ದುದು ಸಹಜವಾಗಿಯೇ ಉಭಯ ಪಕ್ಷದವರಲ್ಲೂ ತೀವ್ರ ಕುತೂಹಲ ಕೆರಳಿಸಿತ್ತು. ಅಷ್ಟೇ ಅಲ್ಲ, ಸಂಬಂಧಿಗಳೂ ಆದ ಶಾಮನೂರು ಶಿವಶಂಕರಪ್ಪ-ಜಿ.ಎಂ.ಸಿದ್ದೇಶ್ವರ ರಾಜಕೀಯ ಜಿದ್ದಾಜಿದ್ದಿಯೂ ಇತ್ತು.
ಮಾಜಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ವೇದಿಕೆಯಲ್ಲಿ ತಮ್ಮ ಭಾಷಣದ ವೇಳೆ, ಪ್ರಧಾನಿ ನರೇಂದ್ರ ಮೋದಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ರಾಜ್ಯಕ್ಕೂ ಇನ್ನೂ ಹೆಚ್ಚಿನ ರೈಲುಗಳನ್ನು ಒದಗಿಸಲಿದ್ದಾರೆ ಎಂದರು.ನಂತರ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಮ್ಮ ಭಾಷಣದಲ್ಲಿ, ಬೆಂಗಳೂರಿನ ಮೆಟ್ರೋ ಸ್ಟೇಷನ್‌ಗೆ ರಾಜ್ಯ, ಕೇಂದ್ರ ಸರ್ಕಾರಗಳು ಎರಡೂ ಸರ್ಕಾರಗಳು ಅನುದಾನ ನೀಡಿವೆ ಎನ್ನುವ ಮೂಲಕ ಮೆಟ್ರೋ ಕಾಮಗಾರಿ ತಮ್ಮದೆಂದ ಬಿಜೆಪಿಗೆ ವೇದಿಕೆಯಲ್ಲೇ ತಿರುಗೇಟು ನೀಡಿ, ಗಮನ ಸೆಳೆದರು.
ವಂದೇ ಭಾರತ್ ಸ್ವಾಗತ ವೇಳೆ ಹೈಡ್ರಾಮಾ:ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ಭಾನುವಾರ ಮಧ್ಯಾಹ್ನ ನೂತನ ಬೆಂಗಳೂರು-ದಾವಣಗೆರೆ-ಬೆಳಗಾವಿ ವಂದೇ ಭಾರತ್ ರೈಲು ಸ್ವಾಗತಿಸಲು ಬಂದಿದ್ದ ಕಾಂಗ್ರೆಸ್, ಬಿಜೆಪಿ ಮುಖಂಡರು, ಕಾರ್ಯಕರ್ತರ ಮಧ್ಯೆ ಭಾರೀ ಹೈಡ್ರಾಮಾ ನಡೆಯಿತು.
ಬಿಜೆಪಿ ಕಾರ್ಯಕರ್ತರು ನರೇಂದ್ರ ಮೋದಿಗೆ ಜೈಕಾರ ಕೂಗಿದರು. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ಸಿನ ಕಾರ್ಯಕರ್ತರು ರಾಹುಲ್, ರಾಹುಲ್ ಎಂದು ಜಯಕಾರ ಹಾಕಿದರು. ಸಹಜವಾಗಿಯೇ ಗಲಾಟೆ, ಗದ್ದಲ ಬಯಸದ ಸಂಸದೆ ಡಾ.ಪ್ರಭಾ ಕೆಲ ಕ್ಷಣ ಮುಜುಗರ ಅನುಭವಿಸುವಂತಾಯಿತು.